ADVERTISEMENT

ಪಲ್ಸ್ ಪೋಲಿಯೊ: ಯಶಸ್ವಿಗೊಳಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 8:15 IST
Last Updated 14 ಫೆಬ್ರುವರಿ 2012, 8:15 IST

ಮುದ್ದೇಬಿಹಾಳ: ಇದೇ 19ರಂದು ನಡೆಯುವ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೊ ಹನಿ ಹಾಕುವ ಮೂಲಕ ಯಶಸ್ವಿಗೊಳಿಸುವಂತೆ ತಹಶೀಲ್ದಾರ ಸೋಮಲಿಂಗಪ್ಪ ಗೆಣ್ಣೂರ ಹೇಳಿದರು.

ತಹಶೀಲ್ದಾರ ಕಚೇರಿಯಲ್ಲಿ ನಡೆದ ಚಾಲನಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಇರುವ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿರುವ ಗ್ರಾಮಗಳಿಗೆ ಇದೇ 16ರಿಂದ 22ರ ವರೆಗೆ ನಿರಂತರ ವಿದ್ಯುತ್ ನೀಡುವಂತೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.

ಪಲ್ಸ ಪೋಲಿಯೊ ಕಾರ್ಯಕ್ರಮಕ್ಕಾಗಿ ವಾಹನಗಳನ್ನು ನಿಯೋಜಿಸಿದಲ್ಲಿ ತಕ್ಷಣ ಬಿಡುಗಡೆಗೊಳಿಸಬೇಕು. ಎಲ್ಲ ಶಾಲಾ ಮಕ್ಕಳಿಗೆ ಪ್ರಾರ್ಥನಾ ಸಮಯದ ನಂತರ  ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಹನಿ ಹಾಕಿಸುವಂತೆ ಪ್ರಚಾರ ಮಾಡಲು ತಿಳಿಸಿದರು. ಈ ಕುರಿತು ಜನರಲ್ಲಿ ಜಾಗೃತಿ ಮೂಡಲು ಗ್ರಾಮಗಳಲ್ಲಿ ಡಂಗುರ ಸಾರುವಂತೆ ಹಾಗೂ ಜಾಥಾ ಮಾಡುವಂತೆ ಸಹ ಅವರು ಹೇಳಿದರು.

ತಾಲ್ಲೂಕಿನ ಎಲ್ಲ ಇಲಾಖೆಗಳ ಮುಖ್ಯಸ್ಥರು ಹಾಗೂ ಅಧಿಕಾರಿಗಳು ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ವೈದ್ಯಾಧಿಕಾರಿ ಡಾ.ಅಶೋಕ ಪಟ್ಟಣಶೆಟ್ಟಿ, ತಾಲ್ಲೂಕಿನಲ್ಲಿ ಐದು ವರ್ಷದೊಳಗಿನ 42806 ಮಕ್ಕಳಿದ್ದು, ಅವರಿಗೆಲ್ಲ ಪಲ್ಸ್ ಹನಿ ಹಾಕುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ  ಎ.ಸಿ.ಡಿ.ಪಿ.ಒ ಸುಮಿತ್ರಾ ಸರಗಣಾಚಾರಿ, ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಜಿ. ಕಕ್ಕಳಮೇಲಿ, ಬಿ.ಇ.ಒ. ಎಸ್.ಬಿ. ಚಲವಾದಿ, ಹೆಸ್ಕಾಂನ ಡಬ್ಲ್ಯು.ಎ. ಜಹಾಗೀರದಾರ, ಜಿ.ಪಂ. ಎಂಜಿನಿಯರಿಂಗ್‌ನ ಪಿ.ಎಚ್. ಮ್ಯಾಗಿನಮನಿ ಮೊದಲಾದವರು ಉಪಸ್ಥಿತರಿದ್ದರು. ಹಿರಿಯ ಆರೋಗ್ಯ ಸಹಾಯಕ ಕೆ.ಬಿ. ಮಾಸ್ತಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.