ADVERTISEMENT

ಸಂಕಷ್ಟದಲ್ಲಿ ಅಲೆಮಾರಿ ಕೌಶಲದ ಬದುಕು

ಚಂದ್ರಶೇಖರ ಕೊಳೇಕರ
Published 8 ಏಪ್ರಿಲ್ 2012, 6:15 IST
Last Updated 8 ಏಪ್ರಿಲ್ 2012, 6:15 IST

ಆಲಮಟ್ಟಿ: ಇವರದು ಅಲೆಮಾರಿ ಬದುಕು. ಸದಾ ಕಲ್ಲಿನ ಜೊತೆ ಕಷ್ಟಕರ ಜೀವನ. ಕಾಡು ಕಲ್ಲನ್ನು ತಂದು ಅದಕ್ಕೆ ಶ್ರಮವಹಿಸಿ ವಿಶಿಷ್ಟ ರೂಪವನ್ನು ನೀಡಿ, ನಿತ್ಯ ಬಳಕೆಯ ವಸ್ತುವನ್ನಾಗಿ ರೂಪಿಸುವ ಇವರ ಕರಕೌಶಲಕ್ಕೆ ಗಮನಾರ್ಹ.

ಉಳಿ, ಛಾಣ, ಸುತ್ತಿಗೆಯಿಂದ ವಿಕಾರರೂಪದ ಕಲ್ಲಿಗೆ ಸುಂದರ ಆಕಾರ ನೀಡಿ ಅದನ್ನು ಇನ್ನೊಬ್ಬರ ಅನ್ನ ತಯಾರಿಸುವ ವಸ್ತುವನ್ನಾಗಿ ಉಪಯೋಗಿಸಲು ತಯಾರಿಸುವ ಶ್ರಮದ ಬೆಲೆ ಯಾರ ಗಮನಕ್ಕೂ ಬಾರದು. ಇವರು ತಯಾರಿಸುವ ಬೀಸುವ ಕಲ್ಲು, ಒಳ್ಳು, ಚಟ್ನಿ ಕಲ್ಲು, ರೊಟ್ಟಿ ಮಾಡುವ ಕಲ್ಲು, ಚಪಾತಿ ಮಾಡುವ ಮಣಿ ಇತ್ಯಾದಿ ವಸ್ತುಗಳು ಎಲ್ಲರಿಗೂ ಬೇಕೆ ಬೇಕು.

ಬೀಸುವ ಕಲ್ಲಿನ ಜಾಗದಲ್ಲಿ ಮಿಕ್ಸಿ- ಗ್ರೈಂಡರ್:
ಹಿಂದೆ ಬೀಸುವ ಕಲ್ಲಿನಲ್ಲಿಯೇ ಜೋಳ, ಗೋಧಿ, ಬೀಸಿ ಹಿಟ್ಟು ಮಾಡಿ ರೊಟ್ಟಿ ತಯಾರಿಸಿ, ಉಣಬಡಿಸುತ್ತಿದ್ದರು. ತಾಯಂದಿರು ಜನಪದ ಹಾಡಿನ ಜೊತೆ ಬೀಸುತ್ತಿದ್ದ ಸಮಯದಲ್ಲಿ ಎಂತಹ ಮಜವಿತ್ತು. ಈಗಿನಂತೆ ನಮ್ಮ ಕಾಲದಲ್ಲಿ ವಿದ್ಯುತ್ತಿನ ಸೌಕರ್ಯವಿರಲಿಲ್ಲ. ಬೀಸುವ ಕಲ್ಲಿನಲ್ಲಿಯೇ ಬೇಳೆ ಒಡೆಯುವುದು, ಗೋಧಿ ರವಾ ಬೀಸುವುದು, ಎಲ್ಲ ಕೆಲಸ ಕಾರ್ಯಗಳು ಬೀಸುವ ಕಲ್ಲಿನಲ್ಲಿಯೇ ನಡೆಯುತ್ತಿತ್ತು ಎನ್ನುತ್ತಾರೆ ಎಂಬತ್ತರ ಹರೆಯದ ನಿಜಪ್ಪಜ್ಜ.

ಅಂತಹ ಬೀಸುವ ಕಲ್ಲನ್ನು ತಯಾರಿಸುವವರನ್ನು ಈಗ ಕೇಳುವವರಿಲ್ಲ. ಆಧುನಿಕತೆಯ ಬದಲಾವಣೆಯ ಭರಾಟೆಯಲ್ಲಿ ಬೀಸುವ ಕಲ್ಲಿನ ಜಾಗಕ್ಕೆ ಮಿಕ್ಸರ್ ಗ್ರೈಂಡರ್ ಬಂದಿವೆ. ಬೀಸುವ ಕಲ್ಲಿಗೆ ಪೂಜನೀಯವಾದ ಸ್ಥಾನಮಾನವಿತ್ತು. ಯಾವುದೇ ಪೂಜೆ ಹಬ್ಬದ ಸಮಯದಲ್ಲಿ ಬೀಸುವ ಕಲ್ಲಿನ ಪೂಜೆಯ ನಂತರವೇ ಉಳಿದೆಲ್ಲ ಕಾರ್ಯ ನಡೆಯುತ್ತಿತ್ತು.

ರುಚಿ ಬೇಕು ಶ್ರಮ ಬೇಡ:
ಈಗಿನ ಜಮಾನದವರಿಗೆ ತಾವು ತಿನ್ನುವ ಅಡುಗೆ ರುಚಿ ರುಚಿಯಾಗಿರಬೇಕು ಎಂದು ಬಯಸುತ್ತಾರೆ. ಆದರೆ ಶ್ರಮವಲ್ಲದೆ ಆಗಬೇಕೆನ್ನುವ ಹಂಬಲ. ಒಳ್ಳಿನಲ್ಲಿ ಕುಟ್ಟಿದ ಮೆಣಸಿನಕಾಯಿ ಖಾರದ ರುಚಿ ಅದನ್ನು ಸವಿದವರಿಗೆ ಗೊತ್ತು. ಒಳ್ಳಿನಲ್ಲಿ ಮಾಡಿದ ಶೇಂಗಾ ಚಟ್ನಿಯ ರುಚಿ, ಯಂತ್ರದಲ್ಲಿ ತಯಾರಿಸಿದ ಚಟ್ನಿಗೆ ಬರುವುದಿಲ್ಲ. ಮೊದಲೆಲ್ಲ ಹೊಸದಾಗಿ ಮನೆ ನಿರ್ಮಿಸುವಾಗ ಒಳ್ಳಿಗೆ ಒಂದು ಜಾಗವಿರುತ್ತಿತ್ತು. ಈಗಿನ ಕಾಲದ ಮನೆಗಳು ಅವನ್ನೆಲ್ಲ ನುಂಗಿ ಹಾಕಿವೆ.

ಈ ಎಲ್ಲ ಕಠಿಣ ಕೆಲಸ ಮಾಡುವ ಭೋವಿ ಸಮಾಜದ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ರಾಜಕೀಯವಾಗಿ ಹಿಂದುಳಿದಿದ್ದಾರೆ. ಇವರ ಮಕ್ಕಳು ಶಾಲೆಯ ದರ್ಶನ ಮಾಡಿಲ್ಲ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.