ವಿಜಾಪುರ: ಬರ ಪರಿಹಾರ ಕಾರ್ಯಗಳಿಗೆ ಯಾವುದೇ ಹಣಕಾಸಿನ ಕೊರತೆಯಿಲ್ಲ, ಬೇಡಿಕೆಗೆ ಅನುಸಾರವಾಗಿ ಸರ್ಕಾರ ಜಿಲ್ಲಾಡಳಿತಕ್ಕೆ ಅನುದಾನ ಬಿಡುಗಡೆ ಮಾಡಲಿದ್ದು, ಜಿಲ್ಲಾಧಿಕಾರಿಗಳಿಗೆ ಬರ ನಿರ್ವಹಣೆಯ ಪೂರ್ಣ ಅಧಿಕಾರವನ್ನು ನೀಡಲಾಗಿದೆ.
ಜಿಲ್ಲೆಯ ಬರ ಪರಿಸ್ಥಿತಿ ಅಧ್ಯಯನಕ್ಕೆ ಮಂಗಳವಾರ ಜಿಲ್ಲೆಗೆ ಆಗಮಿಸಿದ ಸಚಿವರ ತಂಡದ ನೇತೃತ್ವ ವಹಿಸಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ ಶೆಟ್ಟರ ಈ ವಿಷಯ ತಿಳಿಸಿದರು.ಬರ ಪರಿಹಾರ ಕಾರ್ಯಗಳಿಗಾಗಿ ಈವರೆಗೆ ಸರ್ಕಾರದಿಂದ ಸಿ.ಆರ್.ಎಫ್. ಅನುದಾನದಡಿ 182 ಕೋಟಿ ರೂ. ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 172 ಕೋಟಿ ರೂ. ಸೇರಿದಂತೆ ಒಟ್ಟು 354 ಕೋಟಿ ರೂ.ಗಳನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಿದ್ದು, ವಿಜಾಪುರ ನಂತರ ಕೋಲಾರದಲ್ಲಿ ಹೆಚ್ಚು ಬರ ಪರಿಸ್ಥಿತಿ ಎದುರಾಗಿದೆ ಎಂದರು.
ಕುಡಿಯುವ ನೀರಿನ ಘಟಕಗಳಿಗೆ ಯಾವುದೇ ವಿದ್ಯುತ್ ಸಮಸ್ಯೆ ಎದುರಾಗದಂತೆ ಕ್ರಮ ವಹಿಸಬೇಕೆಂದು ಈಗಾಗಲೇ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಸ್ಥಳೀಯವಾಗಿ ಕುಡಿಯುವ ನೀರಿನ ಘಟಕಗಳಿಗೆ ತಕ್ಷಣವೇ ವಿದ್ಯುತ್ ಸಂಪರ್ಕ, ಗುಣಮಟ್ಟದ ವಿದ್ಯುತ್ ಸೇರಿದಂತೆ ಯಾವುದೇ ಲೋಪವಾಗದಂತೆ ಕ್ರಮ ತೆಗೆದುಕೊಳ್ಳಲು ನಿರ್ದೇಶನ ನೀಡಲಾಗಿದೆ ಎಂದರು.
ರಾಜ್ಯದಲ್ಲಿ 34 ಮೇವಿನ ಬ್ಯಾಂಕ್‌ಗಳನ್ನು ತೆರೆದು ಜಾನುವಾರುಗಳಿಗೆ ಅಗತ್ಯ ಮೇವಿನ ದಾಸ್ತಾನನ್ನು ಮಾಡಿಕೊಳ್ಳಲಾಗಿದೆ. ರಾಜ್ಯದಾದ್ಯಂತ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಗತ್ಯವಿದ್ದೆಡೆ ಕೆರೆ ಹೂಳೆತ್ತುವ ಕಾರ್ಯವನ್ನು ಸರ್ಕಾರ ಕೈಗೊಂಡಿದೆ.
ಸದ್ಯ ದಡದಲ್ಲಿ ಮಾತ್ರ ಹೂಳೆತ್ತಲು ಅವಕಾಶವಿದ್ದು, ಈ ಕಾರ್ಯ ಈಗಾಗಲೇ ನಡೆಸಲಾಗಿದೆ. ವಿಜಾಪುರದ ಭೂತನಾಳ ಕೆರೆ ಹೂಳೆತ್ತಲು ವಿಶೇಷ ಅನುದಾನ ಒದಗಿಸಲು ಸ್ಥಳೀಯ ಆಡಳಿತ ಮನವಿ ಮಾಡಿಕೊಂಡಿದ್ದು, ತಕ್ಷಣವೇ ಈ ಕಾರ್ಯಕ್ಕೆ ಹಣ ಬಿಡುಗಡೆ ಮಾಡಲಾಗುವುದು. ಇದರೊಂದಿಗೆ ಜಿಲ್ಲೆಯ ಅಗತ್ಯವಿರುವ ಕೆರೆಗಳ ಹೂಳೆತ್ತಲು ಕ್ರಮ ವಹಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಅತಿ ಹೆಚ್ಚು ಗೋಶಾಲೆಗಳನ್ನು ವಿಜಾಪುರದಲ್ಲಿ ತೆರೆಯ ಲಾಗಿದ್ದು, ನಂತರದ ಸ್ಥಾನದಲ್ಲಿ ಕೋಲಾರ ಜಿಲ್ಲೆ ಇದೆ. ವಿಜಾಪುರ ಜಿಲ್ಲೆಯ 10 ಗೋಶಾಲೆ ಸೇರಿದಂತೆ ರಾಜ್ಯದಲ್ಲಿ 44 ಗೋಶಾಲೆಗಳನ್ನು ತೆರೆಯಲಾಗಿದೆ ಎಂದರು.
ಜಿಲ್ಲೆಯಲ್ಲಿ ಈವರೆಗೆ ಬರ ಕಾರ್ಯಗಳಿಗಾಗಿ 11 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದ್ದು, ಇನ್ನೂ 4 ಕೋಟಿ ರೂ. ಬಿಡುಗಡೆಗೆ ಮನವಿ ಮಾಡಿಕೊಂಡಿದ್ದಾರೆ. ತಕ್ಷಣವೇ ಹಣ ಬಿಡುಗಡೆಗೆ ಕ್ರಮ ವಹಿಸ ಲಾಗುವುದು ಎಂದು ಹೇಳಿದರು.
ನಗರ ವ್ಯಾಪ್ತಿಯಲ್ಲಿ 20 ಕೊಳವೆ ಬಾವಿಗಳ ಬೇಡಿಕೆಯನ್ನು ಸಲ್ಲಿಸಿದ್ದಾರೆ. ವಿಜಾಪುರ ನಗರ ಸೇರಿದಂತೆ ಜಿಲ್ಲೆಯ ಎಲ್ಲ ಪಟ್ಟಣ, ನಗರಗಳಿಗೆ ಕುಡಿಯುವ ನೀರು, ಬರ ಪರಿಹಾರಕ್ಕೆ ಅಗತ್ಯ ಅನುದಾನ ಒದಗಿಸಲು ಕ್ರಮ ತೆಗೆದುಕೊಳ್ಳಲಾಗು ವುದು. ಈ ಕುರಿತಂತೆ ಕ್ರಿಯಾಯೋಜನೆ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಶೆಟ್ಟರ ವಿವರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಣ್ಣ ನೀರಾವರಿ ಸಚಿವರಾದ ಗೋವಿಂದ ಕಾರಜೋಳ ಅವರು, ರಾಜ್ಯದಲ್ಲಿ 3600 ಕೆರೆಗಳನ್ನು ಹೂಳೆತ್ತಲು ಗುರುತಿಸಲಾಗಿದ್ದು, ಇದಕ್ಕಾಗಿ ಒಂದು ಸಾವಿರ ಕೋಟಿ ರೂ. ಹಣವನ್ನು ಕಳೆದ ಬಜೆಟ್‌ನಲ್ಲಿ ಕಾಯ್ದಿರಿಸಲಾಗಿತ್ತು. ಮಳೆಯ ಅಭಾವದಿಂದ ಕೆರೆಗಳ ನೀರು ಬತ್ತಿರುವುದರಿಂದ ಕೆರೆ ಹೂಳೆತ್ತುವ ಕಾರ್ಯವನ್ನು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮೂಲಕ ಕೈಗೊಳ್ಳಲು ನಿರ್ದೇಶನ ನೀಡ ಲಾಗಿದೆ.
ಅಂದಾಜು 2500 ಕೆರೆಗಳ ಹೂಳೆತ್ತುವ ಕಾರ್ಯ ವನ್ನು ಈ ವರ್ಷ ಕೈಗೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ವಿವರಣೆ: ಇದಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲೆಯ ಬರ ಪರಿಸ್ಥಿತಿಯ ವಿವರ, ಪರಿಹಾರ ಕಾರ್ಯಗಳ ಕುರಿತಂತೆ ಜಿಲ್ಲಾಧಿಕಾರಿಗಳು ಸಚಿವರ ತಂಡಕ್ಕೆ ವಿವರಿಸಿದರು.
ಡೋಣಿ ನದಿ ಹೂಳೆತ್ತುವುದು, ಕುಡಿಯುವ ನೀರಿಗಾಗಿ ಮಹಾರಾಷ್ಟ್ರ ರಾಜ್ಯದಿಂದ ಕೃಷ್ಣಾ ಮತ್ತು ಭೀಮಾ ನದಿಗೆ ನೀರು ಹರಿಸುವುದು, ಸ್ಥಳೀಯ ಸಂಸ್ಥೆಗಳಿಗೆ ವಿಶೇಷ ಅನುದಾನ ಒದಗಿಸುವುದು, ಬೆಳೆ ಹಾನಿ, ಕೆರೆಗಳ ಪುನರುಜ್ಜೀವನ, ಗುಣಮಟ್ಟದ ವಿದ್ಯುತ್ ಪೂರೈಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸಲ್ಲಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ವಿವಿಧ ಶಾಸಕರುಗಳು ಬರ ಪರಿಹಾರ ಕಾರ್ಯಗಳ ಕುರಿತಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಸಚಿವರ ತಂಡಕ್ಕೆ ಮನವರಿಕೆ ಮಾಡಿಕೊಟ್ಟರು.
ತಂಡದಿಂದ ಪರಿಶೀಲನೆ: ಸಚಿವರ ತಂಡ ನಗರದ ಹೊರವಲಯದಲ್ಲಿರುವ ಭೂತನಾಳ ಕೆರೆ, ಭೂತನಾಳ ತಾಂಡಾ, ಅರಕೇರಿ ಗ್ರಾಮದ ಗೋಶಾಲೆ, ಡೊಮನಾಳ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೊಂಡಿರುವ ಕಾಮಗಾರಿ, ಹೊರ್ತಿ ಗ್ರಾಮದ ನೀರು ಸರಬರಾಜು, ದೇಗಿನಾಳ ಗ್ರಾಮದಲ್ಲಿ ಕೈಗೊಂಡಿರುವ ಸಣ್ಣ ನೀರಾವರಿ ಇಲಾಖೆಯ ಕೆರೆ ಕಾಮಗಾರಿ, ಹಡಲಸಂಗ ಗ್ರಾಮದ ಕುಡಿಯುವ ನೀರಿನ ಪೂರೈಕೆ, ಕಾತ್ರಾಳ ಗ್ರಾಮದ ಗೋಶಾಲೆ, ಜಿಗಜಿವಣಿ ಗ್ರಾಮದ ಕೆರೆ ಕಾಮಗಾರಿ ಪರಿಶೀಲನೆ ನಡೆಸಿತು.
ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ, ಸಣ್ಣ ನೀರಾವರಿ ಸಚಿವ ಗೋವಿಂದ ಕಾರಜೋಳ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ವಿಠ್ಠಲ ಕಟಕಧೋಂಡ, ರಮೇಶ ಭೂಸನೂರ, ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಪಶು ಸಂಗೋಪನೆ ಇಲಾಖೆ ರಾಜ್ಯ ಆಯುಕ್ತರಾದ ಆದೋನಿ ಸಯ್ಯದ್ ಸಲೀಮ್, ಜಿಲ್ಲಾಧಿಕಾರಿ ಶಿವಯೋಗಿ ಕಳಸದ, ಜಿ.ಪಂ. ಸಿಇಒ ಎ.ಎನ್.ಪಾಟೀಲ, ಜಿಲ್ಲಾ ಎಸ್‌ಪಿ ಡಾ. ಡಿ.ಸಿ.ರಾಜಪ್ಪ, ಇತರ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.