ADVERTISEMENT

ಮಳೆ ನಿಂತು ಹೋದ ಮೇಲೆ...

ಚಂದ್ರಶೇಖರ ಕೊಳೇಕರ
Published 11 ಸೆಪ್ಟೆಂಬರ್ 2011, 7:00 IST
Last Updated 11 ಸೆಪ್ಟೆಂಬರ್ 2011, 7:00 IST
ಮಳೆ ನಿಂತು ಹೋದ ಮೇಲೆ...
ಮಳೆ ನಿಂತು ಹೋದ ಮೇಲೆ...   

ಆಲಮಟ್ಟಿ: ಕಳೆದ ವಾರದಿಂದ ಕೃಷ್ಣಾ ತೀರದಲ್ಲಿ ಭಾರಿ ಸಂಚಲನ ಮೂಡಿಸಿದ ಕೃಷ್ಣೆಯ ಅಬ್ಬರ ಕಡಿಮೆಯಾಗಿದ್ದು, ಇನ್ನೂ ರೋಗ ರುಜಿನಗಳು, ಸಾಂಕ್ರಾಮಿಕ ರೋಗಗಳು ವ್ಯಾಪಕಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ವಾರದಿಂದ ಆಲಮಟ್ಟಿ ಜಲಾಶಯದಿಂದ ಬಿಟ್ಟ ಭಾರಿ ಪ್ರಮಾಣದ ನೀರಿನಿಂದಾಗಿ ಕೃಷ್ಣಾ ತೀರದ ಗ್ರಾಮಗಳಾದ ವಿಜಾಪುರ ಜಿಲ್ಲೆಯ ಅರಳದಿನ್ನಿ, ಯಲಗೂರ, ಕಾಶೀನಕುಂಟಿ, ಯಲ್ಲಮ್ಮನಬೂದಿಹಾಳ, ಹೊಳೆ ಮಸೂತಿ, ಬಾಗಲಕೋಟೆ ಜಿಲ್ಲೆಯ ದಂಡೆಗಳಾದ ನಾಗಸಂಪಿಗೆ, ಡೋಮನಾಳ, ನಾಯನೇಗಲಿ, ಮನ್ನೊಳ್ಳಿ ಮೊದಲಾದ ಕೃಷ್ಣಾ ತೀರದ ಗ್ರಾಮಗಳ ಬಹುತೇಕ ಜಮೀನು ಕೃಷ್ಣೆಯ ನೀರು ಆವರಿಸಿತ್ತು. ಇದರಿಂದಾಗಿ ನೆರೆಯ ಆತಂಕದಲ್ಲಿಯೇ ಕಾಲದೂಡಿದ ರೈತರ ಬದುಕನ್ನು ಮೂರಾಬಟ್ಟೆ ಮಾಡಿದೆ.

ಈಗ ಕೃಷ್ಣಾ ನದಿಯ ನೀರು ಜಮೀನುಗಳಿಂದ ಹೊರಟು ಹೋಗಿದೆ. ಆದರೇ ಮಣ್ಣು ಸಂಪೂರ್ಣ ಹಸಿಯಾಗಿ ಜಿಗಿಯಾಗಿ ಅರಲು ರೀತಿಯಾಗಿ ಪರಿವರ್ತನೆಗೊಳ್ಳುತ್ತಿದೆ. ಹೆಚ್ಚು ಹುದುಲು (ವ್ಯಾಪಕ ಹಸಿ ಮಣ್ಣು) ಆಗಿದೆ. ಅಲ್ಲಿ ಬೆಳೆದ ಬೆಳೆಗಳಾದ ಸಜ್ಜೆ,  ಸೂರ್ಯಕಾಂತಿ, ಮೆಕ್ಕೆಜೋಳಗಳು ಕೊಳೆಯಲು ಆರಂಭಿಸಿವೆ. ಆದರೇ ಕಬ್ಬು ಬೆಳೆಗೆ ಏನೂ ಆಗಿಲ್ಲ. ಈ ಸ್ಥಿತಿಯಲ್ಲಿಯೇ ಮಳೆ ಆಗದೇ ಬಿಸಿಲು ಹೆಚ್ಚಿದ್ದು ರೈತರಲ್ಲಿ ಸಮಾಧಾನ ತಂದಿದೆ.

ಹೊಳೆ ಮಸೂತಿ ಗ್ರಾಮದ ಸನೀಹಕ್ಕೆ ಆವರಿಸಿದ ಕೃಷ್ಣೆಯಿಂದಾಗಿ ವಿಷಜಂತುಗಳ ಬಾಧೆಯು ಗ್ರಾಮದಲ್ಲಿ ವ್ಯಾಪಕಗೊಂಡಿದೆ. ಮಲೇರಿಯಾ ಹಾಗೂ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಾಗಿದೆ.

`ಕೃಷ್ಣಾ ತೀರ ವ್ಯಾಪ್ತಿ ಹೊಂದಿರುವ ಆಲಮಟ್ಟಿಯ ಕಷ್ಣಾ ಭಾಗ್ಯ ಜಲ ನಿಗಮದ ಮಲೇರಿಯಾ ನಿಯಂತ್ರಣ ಘಟಕದವರು ಶೀಘ್ರವೇ ಮಲೇರಿಯಾ ನಿಯಂತ್ರಣ ಔಷಧ ಸಿಂಪಡಿಸಬೇಕಾಗಿದೆ. ಫಾಗಿಂಗ್ ಮಾಡಿ ಸಾಂಕ್ರಾಮಿಕ ರೋಗ ಉಲ್ಬಣಿಸದಂತೆ ತಡೆಗಟ್ಟಬೇಕಾಗಿದೆ~ ಎಂದು ರೈತ ಅಯಪ್ಪ ಚನಗೊಂಡ ಒತ್ತಾಯಿಸಿದರು.

ಸವುಳು-ಜವುಳು: `ಒಂದೆಡೆ ಕೃಷ್ಣಾ ನದಿಯ ನೀರು ಬಂದು ನಿಲ್ಲುವಿಕೆ, ಇನ್ನೊಂದೆಡೆ ಆಲಮಟ್ಟಿ ಎಡದಂಡೆ ಕಾಲುವೆಯ ನೀರಿನಿಂದಾಗಿ ತಮ್ಮ ಜಮೀನುಗಳು ಸವುಳಿಗೆ ತುತ್ತಾಗುತ್ತಿವೆ. ಇನ್ನೆರೆಡು ವರ್ಷಗಳಲ್ಲಿ ತಮ್ಮ ಜಮೀನುಗಳು ಸಂಪೂರ್ಣ ಸವುಳು-ಜವುಳಿಗೆ ತುತ್ತಾಗಲಿವೆ ಎಂಬ ಆತಂಕ ಯಲಗೂರದ ರೈತರದ್ದಾಗಿದೆ~ ಎಂದು ಗೋಪಾಲ ಗದ್ದನಕೇರಿ ತಿಳಿಸಿದರು.

ಮೀನುಗಾರರ ಸಮಸ್ಯೆ: ಕೃಷ್ಣಾ ತೀರದ ಮೀನುಗಾರರ ಬಲೆ, ತೆಪ್ಪ ಹಾಗೂ ಕೆಲ ಸಲಕರಣೆಗಳು ಕೂಡಾ ಕೃಷ್ಣೆಯ ಅಬ್ಬರಕ್ಕೆ ಕೊಚ್ಚಿ ಹೋಗಿವೆ. ಅವರು ವಾರದಿಂದ ಯಾವುದೇ ಮೀನುಗಾರಿಕೆ ಚಟುವಟಿಕೆ ನಡೆಸಿಲ್ಲ. ಹೀಗಾಗಿ ಅವರಿಗೂ ಪರಿಹಾರ ನೀಡಬೇಕು ಎಂದು ಭೀಮಪ್ಪಾ ಕೊಳ್ಳಾರ ಅವರ ಬೇಡಿಕೆ.

ಕೃಷ್ಣಾ ತೀರದ ಜನತೆ ನೀರಾವರಿಗೆ ನದಿ ತೀರದಲ್ಲಿ ಪಂಪ್‌ಸೆಟ್ ಜೋಡಿಸಿರುತ್ತಾರೆ. ಅದಲ್ಲದೇ ಜಮೀನಿನಲ್ಲಿಯೂ ಪಂಪ್‌ಸೆಟ್ ಇಟ್ಟಿರುತ್ತಾರೆ. ಈ ರೀತಿ ಈ ಭಾಗದಲ್ಲಿ 40 ಕ್ಕೂ ಹೆಚ್ಚು ಮೋಟಾರ್ ಪಂಪ್‌ಸೆಟ್‌ಗಳು ಜಲಾವೃತಗೊಂಡಿವೆ.

ಸಮರ್ಪಕ ಮಾರ್ಗ ಅನುಸರಿಸಿ: ಆಲಮಟ್ಟಿ ಜಲಾಶಯದಿಂದ ನೀರು ಬಿಡುವಲ್ಲಿ ವೈಜ್ಞಾನಿಕ ಮಾರ್ಗ ಅನುಸರಿಸಿ, ಕ್ರಮೇಣ ಹಂತ ಹಂತವಾಗಿ ನೀರು ಹರಿಸಿ ಕೃಷ್ಣಾ ತೀರದಲ್ಲಿ ಪ್ರವಾಹ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು.

ಇಲ್ಲದಿದ್ದರೇ ಆಲಮಟ್ಟಿ ಜಲಾಶಯದ ಮುಂಭಾಗ, ನಾರಾಯಣಪುರ ಜಲಾಶಯದ ಹಿಂಭಾಗದಲ್ಲಿರುವ ಈ ಜಮೀನುಗಳನ್ನು ಶಾಶ್ವತ ಮುಳುಗಡೆ ಪ್ರದೇಶ ಎಂದು ಘೋಷಿಸಿ ಪರಿಹಾರ ನೀಡಬೇಕಾಗಿದೆ. ಆ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು. ಒಟ್ಟಾರೇ ಪ್ರತಿವರ್ಷವೂ ಕೃಷ್ಣಾ ತೀರದ ರೈತರ ಬದುಕನ್ನು ಮೂರಾಬಟ್ಟೆ ಮಾಡುವ ಪ್ರವಾಹ ಈ ಬಾರಿ ಹೆಚ್ಚಳವಾಗಿದೆ. ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸಬೇಕಾಗಿದೆ ರೈತ ಸಂಗಪ್ಪ ತುಬಾಕಿ ಆಗ್ರಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.