ADVERTISEMENT

ಪರಿಶಿಷ್ಟರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2011, 9:20 IST
Last Updated 7 ಜೂನ್ 2011, 9:20 IST

ವಿಜಾಪುರ: ನ್ಯಾಯಮೂರ್ತಿ ರಂಗನಾಥ ಮಿಶ್ರಾ ಆಯೋಗದ ವರದಿಯನ್ನು ತಿರಸ್ಕರಿಸುವಂತೆ ಒತ್ತಾಯಿಸಿ ಪರಿಶಿಷ್ಟ ಜಾತಿಗಳ ಮೀಸಲಾತಿ ಹಿತರಕ್ಷಣಾ ವೇದಿಕೆಯವರು ಸೋಮವಾರ ಇಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿಯ ಅಂಬೇಡ್ಕರ ಚೌಕ್‌ನಲ್ಲಿ ಕೆಲಕಾಲ ಧರಣಿ ನಡೆಸಿ, ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಅಪರ ಜಿಲ್ಲಾಧಿಕಾರಿ ಜಿ.ಎಸ್. ಜಿದ್ದಿಮನಿ ಅವರಿಗೆ ಮನವಿ ಸಲ್ಲಿಸಿದರು.

ಪರಿಶಿಷ್ಟ ಜಾತಿಯವರಿಗೆ ಸಂವಿಧಾನ ಬದ್ಧವಾಗಿ ನೀಡಲಾಗುತ್ತಿರುವ ಮಿಸಲಾತಿಯನ್ನು ಕಸಿಯುವ ಹುನ್ನಾರವನ್ನು ಕೇಂದ್ರ ಯುಪಿಎ ಸರ್ಕಾರ ನಡೆಸಿದೆ. ಮತಾಂತರಗೊಂಡ ದಲಿತರಿಗೆ ಪ್ರತ್ಯೇಕ ಮೀಸಲಾತಿ ನೀಡುವಂತೆ ಈ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಈ ವರದಿ ಜಾರಿಗೆ ಬಂದರೆ ಪರಿಶಿಷ್ಟ ಜಾತಿಯವರಿಗೆ ಮೀಸಲಾತಿಯ ಪ್ರಮಾಣ ಕಡಿಮೆಯಾಗಿ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಕವಟಗಿ, ನಗರಸಭೆ ಅಧ್ಯಕ್ಷ ಪರಶುರಾಮ ರಜಪೂತ, ಬಿಜೆಪಿ ಮುಖಂಡರಾದ ಎಚ್.ಆರ್. ಮಾಚಪ್ಪನವರ, ರಾಜು ಮಗಿಮಠ, ಭೀಮಾಶಂಕರ ಹದನೂರ, ಬಸವರಾಜ ಮುಕಾರ್ತಿಹಾಳ, ಚಿದಾನಂದ ಚಲವಾದಿ, ಎಚ್.ಆರ್. ಬಿರಾದಾರ, ಸಂಗರಾಜ ದೇಸಾಯಿ, ಪ್ರಕಾಶ ಅಕ್ಕಲೋಟೆ, ಎಂ.ಎಸ್. ರುದ್ರಗೌಡರ, ಅಭಿಷೇಕ ಚಕ್ರವರ್ತಿ, ಶಿವಪುತ್ರಪ್ಪ ತಳಭಂಡಾರಿ, ನಾಗೇಂದ್ರ ಮಾಯವಂಶಿ, ಪೀರಪ್ಪ ನಡುವಿನಮನಿ, ಶರಣು ಕಾಖಂಡಕಿ ಇತರರು ಪ್ರತಿಭಟನೆಯಲ್ಲಿದ್ದರು.
ಅಹೋರಾತ್ರಿ ಧರಣಿ 7ನೇ ದಿನಕ್ಕೆ

ವಿಜಾಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜನವಾದಿ ಮಹಿಳಾ ಸಂಘ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಮತ್ತಿತರ ಸಂಘಟನೆಯವರು ಇಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಸೋಮವಾರ ಏಳನೇ ದಿನಕ್ಕೆ ಕಾಲಿಟ್ಟಿದೆ.

ನಗರಸಭೆಯ ಗುತ್ತಿಗೆ ಕಾರ್ಮಿಕರು ಮತ್ತು ಖಾಜಾ ನಗರದ ಮಹಿಳೆಯರು ಪೊರಕೆ ಹಿಡಿದು ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಿ ತಮ್ಮ ಬೇಡಿಕೆ ಈಡೇರಿಸಲು ಆಗ್ರಹಿಸಿದರು.

ಇದೇ 7ರಂದು ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಚರ್ಚಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವ ಭೀಮಶಿ ಕಲಾದಗಿ, ವಿ.ಎಂ. ಸೊನ್ನದ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.