ADVERTISEMENT

ಭೀಕರ ಬರ: ಒಣಗಿದ ದ್ರಾಕ್ಷಿ, ದಾಳಿಂಬೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2012, 9:10 IST
Last Updated 25 ಏಪ್ರಿಲ್ 2012, 9:10 IST
ಭೀಕರ ಬರ: ಒಣಗಿದ ದ್ರಾಕ್ಷಿ, ದಾಳಿಂಬೆ
ಭೀಕರ ಬರ: ಒಣಗಿದ ದ್ರಾಕ್ಷಿ, ದಾಳಿಂಬೆ   

ಇಂಡಿ: ಭೀಕರ ಬರಗಾಲದಿಂದ ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಗಳಾದ ನಿಂಬೆ, ದ್ರಾಕ್ಷಿ, ದಾಳಿಂಬೆ ಬಿಸಿಲಿನ ತಾಪ ಮತ್ತು ತೇವಾಂಶದ ಕೊರತೆಯಿಂದ ಒಣಗಿ ಹೋಗುತ್ತಿವೆ. ಇದುವರೆಗೆ ಕಷ್ಟಪಟ್ಟು ಬೆಳೆಸಿದ ರೈತರು ಬೆಳೆ ಉಳಿಸಿಕೊಳ್ಳಲು ಹರ ಸಾಹಸ ಮಾಡುತ್ತಿದ್ದಾರೆ.

ಬೆಳೆ ರಕ್ಷಣೆಗಾಗಿ ಕೆಲವು ರೈತರು ಸುಮಾರು 5ರಿಂದ 10 ಕಿಲೋ ಮೀಟರ್ ದೂರದಿಂದ ಟ್ಯಾಂಕರ್ ಮೂಲಕ ತಂದು ನೀರನ್ನು ಉಣಿಸಿಸುತ್ತಿದ್ದಾರೆ. ಆದರೆ ಕಳೆದೆರಡು ವಾರದಿಂದ ಹನಿ ನೀರಿಗಾಗಿಯೂ ಪರಿತಪಿಸುವ ದುಃಸ್ಥಿತಿ ಎದುರಾಗಿದೆ. ಹೆಚ್ಚುತ್ತಿರುವ ಬಿಸಿಲ ತಾಪಕ್ಕೆ ಬೆಳೆಗೆ ಉಣಿಸುತ್ತಿರುವ ನೀರು ಎರಡು ದಿನಕ್ಕೂ ಸಾಕಾಗುತ್ತಿಲ್ಲ. ರೈತರು ಕೈಚೆಲ್ಲಿ ಕುಳಿತಿದ್ದಾರೆ. ಹೀಗಾಗಿ ಬೆಳೆ ಒಣಗುದ್ದು, ರೈತರು ಹತಾಶರಾಗಿದ್ದಾರೆ. ದಿನದಿನಕ್ಕೂ ರೈತರಲ್ಲಿ ಆತಂಕ ಕಾಡುತ್ತಿದೆ.

ತಡವಲಗಾ ಗ್ರಾಮದ ಕಲ್ಲಪ್ಪ ಹರಣಿ ಅವರ ತೋಟದಲ್ಲಿದ್ದ 4 ಎಕರೆ ದ್ರಾಕ್ಷಿ ಬೆಳೆ ತೇವಾಂಶದ ಕೊರತೆಯಿಂದ ಸಂಪೂರ್ಣ ಒಣಗಿದೆ. ಮತ್ತೆ ಬೆಳೆಸಲು ಲಕ್ಷಗಟ್ಟಲೆ ಹಣದ ಜೊತೆಗೆ ಇದುವರೆಗೆ ಮಾಡಿದ ಶ್ರಮವೂ ವ್ಯರ್ಥವಾಗುತ್ತಿದೆ. ಕಲ್ಲಪ್ಪ ಮಾತ್ರವಲ್ಲ, ಶಂಕ್ರಪ್ಪ, ದೇವಪ್ಪ, ಬಿರಾದಾರ, ಭೀಮರಾಯ ಮತ್ತಿತರರ ಜಮೀನಿನಲ್ಲಿಯೂ ದ್ರಾಕ್ಷಿ, ನಿಂಬೆ, ದಾಳಿಂಬೆ ಬೆಳೆಗಳು ಒಣಗಿ ಹಾಳಾಗಿವೆ. ಒಣಗಿದ ಗಿಡಗಳನ್ನು ರೈತರು ಕಡಿದು ಉರುವಲಿಗೆ ಬಳಸುತ್ತಿದ್ದಾರೆ.

ತಾಲ್ಲೂಕಿನ ಹೋರ್ತಿ, ಹಳಗುಣಕಿ, ರೂಗಿ, ಬೋಳೇಗಾಂವ, ಅಥರ್ಗಾ, ಝಳಕಿ, ಏಳಗಿ, ಲೋಣಿ, ಹಲಸಂಗಿ, ಸಾಲೋಟಗಿ, ಶಿರಶ್ಯಾಡ, ಶಿಗಣಾಪುರ, ಹಾಲಹಳ್ಳಿ, ಬರಡೋಲ, ಇಂಚಗೇರಿ, ಲಿಂಗದಳ್ಳಿ, ದುಮಕನಾಳ, ದೇವರನಿಂಬರಗಿ, ಗೋಡಿಹಾಳ, ಹಡಲಸಂಗ, ಗಣವಲಗಾ,ಕಾತ್ರಾಳ, ಕೊಳೂರಗಿ ಮುಂತಾದ ಗ್ರಾಮಗಳ ರೈತರೂ ಸಹ ಒಣಗುತ್ತಿರುವ ಬೆಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆಗಾಗಿ ಮಾಡಿದ್ದ ಲಕ್ಷಗಟ್ಟಲೆ ಸಾಲದ ಹೊರೆಯೂ ಮೈಮೇಲೆ ಬಿದ್ದಿದ್ದು, ರೈತರನ್ನು ಮತ್ತಷ್ಟು ಇಕ್ಕಟ್ಟಾಗಿದೆ.

ಬೆಳೆ ರಕ್ಷಣೆಗಾಗಿ ಸರಕಾರ ಹೊಸ ಯೋಜನೆ ರೂಪಿಸಬೇಕು. ದೀರ್ಘಕಾಲದ ತೋಟಗಾರಿಕಾ ಬೆಳೆಗಳು ಒಣಗಿದರೆ ತಾಲ್ಲೂಕಿನ ಸಾವಿರಾರು ರೈತರು ಸಂಕಷ್ಟದಲ್ಲಿ ಸಿಲುಕುವರು. ಹತ್ತಾರು ವರ್ಷಗಳಿಂದ ಜೋಪಾನ ಮಾಡಿ ಬೆಳೆಸಿದ ತೋಟದ ಬೆಳೆಗಳು ನಾಶ ಹೊಂದಿದರೆ ಮುಂದಿನ 5 ವರ್ಷಗಳವರೆಗೆ ಪರಿತಪಿಸ ಬೇಕಾಗುತ್ತದೆ. ಕಾರಣ ಸರಕಾರ ರೈತರ ಸಂಕಷ್ಟಕ್ಕೆ ಪರಿಹಾರ ನೀಡಬೇಕು ಎಂದು ಜೆಡಿಎಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಶ್ರೀಪತಿಗೌಡ ಬಿರಾದಾರ ಸರಕಾರಕ್ಕೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.