ADVERTISEMENT

ವಿಚ್ಛೇದಿತ ಅಮ್ಮನ ಸೆರಗಿನಡಿ `ಶಕ್ತಿ'ಹೀನ ಮಗನ ಅಳಲು!

ಅಪರೂಪದ ಕಾಯಿಲೆ `ಮಸ್ಕ್ಯುಲರ್ ಡಿಸ್ಕ್ರೋಪಿ'ಯಿಂದ ಬಳಲುತ್ತಿರುವ ಮಂಜುನಾಥ

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 6:56 IST
Last Updated 16 ಜುಲೈ 2013, 6:56 IST

ಹುಬ್ಬಳ್ಳಿ: ಹದಿಮೂರರ ಹರೆಯದಲ್ಲಿ ವಿವಾಹ. ಹದಿನೈದು ತುಂಬುವಷ್ಟರಲ್ಲಿ ಕೈಯಲ್ಲಿ ಮಗು. ಹದಿನೆಂಟರ ವಯಸ್ಸಿಗೆ ವಿಚ್ಛೇದನ. ಕಂಕುಳಲ್ಲಿದ್ದ ಮಗು ಭವಿಷ್ಯದಲ್ಲಿ ಆಸರೆಯಾಗಬಹುದು ಎಂದು ನಂಬಿ, ಕಿತ್ತು ತಿನ್ನುವ ಬಡತನದಲ್ಲೇ 18 ವರ್ಷ ಏಕಾಂಗಿಯಾಗಿ ಬದುಕು ಕಂಡ ಆ ತಾಯಿಯ ಕಣ್ಣುಗಳು ಕಳೆದೆರಡು ವರ್ಷದಿಂದ ಅತ್ತೂ ಅತ್ತೂ ಬತ್ತಿ ಹೋಗಿದೆ!

ಅಪ್ಪನ ಪ್ರೀತಿ ವಂಚಿತ ಮಂಜುನಾಥ, ಅಮ್ಮನ ಸೆರಗಿನಡಿ ಎಲ್ಲರಂತೆ ಬೆಳೆಯುತ್ತಲೇ ಅರಿವು ಮೂಡುವ ಹೊತ್ತಿಗೆ ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದ. ಆದರೆ ಎಂಟನೇ ತರಗತಿಯಲ್ಲಿ ಕಾಣಿಸಿಕೊಂಡ `ಸ್ನಾಯು ಶಕ್ತಿಹೀನತೆ'ಯನ್ನೂ ಮೀರಿ ಎಸ್‌ಎಸ್‌ಎಲ್‌ಸಿಯಲ್ಲಿ ಶೇಕಡಾ 67 ಅಂಕ ಪಡೆದ ಮಂಜುನಾಥ, ಈಗ ಶೇಕಡಾ 75ರಷ್ಟು ಅಂಗವಿಕಲ. ಕಾನೂನು ಕಲಿತು ಅಮ್ಮನನ್ನು ಸಾಕುವುದಾಗಿ ಓರಗೆಯವರಲ್ಲಿ ಹೇಳಿಕೊಂಡಿದ್ದ ಮಂಜುನಾಥ, ಈಗ ಅತ್ತಿತ್ತ ಹೊರಳಬೇಕಿದ್ದರೆ ತಾಯಿ ಎತ್ತಿ ಕೂಡ್ರಿಸಬೇಕು.

ಇದು ಇಲ್ಲಿನ ವಿಕಾಸ ನಗರದಲ್ಲಿ ಪುಟ್ಟ ಬಾಡಿಗೆ ಕೊಠಡಿಯೊಂದರಲ್ಲಿ ಇಸ್ತ್ರಿಪೆಟ್ಟಿಗೆ ಇಟ್ಟುಕೊಂಡು ಬದುಕು ಕಟ್ಟಿಕೊಂಡಿರುವ ಭಾರತಿ ಮಂಗಳೇಶ ಮಡಿವಾಳರ ಮತ್ತು ಮಂಜುನಾಥನ ನೋವಿನ ಕಥೆ.

`ಅವನು ಎಂಟನೇ ತರಗತಿಯಲ್ಲಿದ್ದಾಗ ಸೊಂಟದ ಕೆಳಭಾಗದ ಸ್ನಾಯುಗಳು ನಿಯಂತ್ರಣ ಕಳೆದುಕೊಂಡಿದ್ದು ಗಮನಕ್ಕೆ ಬಂದಿತ್ತು. ಸಿಕ್ಕಸಿಕ್ಕ ವೈದ್ಯರನ್ನು ಸಮೀಪಿಸಿ ಚಿಕಿತ್ಸೆ ಕೊಡಿಸಿದೆ. ಯಾರ‌್ಯಾರದೋ ಮಾತು ಕೇಳಿ ಮಾಟ- ಮಂತ್ರ ಎಂದು ಅಮಾವಾಸ್ಯೆ ದಿನ ನಾನೊಬ್ಬಳೇ ಸ್ಮಶಾನಕ್ಕೆ ತೆರಳಿ ಕ್ರಿಯೆಗಳನ್ನು ಮಾಡಿಸಿದೆ.

ಆದರೆ ಕಾಯಿಲೆ (ಮಸ್ಕ್ಯುಲರ್ ಡಿಸ್ಕ್ರೋಪಿ -ಸ್ನಾಯು ಶಕ್ತಿಹೀನತೆ) ಏನು ಎಂದು ಗೊತ್ತಾಗುವಷ್ಟರಲ್ಲಿ ಮಂಜುನಾಥ ಎರಡೂ ಕಾಲಿನ ಶಕ್ತಿ ಕಳೆದುಕೊಂಡು ತೆವಳುವ ಸ್ಥಿತಿ ತಲುಪಿದ್ದ. ಈ ಕಾಯಿಲೆಗೆ ಚಿಕಿತ್ಸೆ ಇಲ್ಲ ಎಂದು ಕೆಲವು ವೈದ್ಯರು ಹೇಳಿದಾಗ ಆಕಾಶ ತಲೆ ಮೇಲೆ ಕಳಚಿ ಬಿದ್ದಂತಾಗಿತ್ತು' ಎಂದು ದುಃಖಿಸಿದರು ಭಾರತಿ.

`ಈ ಕಾಯಿಲೆಗೆ ಸಿದ್ಧಾರೂಢ ಮಠದ ಸಮೀಪ ಚಿಕಿತ್ಸಾಲಯ ಹೊಂದಿರುವ ವೈದ್ಯ ಹಫೀಜ್ ಭಿಸ್ತಿ ಚಿಕಿತ್ಸೆ ನೀಡುತ್ತಾರೆ ಎಂದು ಗೊತ್ತಾಗಿ ಅಲ್ಲಿಗೆ ಹೋದೆ. ಮಂಜುನಾಥನನ್ನು ತಪಾಸಣೆ ನಡೆಸಿದ ಅವರು ಕಾಯಿಲೆ ಸಂಪೂರ್ಣ ಗುಣವಾಗಲು ಕನಿಷ್ಠ 2 ವರ್ಷ ಬೇಕು. ವಾರದ ಗುಳಿಗೆ, ಔಷಧಿಗೆ ಒಂದೂವರೆಯಿಂದ ಎರಡು ಸಾವಿರ ರೂಪಾಯಿಯಂತರ ಕನಿಷ್ಠ ಸುಮಾರು ಎರಡು ಲಕ್ಷ ಅಗತ್ಯವಿದೆ ಎಂದಿದ್ದಾರೆ. ಮಗನ ಸ್ಥಿತಿ, ನನ್ನ ಕಷ್ಟ ಕಂಡು ಅವರು ಆರಂಭಿಕ ಚಿಕಿತ್ಸೆ ನೀಡಿದರೂ, ಅದನ್ನು ಮುಂದುವರಿಸುವ ಸ್ಥಿತಿಯಲ್ಲಿ ನಾನಿಲ್ಲ' ಎಂದು ಭಾರತಿ ಕಣ್ಣೀರಿಟ್ಟರು.

`ಮಸ್ಕ್ಯೂಲರ್ ಡಿಸ್ಕ್ರೋಪಿ' ಅಪರೂಪದ ಕಾಯಿಲೆ. ಸ್ನಾಯುಗಳಲ್ಲಿ ಶಕ್ತಿಹೀನತೆಯ ಈ ಕಾಯಿಲೆಗೆ ಚಿಕಿತ್ಸೆ ಇಲ್ಲ. ಮಂಜುನಾಥನ ಸ್ಥಿತಿ ಕಂಡು ಅಕ್ಯುಪ್ರೆಶರ್ ಮತ್ತು ಹರ್ಬಲ್ ಚಿಕಿತ್ಸೆ ನೀಡಲು ಆರಂಭಿಸಿದ್ದೇನೆ. ಆದರೆ ಲಕ್ಷಾಂತರ ಹಣ ವ್ಯಯಿಸುವ ಶಕ್ತಿ ನನಗೂ ಇಲ್ಲ. ಕುಟುಂಬಕ್ಕೆ ಯಾರಾದರೂ ಸಹಾಯ ಮಾಡಿದರೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲು ಸಿದ್ಧನಿದ್ದೇನೆ' ಎನ್ನುತ್ತಾರೆ ನಗರದ ಭಾರತ ಎಜುಕೇಶನಲ್ ಮೆಡಿಕಲ್, ಸೈಕೋ- ಸೋಶಿಯಲ್ ವೆಲ್‌ಫೇರ್ ಅಂಡ್ ರಿಹ್ಯಾಬಿಲಿಟೇಶನ್‌ನ ಅಧ್ಯಕ್ಷರೂ ಆಗಿರುವ ಹಫೀಜ್.

`ಅಮ್ಮ ನನ್ನ ಪಾಲಿಗೀಗ ದೇವರು. ದಿಕ್ಕುದೆಸೆ ಇಲ್ಲದ ಅಮ್ಮನಿಗೆ ನಾನು ಅನ್ನ ನೀಡಿ ಸಾಕಬೇಕು. ಯಾರಾದರೂ ನೆರವಾದರೆ ಮತ್ತೆ ಎದ್ದು ನ್ಲ್ಲಿಲುವ ಆತ್ಮಸ್ಥೈರ್ಯ ಇದೆ' ಎಂದು ಅಂಗಲಾಚುತ್ತಾನೆ ಮಂಜುನಾಥ. ನೆರವಾಗಲು ಬಯಸುವವರು ಭಾರತಿ ಮಂಗಳೇಶ ಮಡಿವಾಳರ, ಕೆನರಾ ಬ್ಯಾಂಕ್, ಟ್ರಾಫಿಕ್ ಐಲ್ಯಾಂಡ್ ಶಾಖೆ, ಎಸ್‌ಬಿ ಅಕೌಂಟ್ ನಂ. 0595101031790, ಹುಬ್ಬಳ್ಳಿಗೆ ಹಣ ಸಂದಾಯ ಮಾಡಬಹುದು. ಮೊ: 9663032695.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT