ADVERTISEMENT

ಮೀಸಲಾತಿ ಮುಚ್ಚಿದರೆ ಸರ್ಕಾರ ಬೀಳುತ್ತದೆ

ಬಿಜೆಪಿ ಅತಿ ಹೆಚ್ಚು ಸ್ಥಾನ ಗಳಿಕೆ ಖಚಿತ : ಕೇಂದ್ರ ಸಚಿವ ರಮೇಶ ಜಿಗಜಿಣಗಿ ಭವಿಷ್ಯ

​ಪ್ರಜಾವಾಣಿ ವಾರ್ತೆ
Published 5 ಮೇ 2018, 14:18 IST
Last Updated 5 ಮೇ 2018, 14:18 IST

ಸಿಂದಗಿ: ‘ಮೀಸಲಾತಿಯನ್ನು ಬಿಜೆಪಿ ಮಾತ್ರವಲ್ಲ; ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ತೆಗೆಯಲಿಕ್ಕಾಗದು. ದಲಿತರು ಈ ಬಗ್ಗೆ ಯೋಚಿಸುವುದನ್ನು ಬಿಡಬೇಕು. ಮೀಸಲಾತಿಗೆ ಕೈ ಹಚ್ಚಿದರೆ ಸರ್ಕಾರ ಉಳಿಯಲ್ಲ’ ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ಸಮಾಜ ಪರಿವರ್ತನೆ ಆಗುವ ತನಕ ಮೀಸಲಾತಿ ಬೇಕೇ ಬೇಕು’ ಎಂದರು.

‘ರಾಜ್ಯದಲ್ಲಿ ಅತಂತ್ರ ಸರ್ಕಾರದ ಪ್ರಶ್ನೆಯೇ ಇಲ್ಲ. ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸುವ ಮೂಲಕ ಸರ್ಕಾರ ರಚನೆ ಮಾಡುವುದು ನಿಶ್ಚಿತ. ಅಲ್ಲದೇ ಬಿ.ಎಸ್.ಯಡಿಯೂರಪ್ಪನವರೇ ಮುಖ್ಯಮಂತ್ರಿಗಳಾಗುವುದು ಕೂಡ ಅಷ್ಟೇ ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ಬಿಜೆಪಿಯನ್ನು ಗೆಲ್ಲಿಸಲು ಉತ್ತರ ಕರ್ನಾಟಕ ಭಾಗದ ಜನರು ಅಭಿಲಾಷೆ ಹೊಂದಿದ್ದಾರೆ. ಜಿಲ್ಲೆಯಲ್ಲಿಯೇ ಎಲ್ಲರ ಗಮನ ಸೆಳೆದ ಮತಕ್ಷೇತ್ರ ಬಬಲೇಶ್ವರ ದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಣದ ಹೊಳೆ ಹರಿಸುತ್ತಿದ್ದಾರೆ. ಧರ್ಮಕ್ಕೆ ಕೈ ಹಚ್ಚಿದ ಎಂ.ಬಿ.ಪಾಟೀಲರು ಖಂಡಿತ ಸೋಲುತ್ತಾರೆ. ಎಂ.ಬಿ.ಪಾಟೀಲ ಒಳ್ಳೆಯ ಕೆಲಸ ಮಾಡಿದ್ದೇನೋ ನಿಜ. ಆದರೆ ಧರ್ಮ ಒಡೆಯುವಂಥ ಕೆಲಸಕ್ಕೆ ಕೈ ಹಾಕಿದ್ದನ್ನು ಜನ ಸಹಿಸಲಾರರು. ರಾಜಕಾರಣ–ಧರ್ಮ ಎರಡೂ ಜೋಡೆತ್ತಿನ ಬಂಡಿಯಂತೆ ಸಮ, ಸಮನಾಗಿ ಸಾಗಬೇಕು. ಈ ವಿಷಯವಾಗಿ ಅವರ ಬಗ್ಗೆ ಜನರಲ್ಲಿ ಅಪಾರ ನಿರಾಶೆ ಇದೆ’ ಎಂದು ಹೇಳಿದರು.

ನೀರಾವರಿ ಕಾಮಗಾರಿಗೆ ಸಂಬಂಧಿಸಿದಂತೆ ಆಕ್ಷೇಪಿಸಿದ ಸಚಿವ ಜಿಗಜಿಣಗಿ, ‘ಆಲಮಟ್ಟಿಯಲ್ಲಿ ನೀರು ನಿಲ್ಲಿಸಿಲ್ಲ. ಅಲ್ಲಿದ್ದ ಸಂತ್ರಸ್ತರನ್ನು ಹೊರ ಹಾಕಿಲ್ಲ. ಪರಿಹಾರ ಕೂಡ ಕೊಟ್ಟಿಲ್ಲ. ಆದರೂ ನಾಲ್ಕು ವರ್ಷದಲ್ಲಿ ಸಾವಿರಾರು ಕೋಟಿ ವೆಚ್ಚದಲ್ಲಿ ಕಾಲುವೆಗಳ ನಿರ್ಮಾಣದ ಅಗತ್ಯವಿತ್ತೆ’ ಎಂದು ಸಚಿವ ಎಂ.ಬಿ.ಪಾಟೀಲರನ್ನು ಪ್ರಶ್ನಿಸಿದರು.

ದಲಿತರು ಸಂವಿಧಾನ ಬದಲಾವಣೆ ವಿಷಯವಾಗಿ ಬಿಜೆಪಿ ವಿರುದ್ಧ ಮತ ಚಲಾಯಿಸಲು ಜೆಡಿಎಸ್ ಗೆ ಬೆಂಬಲಿಸುತ್ತಿರುವುದು ಇದೊಂದು ಕುತಂತ್ರ ಅಷ್ಟೆ ಎಂದರು.

‘ಒಟ್ಟಾರೆ ಜಿಲ್ಲೆಯಲ್ಲಿ ಬಿಜೆಪಿಗೆ ಅನುಕೂಲಕರ ಪರಿಸ್ಥಿತಿ ಇದೆ. ಸಿಂದಗಿ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಹ್ಯಾಟ್ರಿಕ್ ಸಾಧನೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುರುಬ ಸಮುದಾಯದವರಿದ್ದರೂ ಕುರುಬರು ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುತ್ತಿದ್ದಾರೆ. ವಿಜಯಪುರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ತಾವು ಮೌನ ವಹಿಸಿಲ್ಲ. ಅವರು ಚುನಾವಣಾ ಪ್ರಚಾರಕ್ಕೆ ಕರೆಯದಿದ್ದರೂ ನಾನು ಹೋಗುವೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಧುರೀಣರಾದ ಶ್ರೀಕಾಂತ ಸೋಮಜಾಳ, ಈರಣ್ಣ ರಾವೂರ, ಬಸವರಾಜ ಸಜ್ಜನ, ಮಲ್ಲಿಕಾರ್ಜುನ ಪಡಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.