ADVERTISEMENT

ಸ್ವತಂತ್ರ ಧರ್ಮ ಹೋರಾಟದಲ್ಲಿ ಭಾಗವಹಿಸದಂತೆ ಒತ್ತಡ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2017, 9:45 IST
Last Updated 28 ನವೆಂಬರ್ 2017, 9:45 IST

ಬಸವನಬಾಗೇವಾಡಿ: ‘ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಹಾಗೂ ಸಮಾವೇಶಗಳಲ್ಲಿ ಭಾಗವಹಿಸದಂತೆ ರಾಜ್ಯದ ಹಲವು ಮಠಾಧೀಶರು ನನ್ನ ಮೇಲೆ ಒತ್ತಡ ಹೇರಿದ್ದಾರೆ. ಭವಿಷ್ಯತ್ತಿನಲ್ಲಾಗುವ ಅನುಕೂಲಗಳನ್ನು ಗಮನದಲ್ಲಿಟ್ಟುಕೊಂಡು ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಭಾಗವಹಿಸುತ್ತಿದ್ದೇನೆ’ ಎಂದು ಸ್ಥಳೀಯ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಡಿ. 10 ರಂದು ವಿಜಯಪುರದಲ್ಲಿ ನಡೆಯಲಿರುವ ಬೃಹತ್ ಸಮಾವೇಶದ ಅಂಗವಾಗಿ ಪಟ್ಟಣದ ವಿರಕ್ತಮಠದ ಶಿವಾನುಭವ ಮಂಟಪದಲ್ಲಿ ಭಾನುವಾರ ಜರುಗಿದ  ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಲಿಂಗಾಯತ ಸ್ವತಂತ್ರ ಧರ್ಮ ಸ್ಥಾಪನೆಯಾದಲ್ಲಿ 99 ಉಪಪಂಗಡಗಳಿಗೆ ಅಲ್ಪ ಸಂಖ್ಯಾಂತ ಸ್ಥಾನಮಾನ ದೊರೆಯುವುದರ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನೇಕ ಯೋಜನೆಗಳು ಈ ಲಿಂಗಾಯತ ಧರ್ಮಕ್ಕೆ ಸಿಗಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ADVERTISEMENT

ಕಾಂಗ್ರೆಸ್‌ ಬ್ಲಾಕ್‌ ಘಟಕದ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ರಾಷ್ಟ್ರೀಯ ಬಸವ ಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಮಾತನಾಡಿ, ‘ಬಸವಣ್ಣನವರಿಂದ ಸ್ಥಾಪಿತವಾದ ಲಿಂಗಾಯತ ಧರ್ಮ ತನ್ನದೇ ಆದ ಸ್ಥಾನಮಾನ ಹೊಂದಬೇಕಾದರೆ ಸ್ವತಂತ್ರ ಧರ್ಮದ ಅವಶ್ಯಕತೆ ಇದೆ’ ಎಂದರು. ‘ಲಿಂಗಾಯತ ಧರ್ಮದ ಒಳ ಪಂಗಡಗಳು ಒಂದಾಗಿ ಹೋರಾಟ ಮಾಡುತ್ತಿರುವುದರಿಂದ ಈ ಹೋರಾಟಕ್ಕೆ ಹೆಚ್ಚಿನ ಬೆಂಬಲ ಸಿಗುತ್ತಿದೆ’ ಎಂದು ಹೇಳಿದರು.

ಸಭೆಯಲ್ಲಿ ಈರಣ್ಣ ಬಿರಾದಾರ, ವಿವೇಕಾನಂದ ಕಲ್ಯಾಣಶೆಟ್ಟಿ, ವೀರೇಶ ಕುಂಟೋಜಿ, ಡಾ. ಅಮರೇಶ ಮಿಣಜಗಿ, ಮಲ್ಲಿಕಾರ್ಜುನ ಹಳ್ಳಿ, ಕುಶಾಲ ಬೆಣ್ಣೂರ, ರವಿ ಬಿರಾದಾರ, ಡಾ.ಮಹಾಂತೇಶ ಮಡಿಕೇಶ್ವರ, ಕೆ.ಸಿ ಬಶೆಟ್ಟಿ, ಬಸವರಾಜ ಪಟ್ಟಣಶೆಟ್ಟಿ, ರವಿ ಚಿಕ್ಕೊಂಡ, ಸಂಗನಗೌಡ ಪಾಟೀಲ, ಸಂಗಮೇಶ ಓಲೇಕಾರ, ಪಿಂಟುಗೌಡ ಪಾಟೀಲ, ಎಚ್,ಎಸ್ ಬಿರಾದಾರ. ರಾಜು ಪಟ್ಟಣಶೆಟ್ಟಿ ಅರುಣ ಗೊಳಸಂಗಿ, ಅರವಿಂದ ಗೋಳಸಂಗಿ, ಗಿರಿಧರಗೌಡ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.