ADVERTISEMENT

ಸರ್ಕಾರ ಸುಪರ್ದಿಗೆ ತೆಗೆದುಕೊಳ್ಳಲಿ'

`ಭೀಮಾಶಂಕರ ಸಕ್ಕರೆ ಕಾರ್ಖಾನೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2013, 5:38 IST
Last Updated 3 ಜುಲೈ 2013, 5:38 IST

ಚಡಚಣ: ಎರಡು ದಶಗಳಿಂದ ನಿರ್ಮಾಣದ ಹಂತದಲ್ಲಿಯೇ ನೆನೆಗುದಿಗೆ ಬಿದ್ದಿರುವ ಮರಗೂರ ಭೀಮಾಶಂಕರ ಸಕ್ಕರೆ ಕಾರ್ಖಾನೆಯ ನಿರ್ಮಾಣದ ಹೊಣೆಯನ್ನು ಸಹಕಾರ ರಂಗದಿಂದ ಮುಕ್ತ ಗೊಳಿಸಿ, ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು ಎಂದು ಭಾರತೀಯ ಕಿಸಾನ ಸಂಘದ ರಾಜ್ಯ ಕಾರ್ಯದರ್ಶಿ ಗುರುನಾಥ ಬಗಲಿ ಆಗ್ರಹಿಸಿದರು.

ಶ್ರೀ ಸಂಗಮೇಶ್ವರ ದೇವಾಲಯದ ಆವರಣದಲ್ಲಿ ಸೋಮುವಾರ ಆಯೋಜಿಸಲಾದ ಭಾರತೀಯ ಕಿಸಾನ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ಸಾಲಿನಲ್ಲಿ ಬಾಗಲಕೋಟ ಜಿಲ್ಲೆಯಲ್ಲಿ ಕಾರ್ಖಾನೆಗಳು ಪಡೆದ ಪ್ರತಿ ಟನ್ ಕಬ್ಬಿಗೆ 2500 ರೂಪಾಯಿಗಳ ಬೆಲೆ ನೀಡಿದ್ದು, ನಮ್ಮ ಜಿಲ್ಲೆಯಲ್ಲಿ 2300 ರೂಪಾಯಿಗಳ ಬೆಲೆ ನೀಡಿದ್ದು, ಇನ್ನುಳಿದ ಬಾಕಿ ಪ್ರತಿ ಟನ್ ಕಬ್ಬಿನ 200 ರೂಪಾಯಿಗಳನ್ನು ಬಿಡುಗಡೆಗೊಳಿಸಲು ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಳೆದ ಸಾಲಿನಲ್ಲಿ ಫೆಬ್ರುವರಿ, ಮಾರ್ಚ್ ತಿಂಗಳಿನಲ್ಲಿ ಕಬ್ಬು ಪಡೆದ ಕಾರ್ಖಾನೆಗಳು ಬಾಕಿ ಬಿಲ್ಲನ್ನು ಇನ್ನೂ ನೀಡಿಲ್ಲ. ಕೆಲವು ರೈತರಿಗೆ ಚೆಕ್ ನೀಡಿದ್ದು ಅವು ಬೌನ್ಸ್ ಆಗಿವೆ. ಕೂಡಲೇ ಬಾಕಿ ಹಣ ಬಿಡಗಡೆಗೊಳಿಸಬೇಕು. ಪ್ರಸಕ್ತ ಸಾಲಿನಲ್ಲಿ ಕಾರ್ಖಾನೆ ಆಡಳಿತ ಮಂಡಳಿ ಕಬ್ಬು ಬೆಲೆ ನಿಗದಿ, ವಾಹನಗಳ ಬಾಡಿಗೆ ಮುಂತಾದವುಗಳನ್ನು ನಿರ್ಧರಿಸುವಾಗ ರೈತರೊಂದಿಗೆ ಮುಕ್ತವಾಗಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಹಲವಾರು ನಿರ್ಣಯಗಳನ್ನು ಈ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ಸರ್ಕಾರ ಜಿಲ್ಲೆಯ ನಿರಾವರಿ ಯೋಜನೆಗಳ ಅನುಷ್ಠಾನಗೊಳಿಸಬೇಕು ಹಾಗೂ ಮುಂಬರುವ ಬಜೆಟ್‌ನಲ್ಲಿ ಹಣ ಮೀಸಲಿರಿಸಿ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣ ಗೋಳಿಸಬೇಕು ಹಾಗೂ ಕೃಷ್ಣಾ ಕಾಲುವೆಗಳನ್ನು ನೀರು ಬಿಡುವ ಮುಂಚೆ ದುರಸ್ತಿಗೊಳಿಸಿ ಸೂಕ್ತ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು ಎಂದು ಈ ಸಭೆಯಲ್ಲಿ ಹಲವಾರು ರೈತರು ಆಗ್ರಹಿಸಿದರು.

ಸಭೆಯಲ್ಲಿ ಭಾರತೀಯ ಕಿಸಾನ ಸಂಘದ ಚಡಚಣ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಶೈಲಗೌಡ ಬಿರಾದಾರ, ಕಾರ್ಯದರ್ಶಿಗಳಾದ ಶ್ಯಾಮರಾವ ಖಡೆಖಡೆ, ರಮೇಶ ತೇಲಿ, ಕನಕನಾಳ ಘಟಕದ ಬಸವರಾಜ ಕುಂಬಾರ, ಹೊಳಿಸಂಖ ಘಟಕದ ಶ್ರೀಶೈಲ ಡೋಣಿ, ಹತ್ತಳ್ಳಿ ಘಟಕದ ಸಿದರಾಯ ಡೊಳ್ಳಿ, ಕೆರೂರ ಗ್ರಾಮ ಘಟಕದ ಶಿವಶರಣ ಬೈರಗೊಂಡ, ಹಮೀದ್ ಮಹ್ಮದ್ ದಖನಿ,ಲೋಣಿ ಗ್ರಾಮ ಘಟಕದ ಚನ್ನವಿರ ಕಲ್ಯಾಣಶೆಟ್ಟಿ, ಬಸಲಿಂಗ ಪಾಟೀಲ, ಪ್ರದೀಪ ದೇಸಾಯಿ, ಬಸಲಿಂಗಪ್ಪಗೌಡ ಬಿರಾದಾರ, ಚಂದ್ರಶೇಖರ ಕುಂಬಾರ, ಕಾಮಣ್ಣ ಬಗಲಿ, ದಾದಾಗೌಡ ಖಾನಾಪೂರ ಸೇರಿದಂತೆ ವಿವಿಧ ಗ್ರಾಮಗಳಿಮದ ಆಗಮಿಸಿದ ರೈತ ಮುಖಂಡರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.