ಬಸವನಬಾಗೇವಾಡಿಯಿಂದ 7 ಕಿ.ಮೀ ದೂರದಲ್ಲಿರುವ ಪ್ರಕೃತಿದತ್ತ ನಾಗೋಡ ಗುಡ್ಡದ ಸಿದ್ರಾಮೇಶ್ವರ ದೇವಾಲಯವು ಭಕ್ತರ ಮನ ತಣಿಸುವ ಅಧ್ಯಾತ್ಮ ಕೇಂದ್ರವಾಗಿದೆ.
ದೇವಾಲಯದ ದ್ವಾರಬಾಗಿಲು ಚಿಕ್ಕದಾಗಿದ್ದು, ದೇವಾಲಯ ಒಳ ಪ್ರವೇಶಿಸಬೇಕಾದರೆ ಬಾಗಿಯೇ ಹೋಗಬೇಕು. ಒಳ ಹೋಗುತ್ತಿದ್ದಂತೆ ಕಂಡು ಬರುವ ಗವಿಯಲ್ಲಿ ಲಿಂಗ, ನಂದಿ, ವೀರಭದ್ರೇಶ್ವರ, ಗವಿಸಿದ್ಧೇಶ್ವರ ಹಾಗೂ ಮಹಾಕಾಳಿ ಹೀಗೆ ಹಲವು ದೇವರುಗಳ ವಿಗ್ರಹಗಳನ್ನು ಕಾಣಬಹುದು.
ವಿಜಯನಗರ ಸಾಮ್ರಾಜ್ಯದ ಆಳ್ವಿಕೆ ಕಾಲದಲ್ಲಿಯೇ ಇಲ್ಲಿರುವ ಗುಹೆಯು ಪ್ರಾಮುಖ್ಯತೆ ಪಡೆದಿತ್ತು. ಈ ಗುಡ್ಡದ ಗವಿಯಲ್ಲಿ ಸಾದುವೊಬ್ಬರು. ಹಲವು ವರ್ಷಗಳವರೆಗೆ ನೆಲಸಿದ್ದರು. ಈ ಗುಹೆಯಲ್ಲಿ ಇರುವ ದೇವರ ಶಕ್ತಿ ಅಪಾರವಾದದ್ದು ಎಂದು ಇಲ್ಲಿಯ ಜನ ನಂಬುತ್ತಾರೆ. ನಾಗೋಡ, ಟಕ್ಕಳಕಿ, ಮುತ್ತಗಿ, ಜೈನಾಪುರ ಹಾಗೂ ಬಸವನಬಾಗೇವಾಡಿ ಸೇರಿದಂತೆ ಇತರ ಪ್ರದೇಶಗಳಿಂದ ಜನರು ಬಂದು ಹೋಗುತ್ತಾರೆ.
ಈ ಗುಡ್ಡದ ಮೇಲಿರುವ ಗವಿ ಮತ್ತು ಇಂಗಳೇಶ್ವರ ಗ್ರಾಮದ ರೇವಣಸಿದ್ಧೇಶ್ವರ ದೇವಾಲಯದ ಸಮೀಪದ ಅಕ್ಕನಾಗಮ್ಮ ತಪ್ಪಸ್ಸು ಮಾಡಿದ್ದರು ಎಂದು ಹೇಳಲಾಗುವ ಗವಿಗೆ ಸಂಬಂಧವಿದೆ ಎಂದು ಇಲ್ಲಿಯ ಜನರು ಹೇಳುತ್ತಾರೆ.
ಗುಡ್ಡದ ಸಮೀಪದ ನಾಗೋಡ ಗ್ರಾಮದಲ್ಲಿ ಇತ್ತೀಚೆಗೆ ನಿರ್ಮಿಸಿರುವ ಸಿದ್ರಾಮೇಶ್ವರ ದೇವಾಲಯವಿದೆ. ಗುಡ್ಡದ ದೇವರಿಗೆ ದಿನನಿತ್ಯ ಪೂಜೆ ಸಲ್ಲುವ ಹಾಗೆಯೇ ಗ್ರಾಮದಲ್ಲಿರುವ ದೇವಾಲಯದಲ್ಲೂ ದಿನನಿತ್ಯ ಪೂಜೆ ನೆರವೇರುತ್ತದೆ. ಗುಡ್ಡದ ದೇವಾಲಯದ ಗವಿಯಲ್ಲಿ ಚಾಮುಂಡೇಶ್ವರಿ ಅವತಾರ ತಾಳಿರುವುದರಿಂದ ಪ್ರತಿ ದಸರೆಯ ದಿನ ಸಿದ್ರಾಮೇಶ್ವರ ದೇವರ ಮೆರವಣಿಗೆಯೊಂದಿಗೆ ಬನ್ನಿ ಮುಡಿಯುವ ಕಾರ್ಯಕ್ರಮ ಜರುಗುತ್ತದೆ. `ಶ್ರಾವಣ ಮಾಸದ ಕಡೆಯ ಸೋಮವಾರ ಸಿದ್ರಾಮೇಶ್ವರ ಜಾತ್ರೆ ನಡೆಯುತ್ತದೆ. ಯುಗಾದಿ ದಿನದಂದು ಪಲ್ಲಕಿಯು ಹೊಳೆಗೆ ಹೋಗುತ್ತದೆ. ಹೀಗೆ ವರ್ಷವಿಡಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ' ಎಂದು ದೇವಾಲಯದ ಅರ್ಚಕ ಸಿದ್ದಪ್ಪ ಹೂಗಾರ ಹೇಳುತ್ತಾರೆ.
ನಾಗೋಡಿನ ಗುಡ್ಡದಲ್ಲಿರುವ ಸಿದ್ರಾಮೇಶ್ವರ ದೇವರ ಪೂಜೆ ಮಾಡಿದ ನೀರನ್ನು ನರಲಿಯಾದವರು ಹಚ್ಚಿಕೊಂಡರೆ ನರಲಿ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಈ ದೇವಾಲಯಕ್ಕೆ ಪ್ರತಿ ಅಮಾವಾಸ್ಯೆ ಹಾಗೂ ಇತರ ದಿನಗಳಲ್ಲಿ ಜನರು ಬಂದುಹೋಗುತ್ತಾರೆ. ಗುಡ್ಡದ ಪ್ರಶಾಂತ ವಾತಾವರಣದಲ್ಲಿ ಇರುವ ಈ ಗವಿಯ ಮುಂಭಾಗದಲ್ಲಿ ಈಚೆಗೆ ಚಿಕ್ಕದಾದ ಮುಖಮಂಟಪ ನಿರ್ಮಿಸಲಾಗಿದೆ.
`ಈ ಗುಡ್ಡದ ದೇವಾಲಯಕ್ಕೆ ಮೂಲ ಸೌಲಭ್ಯಗಳನ್ನು ಒದಗಿಸಬೇಕು. ಈ ಭಾಗದ ಆರಾಧ್ಯ ದೇವರು ಎನಿಸಿಕೊಂಡಿರುವ ಸಿದ್ರಾಮೇಶ್ವರ ದೇವಾಲಯವನ್ನು ಅಭಿವೃದ್ಧಿ ಪಡಿಸುವ ಅಗತ್ಯವಿದೆ ಎಂದು ನಾಗೋಡ ಗ್ರಾಮದ ಯಮನಪ್ಪ ಪೂಜಾರಿ ಅಭಿಪ್ರಾಯ ಪಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.