ಆಲಮಟ್ಟಿ: ಕೆಬಿಜೆಎನ್‌ಎಲ್‌ನ ವಿವಿಧ ಕಾಮಗಾರಿಗಳ ನಿರ್ವಹಿಸುವ ಗುತ್ತಿಗೆದಾರರ ಸಂಘ ತಮ್ಮ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ ಅಧಿಕಾರಿಗಳಿಗೆ ಇತ್ತೀಚೆಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸಿ.ಬಿ. ಅಸ್ಕಿ, ಚಿಮ್ಮಲಗಿ ಏತ ನೀರಾವರಿ ಯೋಜನೆ ಹಾಗೂ ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ವಿವಿಧ ಸುಮಾರು 105 ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಸಮರ್ಪಕವಾಗಿ ಬಿಲ್ ಪಾವತಿಯಾಗಿಲ್ಲ. ವಿತರಣಾ ಕಾಲುವೆಯಲ್ಲಿ ಕೈಗೊಳ್ಳಲಾದ ಕಾಮಗಾರಿ ಬಿಲ್ ಪಾವತಿಸಬೇಕು, ವಿವಿಧ ಕಾಮಗಾರಿಗಳ ಇಎಂಡಿಯನ್ನು ಮರಳಿಸಬೇಕು, ಕೆಬಿಜೆಎನ್‌ಎಲ್ ಕಾಮಗಾರಿ ಸಮರ್ಪಕ ಅನುಷ್ಠಾನಕ್ಕೆ ಸುಲಭ ಮರಳು ನೀತಿಯನ್ನು ಅನುಸರಿಸಬೇಕು ಎಂದರು.
ಮುಖ್ಯ ಕಾಲುವೆಗಳಿಗೆ ದೊಡ್ಡ ಮೊತ್ತದ ಪ್ಯಾಕೇಜ್‌ಗಳನ್ನು ರದ್ದುಗೊಳಿಸಿ ಪ್ರತಿ 5 ಕಿ.ಮೀಗಳಂತೆ ಟೆಂಡರ್ ಕರೆದು ಕಾಮಗಾರಿ ತ್ವರಿತಗತಿಯಲ್ಲಿ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು, ₨ 20 ಲಕ್ಷದೊಳಗಿನ ಕಾಮಗಾರಿಗೆ ಗುತ್ತಿಗೆ ಪಡೆಯಲು ಹಾಕಲಾಗುವ ಷರತ್ತು ರದ್ದುಗೊಳಿಸಬೇಕು, ಭೂಸ್ವಾಧೀನ ಸೇರಿದಂತೆ ಯಾವುದೇ ಕಾರಣಕ್ಕೆ ಕಾಮಗಾರಿ ನಡೆಯದಿದ್ದರೇ, ಗುತ್ತಿಗೆದಾರರು ಪಾವತಿಸುವ ಎಪಿಎಸ್ ಹಣ ಮರಳಿಸಬೇಕು ಎಂದರು.
ಗುತ್ತಿಗೆದಾರರ ಸಂಘದ ಸ್ಥಳೀಯ ಶಾಖೆಯ ಪ್ರಧಾನ ಕಾರ್ಯದರ್ಶಿ ಗಿರೀಶ ಮರೋಳ ಮಾತನಾಡಿ, ಸದ್ಯ ಚಲಾವಣೆಯಲ್ಲಿರುವ ₨ 5 ಲಕ್ಷ ವರೆಗಿನೆ ಮೊತ್ತದ ಮ್ಯಾನ್ಯುವೆಲ್ ಪದ್ದತಿಯನ್ನು ₨ 10 ಲಕ್ಷದವರೆಗೆ ಏರಿಸಬೇಕು ಎಂದರು. ಅಧೀಕ್ಷಕ ಎಂಜಿನಿಯರ್ ಎಸ್.ಎಚ್.ಮಂಜಪ್ಪ ಮನವಿ ಸ್ವೀಕರಿಸಿ, ಕೆಲವನ್ನು ಇಲ್ಲಿಯೇ ಇತ್ಯರ್ಥಪಡಿಸುವ ಭರವಸೆ ನೀಡಿದರು.
ಉಪಮುಖ್ಯ ಎಂಜಿನಿಯರ್ ಎಸ್.ಎಲ್.ತೆಲಗಿ ಇದ್ದರು. ಸಂಘದ ಉಪಾಧ್ಯಕ್ಷ ಗೋಪಾಲ ವಡ್ಡರ, ಶಂಕರ ಜಲ್ಲಿ, ಹನುಮಂತ ಬೆಳಗಲ್, ಎಂ.ಎನ್.ಮದರಿ, ಸಿ.ಎಸ್.ಮಾಳಿ, ವಿ.ಎಂ. ಹಿರೇಮಠ, ಬಸವರಾಜ ಬಾದರದಿನ್ನಿ, ಎಚ್.ಎಂ.ನಾಯಕ, ಮೋಹನ ಹಿರೇಗೌಡರ, ಬಿ.ಪಿ.ರಾಠೋಡ, ಎಸ್.ಎಲ್. ಲಮಾಣಿ, ಎಚ್.ಬಿ.ಸಂಗಮ, ಎಚ್.ಟಿ. ಕುರಿ ಸೇರಿದಂತೆ ನೂರಾರು ಗುತ್ತಿಗೆದಾರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.