ADVERTISEMENT

ರಕ್ಕಸಗಿ ದಲಿತರಿಗೆ ಬಹಿಷ್ಕಾರ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 4:30 IST
Last Updated 14 ಸೆಪ್ಟೆಂಬರ್ 2011, 4:30 IST

ವಿಜಾಪುರ: ಸವರ್ಣೀಯರಿಂದ ಬಹಿಷ್ಕಾರಕ್ಕೆ ಒಳಗಾಗಿರುವ ತಮಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ಮುದ್ದೇಬಿಹಾಳ ತಾಲ್ಲೂಕು ರಕ್ಕಸಗಿ ಗ್ರಾಮದ ದಲಿತರು ಸೋಮವಾರ ಇಲ್ಲಿಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ದಲಿತರಿಗೆ ಸಾಮೂಹಿಕ ಬಹಿಷ್ಕಾರ ಹಾಕಲಾಗಿದೆ. ಗ್ರಾಮಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಪರಾಧಿಗಳ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಲಿಲ್ಲ. ಗ್ರಾಮದಲ್ಲಿ ಬಹಿಷ್ಕಾರ ನಡೆದೇ ಇಲ್ಲ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ. ದಲಿತರಿಗೆ ನ್ಯಾಯ ಕೊಡಿಸುವಲ್ಲಿ ವಿಫಲರಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಗ್ರಾಮದಲ್ಲಿ ದಲಿತರಾದ ತಮಗೆ ನಿಜವಾಗಿಯೂ ಬಹಿಷ್ಕಾರ ಹಾಕಲಾಗಿದೆ. ಬೇರೆ ಗ್ರಾಮದ ದಲಿತ ನಾಯಕರು ತಮಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ. ಆತಂಕದಲ್ಲಿರುವ ತಮಗೆ ಸೂಕ್ತ ರಕ್ಷಣೆ ನೀಡಿ, ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರಭಾರ ಜಿಲ್ಲಾಧಿಕಾರಿ ಜಿ.ಎಸ್. ಜಿದ್ದಿಮನಿ ಅವರಿಗೆ ಮನವಿ ಸಲ್ಲಿಸಿದರು.

ದಲಿತ ಮುಖಂಡರಾದ ಜಿತೇಂದ್ರ ಕಾಂಬಳೆ, ಆನಂದ ಔದಿ, ನಾಗರಾಜ ಲಂಬು, ಸಚೇಂದ್ರ ಲಂಬು, ಸುನೀಲ್ ಹೊಸಳ್ಳಿ, ಚಂದ್ರಪ್ಪ ಹರಿಜನ, ಸಂಜು ಕಂಬಾಗಿ ಇತರರು ಈ ಸಂದರ್ಭದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.