ADVERTISEMENT

ಭೂರಿ ಭೋಜನ ಅರಗಿಸಲು ಕೋಲ್ಕತಾ ಬೀಡ!

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 6:09 IST
Last Updated 2 ಜನವರಿ 2014, 6:09 IST

ತಾಳಿಕೋಟೆ: ಪಟ್ಟಣದಲ್ಲಿ ಎಳ್ಳ ಅಮಾವಾಸ್ಯೆಯ ಸಂಭ್ರಮ ಕಂಡುಬಂತು.  ಸಿಂಗರಿಸಿದ ಎತ್ತಿನ ಬಂಡಿಗಳು ಕಡಿಮೆ­ಯಾಗುತ್ತಿದ್ದರೂ ಜಮೀನುಗಳಿಗೆ ಹೋಗಿ ಚರಗ ಚೆಲ್ಲುವ ಉತ್ಸಾಹಕ್ಕೆ ಮಾತ್ರ ಬರ ಬರಲಿಲ್ಲ. ಹತ್ತಿರ ಹೊಲದವರು ಕಾಲ್ನಡಿಗೆಯಲ್ಲಿ ಚರಗದ ಬುತ್ತಿ ಹೊತ್ತು ನಡೆದರೆ ಅನುಕೂಲಸ್ಥರು ತಮ್ಮ ವಾಹನಗಳಲ್ಲಿ, ದ್ವಿಚಕ್ರ ವಾಹನಗಳಲ್ಲಿ, ಟಂ–ಟಂ, ಟ್ರ್ಯಾಕ್ಟರ್‌ಗಳಲ್ಲಿ ಹೋಗುತ್ತಿದ್ದುದು ಸಾಮಾನ್ಯ ದೃಶ್ಯ­ವಾಗಿತ್ತು.

ಅದಕ್ಕಾಗಿ ಮಧ್ಯಾಹ್ನ ಪಟ್ಟಣದ ಅಂಗಡಿ ಮುಂಗಟ್ಟುಗಳೆಲ್ಲ ಮುಚ್ಚಿ ತಮ್ಮ ಜಮೀನುಗಳಿಗೋ ಬಂಧು–ಮಿತ್ರರ ಜಮೀನುಗಳಿಗೋ ತೆರಳಿದ್ದರಿಂದ ಪಟ್ಟಣದಲ್ಲಿ ಬುಧವಾರ ಅಘೋಷಿತ ಬಂದ್‌ ವಾತಾವರಣ ಉಂಟಾಗಿತ್ತು. ಜನಸಂದಣಿಯಿಂದ ಗಿಜಿಗುಡುತ್ತಿದ್ದ ಬಸ್‌ ನಿಲ್ದಾಣ, ಪಟ್ಟಣದ ರಸ್ತೆಗಳು, ಮಧ್ಯಾಹ್ನ ಬಿಕೋ ಎನ್ನುತ್ತಿದ್ದವು.

ಈ ಬಾರಿ ಇಲ್ಲಿ ಉತ್ತಮ ಮಳೆಯ ಕಾರಣ ಬೆಳೆಗಳು ಹಚ್ಚ ಹಸಿರಾಗಿವೆ. ಇದಕ್ಕೆ ಇಂಬುಗೊಂಡಂತೆ ಕೊರೆವ ಚಳಿ, ಮಂಜು, ಜಮೀನುಗಳಲ್ಲಿನ ಜೋಳ, ಹತ್ತಿ, ಗೋದಿ ಕಡಲೆಯನ್ನು ಮಿರಿ–ಮಿರಿಮಿಂಚುವಂತೆ ಮಾಡಿವೆ. ತೊಗರಿ ಬಿತ್ತನೆ ಮಾಡಿದ ಹೆಚ್ಚಿನ ಜಮೀನು­ಗಳು ಫಸಲು ಹಣ್ಣಾಗಿ ರಾಶಿ ಮಾಡಿಕೊಂಡು ಬೊಳು–ಬೊಳು ಎನಿಸುತ್ತಿದ್ದರೆ. ಕಪ್ಪು ಆಕಾಶದಲ್ಲಿ ನಕ್ಷತ್ರಗಳು ಮಿನುಗಿದಂತೆ ಕಪ್ಪು ಭೂಮಿಯಲ್ಲಿ ಕಾಯಿ­ಬಿಚ್ಚಿದ ಶುಭ್ರ ಬೆಳ್ಳನೆಯ ಹತ್ತಿ ನಗುತ್ತಿದೆ.

ತಲೆಎತ್ತಿನಿಂತ ಜೋಳ–ಹತ್ತಿಗಿಡಗಳ ಮಧ್ಯೆ ನಡೆಯುವುದೇ ಒಂದು ಸಂಭ್ರಮ. ಪ್ರತಿ ರೈತ ಇಂದು ಜಮೀನುಗಳಲ್ಲಿ ಇರುವ ಬನ್ನಿಮರವನ್ನು ಬೆಳೆಯನ್ನು ಅನ್ನ ನೀಡುವ  ಭೂತಾಯಿಯನ್ನು ಪೂಜಿಸಿ ತನ್ನ ಕೃತಜ್ಞತೆ ಅರ್ಪಿಸುತ್ತಾನೆ. ಪ್ರತಿವರ್ಷದಂತೆ ಈ ಬಾರಿಯೂ ಪಟ್ಟಣದ ಹೆಸರಾಂತ ಬಟ್ಟೆ ವ್ಯಾಪಾರಿಗಳಾದ ಶ್ರೀಲಕ್ಷ್ಮೀ ಬಟ್ಟೆ­(ಸಂದಿ)ಅಂಗಡಿಯ ಮಾಲೀಕರಾದ ಪರಶುರಾಮ ಹಂಚಾಟೆ, ಸಹೋದರರಾದ ರಾಜು, ಸಂಜು ಹಾಗೂ ಕುಟುಂಬದವರು ಮತ್ತು ನೂರಾರು ಬಂಧು–ಮಿತ್ರರನ್ನು ಜಮೀನಿಗೆ ಕರೆದೊಯ್ದು ಪ್ರೀತಿಯ ಭೋಜನ ನೀಡಿದರು, ಎಳ್ಳು ಹಚ್ಚಿದ ಗರಿಗರಿ ಸೆಜ್ಜೆರೊಟ್ಟಿ ಅದಕ್ಕೆ ಎಣ್ಣೆ ಹಾಕಿದ ಬದನೆಕಾಯಿ, ವಿವಿಧ ಬಗೆಯ ಕಾಳುಗಳು, ಪುಂಡಿಪಲ್ಲೆ, ವಿಶೇಷ ಖಾದ್ಯ ಬರ್ತ, ಮೊಸರು,ಶೇಂಗಾ ಚಟ್ನಿ ಕಾರೆಳ್ಳು ಚಟ್ನಿ, ಕರಿಗೆಡಬು,  ಸೆಜ್ಜಿಕಡಬು, ಸೆಂಗಾ ಹೋಳಿಗೆ, ಹೂರಣದ ಹೋಳಿಗೆ, ತುಪ್ಪ, ಸಂಡಿಗೆ, ಅನ್ನ, ಕಟ್ಟಿನ ಸಾರು ಮೊದಲಾದ ಭಕ್ಷ್ಯಗಳ ಸುವಾಸನೆ ಘಮ್ಮೆನ್ನುತ್ತ ಉದರ ಸೇರುತ್ತಿದ್ದರೆ ಉಂಡ ಮೇಲೆ ಮೇಲೇಳುವುದು ಕಷ್ಟವೆನಿಸಿತ್ತು. ಹೊಟ್ಟೆಯುಬ್ಬರ ಕಡಿಮೆಯಾಗಲು ಈ ಬಾರಿ ವಿಶೇಷವಾಗಿ ತರಿಸಿದ್ದ ಕೋಲ್ಕತಾ ಬೀಡಾ ಪಡೆದು ಮನೆಗಳಿಗೆ ಜಮೀನಿನಲ್ಲಿ ಬೆಳೆದ ಸುಲು­ಗಾಯಿ(ಹಸಿಕಡಲೆ) ಪಡೆದು ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT