ADVERTISEMENT

‘ಸಂಪೂರ್ಣ ನೀರಾವರಿಗೆ ಬಬಲೇಶ್ವರ’

ಸಚಿವ ಎಂ.ಬಿ.ಪಾಟೀಲರಿಂದ ಅರಕೇರಿ ಏತ ನೀರಾವರಿ ಯೋಜನೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2018, 12:16 IST
Last Updated 19 ಮಾರ್ಚ್ 2018, 12:16 IST
ಅರಕೇರಿ ಏತ ನೀರಾವರಿ ಯೋಜನೆಯ ಜಾಕ್‌ವೆಲ್‌ಗೆ ಗುರುವಾರ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಶಂಕುಸ್ಥಾಪನೆ ನೆರವೇರಿಸಿದರು
ಅರಕೇರಿ ಏತ ನೀರಾವರಿ ಯೋಜನೆಯ ಜಾಕ್‌ವೆಲ್‌ಗೆ ಗುರುವಾರ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಶಂಕುಸ್ಥಾಪನೆ ನೆರವೇರಿಸಿದರು   

ವಿಜಯಪುರ: ‘ಬರಟಗಿಯಿಂದ ಟಕ್ಕಳಕಿವರೆಗಿನ ಪ್ರದೇಶವನ್ನು ಅರಕೇರಿ ಏತ ನೀರಾವರಿ ಯೋಜನೆಗೆ ಒಳಪಡಿಸುವ ಮೂಲಕ ಬಬಲೇಶ್ವರ ವಿಧಾನಸಭೆ ಕ್ಷೇತ್ರ ಸಂಪೂರ್ಣ ನೀರಾವರಿಗೆ ಒಳಪಡಿಸಿದ ಹೆಮ್ಮೆ, ಅಭಿಮಾನ ನನಗಿದೆ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಅರಕೇರಿ ಗ್ರಾಮದ ಇಂಡಿಯನ್‌ ರಿಸರ್ವ್‌ ಬಟಾಲಿಯನ್‌ ಹತ್ತಿರ ತಿಡಗುಂದಿ ವಿಸ್ತರಣಾ ಕಾಲುವೆಯಿಂದ ನಿರ್ಮಿಸುತ್ತಿರುವ ಅರಕೇರಿ ಏತ ನೀರಾವರಿ ಯೋಜನೆಯ ಜಾಕ್‌ವೆಲ್‌ಗೆ ಶಂಕುಸ್ಥಾಪನೆ ನೆರವೇರಿಸಿದ ಸಚಿವರು ನೆರೆದಿದ್ದ ಜನರನ್ನುದ್ದೇಶಿಸಿ ಮಾತನಾಡಿದರು.

‘ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿಯ ಮಮದಾಪುರ ಹೋಬಳಿಯ ಕೆಲ ಭಾಗ ಹೊರತುಪಡಿಸಿದರೆ, ಉಳಿದೆಡೆ ಎಲ್ಲಿಯೂ ನೀರಾವರಿ ಸೌಕರ್ಯವಿರಲಿಲ್ಲ. ಆರಂಭದಲ್ಲಿ ಕೆರೆ, ಹಳ್ಳ, ಬಾಂದಾರಗಳನ್ನು ನಿರ್ಮಿಸಿ ನೀರು ತುಂಬಿಸುವ ಕಾರ್ಯ ಮಾಡಲಾಗಿತ್ತು.

ADVERTISEMENT

ನಾನು ಜಲಸಂಪನ್ಮೂಲ ಸಚಿವನಾದ ನಂತರ ಇಡೀ ರಾಜ್ಯಕ್ಕೆ, ಜಿಲ್ಲೆಗೆ ಯೋಜನೆ ರೂಪಿಸಿ, ನೀರು ಹರಿಸುವುದರ ಜತೆಗೆ, ನನ್ನ ತಂದೆ, ನನಗೆ ರಾಜಕೀಯ ಜನ್ಮ ನೀಡಿದ ತಿಕೋಟಾ, ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಜನರ ಋಣ ತೀರಿಸಲು ಇಡೀ ಕ್ಷೇತ್ರವನ್ನು ಸಂಪೂರ್ಣ ನೀರಾವರಿಗೊಳಪಡಿಸಿರುವೆ’ ಎಂದು ಎಂ.ಬಿ.ಪಾಟೀಲ ಹೇಳಿದರು.

‘ಮಮದಾಪುರ, ಬಬಲೇಶ್ವರ ಹೋಬಳಿಗೆ ಮುಳವಾಡ ಏತ ನೀರಾವರಿ ಯೋಜನೆ ಮೂಲಕ, ತಿಕೋಟಾ ಹೋಬಳಿಯನ್ನು ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯಡಿ ಸೇರ್ಪಡೆಗೊಳಿಸಿ, ಈಗಾಗಲೇ ನೀರು ಹರಿಸಿದ್ದೇವೆ. ಬರಟಗಿ, ಹಂಚನಾಳ ಪ್ರದೇಶಕ್ಕೆ ತಿಡಗುಂದಿಯಿಂದ ವಿಸ್ತರಣಾ ಕಾಲುವೆಯಿಂದ ನೀರು ಹರಿಸಲಾಗುತ್ತಿದ್ದು, ಬರಟಗಿ, ಅರಕೇರಿ, ಸಿದ್ದಾಪುರ, ಜಾಲಗೇರಿ, ಯತ್ನಾಳ, ಟಕ್ಕಳಕಿವರೆಗಿನ ಪ್ರದೇಶ ಎತ್ತರದ ಕಾರಣ ನೀರಿನ ಸೌಲಭ್ಯದಿಂದ ವಂಚಿತವಾಗಿದ್ದು, ಈ ಪ್ರದೇಶಕ್ಕೆ ತಿಡಗುಂದಿ ಕಾಲುವೆಗೆ ಜಾಕ್‌ವೆಲ್‌ ನಿರ್ಮಿಸಿ, ಅಮೋಘಸಿದ್ಧ ದೇವಸ್ಥಾನದ ಸಮೀಪವಿರುವ ಗುಡ್ಡದವರೆಗೆ 6 ಕಿ.ಮೀ. ಪೈಪ್‌ಲೈನ್ ಅಳವಡಿಸಿ, ಅಲ್ಲಿಂದ ಎರಡು ಕಾಲುವೆಗಳ ಮೂಲಕ ಈ ಭಾಗದ ಮಹಾರಾಷ್ಟ್ರದ ಗಡಿಯವರೆಗೆ ಎಲ್ಲ 15 ಸಾವಿರ ಎಕರೆ ಭೂಮಿಗೆ ಒಂದು ಟಿ.ಎಂ.ಸಿ ಅಡಿ ನೀರೊದಗಿಸಿ ನೀರಾವರಿಗೊಳಪಡಿಸಲಾಗುವುದು’ ಎಂದು ಘೋಷಿಸಿದರು.

ಇದೇ ಸಂದರ್ಭದಲ್ಲಿ ಸಚಿವರು ₹ 10 ಕೋಟಿ ವೆಚ್ಚದ ಮೊರಾರ್ಜಿ ವಸತಿ ಶಾಲೆ ಕಟ್ಟಡ, ₹ 3 ಕೋಟಿ ವೆಚ್ಚದ ಅಮೋಘಸಿದ್ದ ಸಮುದಾಯ ಭವನಗಳಿಗೆ ಭೂಮಿ ಪೂಜೆ ನೆರವೇರಿಸಿದರು.

ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳಾದ ತಿರುಮೂರ್ತಿ, ವಿನಾಯಕ ಹರನಟ್ಟಿ ಯೋಜನೆಯ ವಿವರ ನೀಡಿದರು. ಜಿ.ಪಂ. ಮಾಜಿ ಅಧ್ಯಕ್ಷ ಅರ್ಜುನ ರಾಠೋಡ, ಸಿದ್ದಣ್ಣ ಸಕ್ರಿ, ಮಹಾದೇವ ಹಿರೇಕುರುಬರ ಮಾತನಾಡಿದರು.

ಜಿ.ಪಂ.ಸದಸ್ಯ ರಾಜು ಪವಾರ, ತಾ.ಪಂ.ಅಧ್ಯಕ್ಷ ದಾನಪ್ಪ ಚೌಧರಿ, ಉಪಾಧ್ಯಕ್ಷ ತುಕಾರಾಮ ರಾಠೋಡ, ಗ್ರಾ.ಪಂ.ಅಧ್ಯಕ್ಷ ಪೀರ ಪಟೇಲ್‌ ಪಾಟೀಲ, ಉಪಾಧ್ಯಕ್ಷೆ ಅನಸೂಯ ಗೋವಿಂದ ರಾಠೋಡ, ವಾಮನ ಚವ್ಹಾಣ, ಡಿ.ಎಲ್.ಚವ್ಹಾಣ, ಸಂಗಮೇಶ ದಾಶ್ಯಾಳ, ಚೆನ್ನಪ್ಪ ದಳವಾಯಿ, ಅಶೋಕ ದಳವಾಯಿ, ಸೋಮನಿಂಗ ಕಟಾವಿ, ನಿಂಗು ಬೆಳ್ಳುಬ್ಬಿ, ಸುರೇಶ ಭಂಡಾರಿ, ಶ್ಯಾಮ ರಾಠೋಡ, ಶಿವಾನಂದ ಇಂಚಗೇರಿ, ರಮೇಶ ಸಕ್ರಿ, ಸೀನು ಜಾಧವ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.