ADVERTISEMENT

ರೈಲು ಮಾರ್ಗಕ್ಕೆ ಆದ್ಯತೆ ದೊರೆಯುವುದೇ..?

ಆಲಮಟ್ಟಿ-–ಯಾದಗಿರಿ: ಬ್ರಿಟಿಷರ ಕಾಲದಲ್ಲಿಯೇ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 30 ಮೇ 2014, 6:13 IST
Last Updated 30 ಮೇ 2014, 6:13 IST
ಆಲಮಟ್ಟಿಯಿಂದ ಯಾದಗಿರಿ ರೈಲು ಮಾರ್ಗ ನಿರ್ಮಾಣಕ್ಕೆ ಬ್ರಿಟಿಷರ ಆಡಳಿತದಲ್ಲಿ 18 ಕಿ.ಮೀವರೆಗೆ ರೈಲ್ವೆ ಹಳಿ ಹಾಕಲಾಗಿತ್ತು. ಅದೇ ಮಾರ್ಗದಲ್ಲಿ ಬರುವ ಆಲಮಟ್ಟಿ ಬಳಿಯ ಜಾಲಾಪುರ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾಗಿದ್ದ  ಸೇತುವೆಯ ದೃಶ್ಯ.
ಆಲಮಟ್ಟಿಯಿಂದ ಯಾದಗಿರಿ ರೈಲು ಮಾರ್ಗ ನಿರ್ಮಾಣಕ್ಕೆ ಬ್ರಿಟಿಷರ ಆಡಳಿತದಲ್ಲಿ 18 ಕಿ.ಮೀವರೆಗೆ ರೈಲ್ವೆ ಹಳಿ ಹಾಕಲಾಗಿತ್ತು. ಅದೇ ಮಾರ್ಗದಲ್ಲಿ ಬರುವ ಆಲಮಟ್ಟಿ ಬಳಿಯ ಜಾಲಾಪುರ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆಯ ದೃಶ್ಯ.   

ಆಲಮಟ್ಟಿ: ಬ್ರಿಟಿಷರ ಕಾಲದಲ್ಲಿಯೇ ರೈಲು ಮಾರ್ಗ ಸಮೀಕ್ಷೆ ಪೂರ್ಣಗೊಂಡು ಕೆಲ ಕಿ.ಮೀವರೆಗೆ ಹಳಿಯೂ ಹಾಕಿ, ನಂತರ ಅರ್ಧಕ್ಕೆ ನಿಂತಿದ್ದ ಆಲಮಟ್ಟಿ–-ಯಾದಗಿರಿ ರೈಲು ಮಾರ್ಗಕ್ಕೆ 80 ದಶಕಗಳ ನಂತರ, ಈ ಬಾರಿ ರಾಜ್ಯದವರೇ ರೈಲ್ವೆ ಸಚಿವರಾಗಿದ್ದು, ಈ ಮಾರ್ಗಕ್ಕೆ ಆದ್ಯತೆ ದೊರೆಯುವುದೇ..? ಎಂಬ ಜನರ ನಿರೀಕ್ಷೆ ಹೆಚ್ಚಾಗಿದೆ.

ಬ್ರಿಟಿಷರ ಆಡಳಿತದಲ್ಲಿಯೇ ಆಲಮಟ್ಟಿ–-ಮುದ್ದೇಬಿಹಾಳ–-ಯಾದಗಿರಿ ರೈಲು ಮಾರ್ಗಕ್ಕೆ ಸಮೀಕ್ಷೆಯನ್ನೂ ನಡೆಸಿ, ರೈಲು ಮಾರ್ಗ ನಿರ್ಮಾಣ ಕಾರ್ಯವೂ ಆರಂಭಗೊಂಡಿತ್ತು. ಅದಕ್ಕಾಗಿ ಆಲಮಟ್ಟಿಯ ಸನಿಹದಲ್ಲಿಯೇ ಇದ್ದ ಹಳೇ ದೇವಲಾಪುರ ಬಳಿ (ಹಳೇ ಜಾಲಾಪುರ) ಹಳ್ಳಕ್ಕೆ ಸೇತುವೆಯನ್ನು ನಿರ್ಮಿಸಲಾಗಿತ್ತು ಎಂದು ಹಿರಿಯರು ಹೇಳುತ್ತಾರೆ. ಅದರ ಕುರುಹುಗಳು ಈಗಲೂ ಅಲ್ಲಿವೆ.  ಆಲಮಟ್ಟಿ ಜಲಾಶಯದ ಹಿನ್ನೀರು ಕಡಿಮೆಯಾದ ಬಳಿಕ ಆ ಸೇತುವೆ ಕುರುಹುಗಳು ಈಗಲೂ ಕಾಣುತ್ತವೆ. (ಚಿತ್ರದಲ್ಲಿ ಅರ್ಧ ಕಟ್ಟಿದ ಸೇತುವೆ ನೋಡಬಹುದು). ಕೆಲ ಕಾರಣಗಳಿಂದ ಈ ಯೋಜನೆ ಸ್ಥಗಿತಗೊಂಡಿತ್ತು. ಅಂದು ಸ್ಥಗಿತಗೊಂಡ ಈ ರೈಲು ಮಾರ್ಗ ನಿರ್ಮಾಣಕ್ಕೆ ಪ್ರತಿ ವರ್ಷವೂ ಮುದ್ದೇಬಿಹಾಳ ಜನತೆ ಸೇರಿದಂತೆ ಈ ಮಾರ್ಗದುದ್ದಕ್ಕೂ ಬರುವ ಗ್ರಾಮಸ್ಥರು ಪ್ರತಿಭಟನೆ ನಡೆಸಿದರೂ ಈ ರೈಲು ಮಾರ್ಗದ ರಚನೆಯಲ್ಲಿ ಯಾವುದೇ ಪ್ರಗತಿ ಕಂಡಿಲ್ಲ.

ಕರ್ನಾಟಕದವರೇ ಆದ ಜಾಫರ್‌ ಷರೀಫ್‌, ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ ರೈಲು ಮಂತ್ರಿಯಾಗಿದ್ದಾಗ, ಈ ಮಾರ್ಗದ ರಚನೆಗೆ ಸಾಕಷ್ಟು ಹೋರಾಟ ನಡೆದೇ ಇತ್ತು. ಈ ಭಾಗದ ಜನತೆಯ ಕೂಗು ಮಾತ್ರ ಕೇಳಲೇ ಇಲ್ಲ. ಅಲ್ಲದೇ ಹಿಂದಿನ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಮಾತ್ರ ಈ ಮಾರ್ಗದ ಸಮೀಕ್ಷೆಗೆ ಆದೇಶಿಸಿದ್ದರು. ಈ ಮಾರ್ಗದ ನಿರ್ಮಾಣದ ಸಮೀಕ್ಷೆ ಪೂರ್ಣಗೊಂಡಿದೆ. ಆದರೇ ಮಾರ್ಗ ರಚನೆ ಮಾತ್ರ ಆದ್ಯತಾ ಪಟ್ಟಿಯಲ್ಲಿ ಇಲ್ಲ ಎಂಬುದೇ ಜನತೆಯ ಆರೋಪ.

ಕಳೆದ ಬಾರಿ ಮಲ್ಲಿಕಾರ್ಜುನ ಖರ್ಗೆಯವರಿಗೆ ರೈಲ್ವೆ ಸಚಿವರ ಹುದ್ದೆ ದೊರೆತಿದ್ದು ಅತ್ಯಲ್ಪ ಕಾಲ, ಹೀಗಾಗಿ ಈ ಮಾರ್ಗದ ರಚನೆಯಾಗಲಿಲ್ಲ ಎಂದು ಕೆಲವರು ಅಭಿಪ್ರಾಯಪಡುತ್ತಾರೆ. ಈಗ ಅಭಿವೃದ್ಧಿ ಮಂತ್ರ ಪಠಿಸಿ ಅಧಿಕಾರ ಹಿಡಿದ ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ರೈಲ್ವೆ ಸಚಿವರಾಗಿರುವ ಸದಾನಂದಗೌಡ ಕರ್ನಾಟಕದವರೇ ಆಗಿದ್ದು, ಈಗ ಈ ಮಾರ್ಗ ರಚನೆಗೆ ಆದ್ಯತೆ ದೊರೆಯುವುದೇ..? ಎಂಬುದು ಜನರ ನಿರೀಕ್ಷೆಯಾಗಿದೆ.

ಮಾರ್ಗ ರಚನೆ: 1933 ರಲ್ಲಿಯೇ ಈ ರೈಲ್ವೆ ಮಾರ್ಗಕ್ಕೆ ಬ್ರಿಟಿಷ್‌ ಸರ್ಕಾರ  ಚಾಲನೆ ನೀಡಿ ಕಾಮಗಾರಿಯನ್ನು ಪ್ರಾರಂಭಿಸಿತ್ತು. ಆಲಮಟ್ಟಿಯಿಂದ ಮುದ್ದೇಬಿಹಾಳ ಮಧ್ಯೆ ಬರುವ  ಹುಲ್ಲೂರು ಗ್ರಾಮದವರೆಗೆ ಹಳಿಯನ್ನು ಹಾಕಿಸಿತ್ತು ಎಂದು ಹಿರಿಯರು ಹೇಳುತ್ತಾರೆ. ಆದರೇ ಕಾಲಾಂತರದಲ್ಲಿ ಈ ಕೆಲಸ ನನೆಗುದಿಗೆ ಬಿದ್ದಿತ್ತು. 1933 ರ ಜನವರಿ 1 ರಂದು ಅಂದಿನ “ದಿ ಗೈಡ್ ರೇಲ್ ರೋಡ್ ಫೀಡರ್ ಲೈನ್ಸ್’ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಸಿ. ಸ್ಕೆಲ್ಟನ್ ಈ ಕಾರ್ಯಕ್ಕೆ ಚಾಲನೆ ನೀಡಿ ಮಂಡಳಿ ರಚಿಸಿತ್ತು. ಇದಕ್ಕೆ ಮುದ್ದೇಬಿಹಾಳದ ಬಿ.ಎಚ್. ಮಾಗಿ, ಗಣಿಯ ದೇಸಾಯಿ, ನಿಡಗುಂದಿಯ ನಾಗಠಾಣ, ಆಲಮಟ್ಟಿಯ ಹುಂಡೇಕಾರ, ಗುಡ್ನಾಳದ ಹುಸೇನಪಟೇಲ ಮುದ್ನಾಳ, ಮುದ್ದೇಬಿಹಾಳದ ರಾವಸಾಹೇಬ ಮೋಟಗಿ, ಬಸಲಿಂಗಪ್ಪ ನಾವದಗಿ, ತಾಳಿಕೋಟೆಯ ಖಾಂಜಾದ್ರಿ ಮೇತ್ರಿ, ಕೇಸಾಪುರದ ಚನಬಸಪ್ಪ ದೇಶಮುಖ ಅವರು ನಿರ್ದೇಶಕರಾಗಿದ್ದರು ಎನ್ನುತ್ತಾರೆ ಹಿರಿಯರಾದ ಬಿ.ಎಚ್. ಮಾಗಿ.
ಷೇರು ಸಂಗ್ರಹ: ಈ ಮಾರ್ಗ ನಿರ್ಮಾಣಕ್ಕಾಗಿ ₨100 ಷೇರನ್ನು 1934 ರಲ್ಲಿ ನೂರಾರು ಜನರಿಂದ ಸಂಗ್ರಹಿಸಿ ರೈಲ್ವೆ ಮಂಡಳಿಗೆ ಭರಿಸಲಾಗಿತ್ತು. ಈ ಮಾರ್ಗ ನಿರ್ಮಾಣಕ್ಕೆ ಆಗ ₨ 56,664 ನಿಗದಿ ಪಡಿಸಲಾಗಿತ್ತು ಎನ್ನುತ್ತಾರೆ ಬಿ.ಎಚ್. ಮಾಗಿ.

ಆಲಮಟ್ಟಿ-–-ಹುಲ್ಲೂರ-–ಮುದ್ದೇಬಿಹಾಳ–-ದೇವರಹುಲಗಬಾಳ– ಮಿಣಜಗಿ– ತಾಳಿಕೋಟೆ–ಹುಣಸಗಿ– ಶಹಾಪುರ ಮಾರ್ಗವಾಗಿ ಯಾದಗಿರಿಯನ್ನು ಸಂಪರ್ಕಿಸಲು ಈ ರೈಲ್ವೆ ಯೋಜನೆಯನ್ನು ಬ್ರಿಟಿಷರು ರೂಪಿಸಿದ್ದರು.

ಗೋಚರ:ಬ್ರಿಟಿಷರು ರೂಪಿಸಿದ್ದ ಮಾರ್ಗದ ಸಾಕಷ್ಟು ಕುರುಹುಗಳು ಈಗಲೂ ಗೋಚರಿಸುತ್ತವೆ. ಆಲಮಟ್ಟಿ ಬಳಿಯ ಜಾಲಾಪುರ ಹಳ್ಳಕ್ಕೆ ನಿರ್ಮಿಸಿದ್ದ ಸೇತುವೆ, ಹುಲ್ಲೂರು ಹಳ್ಳಕ್ಕೆ ನಿರ್ಮಿಸಿದ್ದ ಸೇತುವೆ ಬೇಸಿಗೆಯಲ್ಲಿ ಈಗಲೂ ಗೋಚರಿಸುತ್ತವೆ. ಜಾಲಾಪುರ ಹಳ್ಳಕ್ಕೆ ನಿರ್ಮಿಸಿದ್ದ ಸೇತುವೆ ಕೃಷ್ಣಾ ನದಿ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದು, ಬೇಸಿಗೆಯಲ್ಲಿ ಹಿನ್ನೀರು ಕಡಿಮೆಯಾಗುತ್ತಿದ್ದಂತೆ ಸ್ಮಾರಕದಂತೆ ಕಾಣುತ್ತದೆ.

ಏಕೆ ಪೂರ್ಣಗೊಳ್ಳಲಿಲ್ಲ..?: ಸ್ವಾತಂತ್ರ್ಯ ಹೋರಾಟದ ಕಾವು ತೀವ್ರಗೊಳ್ಳುತ್ತಿದ್ದರಿಂದ ಬ್ರಿಟಿಷರು ಅಭಿವೃದ್ಧಿ ಕಡೆ ಹೆಚ್ಚು ಗಮನಹರಿ ಸಲಿಲ್ಲ. ಅಲ್ಲದೇ ಈ ಯೋಜನೆ ರೂಪಿಸಿದ್ದ ಬ್ರಿಟಿಷ್ ಅಧಿಕಾರಿ ಸಿ. ಸ್ಕೆಲ್ಟನ್‌ ಪುತ್ರ ಮೃತಪಟ್ಟ ಕಾರಣ ಅವರು ಸ್ವದೇಶಕ್ಕೆ ತೆರಳಿದರು. ಹೀಗಾಗಿ ಈ ಯೋಜನೆ ಅರ್ಧಕ್ಕೆ ನಿಂತಿತು ಅಂದಿನಿಂದ ಅರ್ಧಕ್ಕೆ ನಿಂತ ಈ ರೈಲ್ವೆ ಕಾಮಗಾರಿ ಅನುಷ್ಠಾನ ಮಾತ್ರ ಆಗಲೇ ಇಲ್ಲ.

ಅಂದಿನಿಂದ ಆರಂಭಗೊಂಡ ಹೋರಾಟಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ.ಯಾವುದೇ ಹೋರಾಟವೂ ಇಲ್ಲದೇ, ಅಲ್ಲಿನ ಜನಪ್ರತಿನಿಧಿಗಳ ಇಚ್ಛಾಶಕ್ತಿಯಿಂದ ಮಾತ್ರ ಬಾಗಲಕೋಟೆ-–ಕುಡಚಿ ಮಾರ್ಗ ನಿರ್ಮಾಣಗೊಳ್ಳುತ್ತಿದೆ. ಹಲವಾರು ಹೋರಾಟ ನಡೆದರೂ, ಇಲ್ಲಿನ ಜನಪ್ರತಿನಿಧಿಗಳ ಇಚ್ಛಾಶಕ್ತಿ, ಪ್ರಯತ್ನದ ಕೊರತೆಯಿಂದ ಮಾರ್ಗ ರಚನೆ ನೆನೆಗುದಿಗೆ ಬಿದ್ದಿದೆ ಎನ್ನುತ್ತಾರೆ ಜಿ.ಸಿ. ಮುತ್ತಲದಿನ್ನಿ ಮೊದಲಾದವರು. ಈಗ ರಾಜ್ಯದವರೇ ಆದ ಸದಾನಂದಗೌಡ ರೈಲ್ವೆ ಸಚಿವರಾಗಿದ್ದು ಈ ಮಾರ್ಗ ರಚನೆ ಆರಂಭಗೊಳ್ಳುವುದೇ..? ಎಂದು ಜನರು ಬಹು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.