ADVERTISEMENT

ಹಕ್ಕು ಕೊಡದಿದ್ದರೆ ಕಿತ್ತುಕೊಳ್ಳಿ: ರಾಧಾಕೃಷ್ಣ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 9:55 IST
Last Updated 28 ಅಕ್ಟೋಬರ್ 2017, 9:55 IST

ವಿಜಯಪುರ: ‘ದುಡಿಮೆಗೆ ತಕ್ಕ ಕೂಲಿ ಕೇಳುವುದು ಕಾರ್ಮಿಕರ ಹಕ್ಕು. ಕೊಡದಿದ್ದರೆ ಕಿತ್ತುಕೊಳ್ಳಬೇಕು. ಇದುವೇ ಸಮಾಜವಾದಿ ಕ್ರಾಂತಿ’ ಎಂದು ಎಸ್‌ಯುಸಿಐ ರಾಜ್ಯ ಕಾರ್ಯದರ್ಶಿ ಕೆ.ರಾಧಾಕೃಷ್ಣ ಹೇಳಿದರು.

ಎಸ್‌ಯುಸಿಐ ವತಿಯಿಂದ ನಗರದಲ್ಲಿ ಗುರುವಾರ ಸಮಾಜವಾದಿ ಕ್ರಾಂತಿಯ ಶತಮಾನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಸಮಾಜವಾದಿ ಕ್ರಾಂತಿಯ ಮೂಲಕ ಸಂಪತ್ತು ಪ್ರತಿ ಪ್ರಜೆಗೂ ಮುಟ್ಟುವಂತೆ ಮಾಡಬೇಕು ಎಂದರು.

‘ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಕಾರ್ಮಿಕರನ್ನು ಶೋಷಣೆ ಮಾಡಿ ಮಾಲೀಕರು ಅಪಾರ ಸಂಪತ್ತನ್ನು ದೋಚುತ್ತಿದ್ದಾರೆ. ಇದರಿಂದ ಶೇ 99ರಷ್ಟು ಜನರು ಸಂಕಷ್ಟದಲ್ಲಿ ಬದುಕುವಂತಾಗಿದೆ. ಕೇವಲ ಶೇ 1ರಷ್ಟಿರುವ ಬಂಡವಾಳಶಾಹಿಗಳೂ ನಮ್ಮೆಲ್ಲರಿಗೂ ಸೇರಬೇಕಾದ ಸಂಪತ್ತಿನ ಒಡೆಯರಾಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಜಗತ್ತಿನ ರೋಗಗ್ರಸ್ತ ದೇಶವೆಂಬ ಹೆಸರು ಪಡೆದಿದ್ದ ರಷ್ಯಾ ಆಳುತ್ತಿದ್ದ ಜಾರ್ ದೊರೆ ವಿರುದ್ಧ ಅಲ್ಲಿನ ಜನತೆ ಸಂಘಟಿಸಿದ ಕಮ್ಯುನಿಸ್ಟ್‌ ನಾಯಕ ಲೆನಿನ್‌ 1917ರಲ್ಲಿ ಸಮಾಜವಾದಿ ಕ್ರಾಂತಿಗೆ ಮುನ್ನುಡಿ ಬರೆದರು. ಈ ಕ್ರಾಂತಿಯ ಬಳಿಕ ಸೋವಿಯತ್ ರಷ್ಯಾದಲ್ಲಿ ಕೆಲವೇ ವರ್ಷಗಳಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣ, ಉದ್ಯೋಗ, ವಸತಿ, ಆರೋಗ್ಯ ಸೇವೆಯಂತಹ ಮೂಲಸೌಕರ್ಯಗಳನ್ನು ಖಾತ್ರಿ ಪಡಿಸಲಾಯಿತು’ ಎಂದು ತಿಳಿಸಿದರು.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಸ್ಟಾಲಿನ್‌ ನೇತೃತ್ವದಲ್ಲಿ ಮನುಕುಲ ವಿರೋಧಿ, ಫ್ಯಾಸಿಸ್ಟ್ ಕ್ರೂರಿ ಹಿಟ್ಲರ್‌ನನ್ನು ಸೋಲಿಸಿ ಸಮಾಜವಾದದ ಪತಾಕೆಯನ್ನು ಎತ್ತಿ ಹಿಡಿದ ಕೀರ್ತಿ ಸಮಾಜವಾದಿ ರಷ್ಯಾಕ್ಕೆ ಸಲ್ಲುತ್ತದೆ ಎಂದು ಹೇಳಿದರು.

ನೋಟು ಅಮಾನ್ಯೀಕರಣದಿಂದ ಸಾಮಾನ್ಯ ಜನತೆಗೆ ಯಾವುದೇ ಉಪಯೋಗವಾಗಲಿಲ್ಲ. ಬದಲಿಗೆ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡರು. ದೇಶದ ಆರ್ಥಿಕತೆ ನೆಲಕಚ್ಚಿತು. ಆದ್ದರಿಂದ ಬಂಡವಾಳಶಾಹಿ ಪರವಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ಗಳಂತಹ ಪಕ್ಷಗಳನ್ನು ಧಿಕ್ಕರಿಸಿ ಬೃಹತ್ ಹೋರಾಟ ಕಟ್ಟುವ ಮೂಲಕ ಭಾರತದ ಸಮಾಜವಾದಿ ಕ್ರಾಂತಿಗೆ ಸಜ್ಜಾಗಬೇಕು ಎಂದು ಕಿವಿಮಾತು ಹೇಳಿದರು.

ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ಬಿ.ಭಗವಾನ್ ರೆಡ್ಡಿ ಮಾತನಾಡಿ, ಜಗತ್ತಿನ ದುಡಿಯುವ ಜನತೆಗೆ ವಿಮುಕ್ತಿಯ ಪಥ ತೋರಿದ ನವೆಂಬರ್ ಕ್ರಾಂತಿ ಜರುಗಿ ನೂರು ವರ್ಷಗಳಾದವು. ಲೆನಿನ್‌ ನಾಯಕತ್ವದಲ್ಲಿ ರಷ್ಯಾದಲ್ಲಿ ನಡೆದ ಈ ಸಮಾಜವಾದಿ ಕ್ರಾಂತಿಯು ಇತಿಹಾಸದಲ್ಲಿ ಮೊದಲ ಬಾರಿಗೆ ಶೋಷಿತರನ್ನು ಅಧಿಕಾರಕ್ಕೆ ತಂದಿತು ಎಂದರು.

ಸಮಾರಂಭಕ್ಕೂ ಮೊದಲು ನಗರದ ವಿವಿಧೆಡೆ ಕಮ್ಯುನಿಸ್ಟ್‌ ನಾಯಕರ ಭಾವಚಿತ್ರಗಳ ಮೆರವಣಿಗೆ ನಡೆಸಲಾಯಿತು. ಬಾಳು ಜೇವೂರ, ಮಲ್ಲಿಕಾರ್ಜುನ ಎಚ್.ಟಿ., ಭರತ್‌ಕುಮಾರ ಎಚ್.ಟಿ, ಸಿದ್ದಲಿಂಗ ಬಾಗೇವಾಡಿ ಮೆರವಣಿಗೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.