ADVERTISEMENT

ಹಲಗಿ ನಿನಾದ; ಬಣ್ಣದ ರಂಗಿಗೆ ದಿನಗಣನೆ

ಡಿ.ಬಿ, ನಾಗರಾಜ
Published 28 ಫೆಬ್ರುವರಿ 2018, 7:22 IST
Last Updated 28 ಫೆಬ್ರುವರಿ 2018, 7:22 IST
ವಿಜಯಪುರದ ಡಾ.ಬಿ.ಆರ್‌. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದ ಗ್ಯಾಲರಿಯಲ್ಲಿ ಹಲಗಿ ಬಾರಿಸಿದ ಚಿಣ್ಣರ ಸಮೂಹ
ವಿಜಯಪುರದ ಡಾ.ಬಿ.ಆರ್‌. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದ ಗ್ಯಾಲರಿಯಲ್ಲಿ ಹಲಗಿ ಬಾರಿಸಿದ ಚಿಣ್ಣರ ಸಮೂಹ   

ವಿಜಯಪುರ: ಹೋಳಿ ಹುಣ್ಣಿಮೆಗೆ ಒಂದು ದಿನವಷ್ಟೇ ಬಾಕಿಯಿದೆ. ಕಾಮಣ್ಣನ ದಹನಕ್ಕೆ ಸಕಲ ಸಿದ್ಧತೆಗಳು ಬಿರುಸಿನಿಂದ ನಡೆದಿವೆ. ಮನೆಗಳ ಮುಂಭಾಗ, ಓಣಿಯ ಪ್ರಮುಖ ಸ್ಥಳಗಳಲ್ಲಿ ಕಾಮ ದಹನಕ್ಕೆ ಗುಂಡಿ ತೋಡುವ ಕೆಲಸ ಈಗಾಗಲೇ ಪೂರ್ಣಗೊಂಡಿದೆ.

ಬಜಾರ್‌ನಲ್ಲಿ ಕಾಮನ ಮೂರ್ತಿ, ಸಕ್ಕರೆ ಸರ, ಹಲಗಿಗಳ ಖರೀದಿ ಬಿರುಸಾಗಿದೆ. ವಾರ್ಷಿಕ ಪರೀಕ್ಷೆಗಳ ನಡುವೆಯೂ ಹೋಳಿಯ ಬಣ್ಣದಾಟದ ಸಂಭ್ರಮದಲ್ಲಿ ಮಿಂದೇಳಲು ಪಿಚಕಾರಿ ಖರೀದಿಗೆ ಚಿಣ್ಣರು; ಮುಂಬರುವ ವಿಧಾನಸಭಾ ಚುನಾವಣಾ ಸಿದ್ಧತೆಯ ಗುಂಗಿನಲ್ಲೇ ಯುವಕರು, ಬಣ್ಣದಾಟದ ಸಾಮಗ್ರಿ ಖರೀದಿಗೆ ಮುಗಿ ಬೀಳುವ ದೃಶ್ಯಾವಳಿ ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಗೋಚರಿಸುತ್ತಿದೆ.

ಶಿವರಾತ್ರಿ ಅಮಾವಾಸ್ಯೆ ಬಳಿಕ ಆಗಸದಲ್ಲಿ ಚಂದ್ರ ಗೋಚರಿಸಿದ ದಿನ ದಿಂದ ನಗರವೂ ಸೇರಿದಂತೆ ಜಿಲ್ಲೆಯ ಪಟ್ಟಣ, ಗ್ರಾಮೀಣ ಪ್ರದೇಶದ ಎಲ್ಲೆಡೆ ಹಲಗಿ ನಿನಾದ ಮಾರ್ದನಿಸುತ್ತಿದೆ. ಹುಣ್ಣಿಮೆ ಸಮೀಪಿಸಿದಂತೆ ಯುವಕರು, ಚಿಣ್ಣರ ಕೈಯಲ್ಲಿ ಹಲಗಿಗಳು ರಾರಾಜಿಸುತ್ತಿವೆ. ಓಣಿ ಓಣಿಗಳಲ್ಲೂ ರಾತ್ರಿಯಿಡಿ ಹಲಗಿಯದ್ದೇ ಸದ್ದು. ಇದೀಗ ಈ ನಿನಾದ ಉನ್ಮಾದ ಸ್ಥಿತಿ ತಲುಪಿದೆ.

ADVERTISEMENT

ಬಣ್ಣದೋಕುಳಿಯ ಸಂಭ್ರಮ ಮನದಲ್ಲಿ ಮೂಡಿದೆ. ಅಬಾಲ ವೃದ್ಧರಾದಿಯಾಗಿ ಎಲ್ಲರೂ ಕಾಮ ದಹನ, ಬಣ್ಣದೋಕುಳಿ, ರಂಗ ಪಂಚಮಿಯ ಬಣ್ಣದ ರಂಗಿನಾಟದ ಆಚರಣೆಗೆ ಕಾತರದಿಂದ ಕಾಯುತ್ತಿದ್ದಾರೆ. ಪ್ರತಿ ಮನೆ ಮನೆಯಲ್ಲೂ ಬಣ್ಣ ಖರೀದಿ ಭರ್ಜರಿಯಾಗಿ ನಡೆದಿದೆ.

‘ಮಾರ್ಚ್‌ 1ರ ಗುರುವಾರ ಹೋಳಿ ಹುಣ್ಣಿಮೆ. ಹುಣ್ಣಿಮೆಯ ಐದು ದಿನ ಮುಂಚಿತವೇ ಕಾಮದಹನದ ಸ್ಥಳ ನಿಗದಿಪಡಿಸಲಾಗಿದೆ. ಮನೆ ಮುಂದೆ, ಓಣಿಯ ಪ್ರಮುಖ ಸ್ಥಳಗಳಲ್ಲಿ ಗುಂಡಿ ತೋಡಲಾಗಿದೆ. ಹುಣ್ಣಿಮೆಯ ಮುಸ್ಸಂಜೆ ಈ ಗುಂಡಿ ಸುತ್ತಲೂ ಸಗಣಿಯಿಂದ ಸಾರಿಸಿ, ಬಣ್ಣ ಬಣ್ಣದ ರಂಗೋಲಿಯ ಚಿತ್ತಾರ ಬಿಡಿಸಿ ಕಾಮನ ಮೂರ್ತಿ ಪ್ರತಿಷ್ಠಾಪಿಸಲಾಗುವುದು. ಧಾರ್ಮಿಕ ವಿಧಿ–ವಿಧಾನಗಳನ್ನು ಪೂರೈಸಿದ ಬಳಿಕ ಕಟ್ಟಿಗೆ, ಸೆಗಣಿಯ ಕುಳ್ಳಿನಿಂದ ಕಾಮ ದಹನ ನಡೆಸಲಾಗುವುದು. ಈ ಬೆಂಕಿಯಲ್ಲಿ ಕೆಲವೆಡೆ ಕಡಲೆ ಸುಡುವ ವಾಡಿಕೆಯೂ ಇದೆ’ ಎನ್ನುತ್ತಾರೆ ಎನ್‌.ಕೆ.ಮನಗೊಂಡ.

ಕಾಮದಹನದ ಮರು ದಿನವೇ ಬಣ್ಣದ ಸಂಭ್ರಮ. ಅಂದರೆ ಈ ಬಾರಿ ಬಣ್ಣದಾಟ ಶುಕ್ರವಾರ ರಂಗೇರಲಿದೆ. ಕೆಲವರು ಶನಿವಾರವೂ ಬಣ್ಣ ಎರಚುತ್ತಾರೆ. ರಂಗಪಂಚಮಿವರೆಗೂ ಬಣ್ಣದ ಸಂಭ್ರಮ ಮುಗಿಲು ಮುಟ್ಟಿರುತ್ತದೆ. ರಾಜಕಾರಣಿಗಳು, ಪಕ್ಷದ ಕಾರ್ಯಕರ್ತರು ಪರಸ್ಪರ ಬಣ್ಣ ಎರಚಿ ಸಂಭ್ರಮಿಸುತ್ತಾರೆ. ಈ ಬಾರಿ ಇದು ತುಸು ಹೆಚ್ಚೇ ಇರಲಿದೆ. ಮಾರ್ಚ್‌ 6ರ ಮಂಗಳವಾರ ರಂಗ ಪಂಚಮಿ. ಈ ರಂಗ ಪಂಚಮಿಯ ರಂಗಿನಾಟದೊಂದಿಗೆ ಹೋಳಿ ಸಂಭ್ರಮಕ್ಕೆ ತೆರೆ ಬೀಳಲಿದೆ.

ವರ್ಷಕ್ಕೊಮ್ಮೆ ಬರುವ ಹೋಳಿ ಹುಣ್ಣಿಮೆಗಾಗಿ ಕಾತರದಿಂದ ಕಾಯುವ ಯುವ ಸಮೂಹ, ಚಿಣ್ಣರ ತಂಡ ಇದೀಗ ಹೋಳಿ ಆಚರಣೆಗಾಗಿ ಅಂತಿಮ ಸಿದ್ಧತೆ ನಡೆಸಿದೆ. ಕಾಮದಹನಕ್ಕೆ ಬೀದಿ ಬೀದಿ ಸುತ್ತಿ ಕಟ್ಟಿಗೆ, ಕುಳ್ಳು ಸಂಗ್ರಹಿಸಿದೆ. ಯುವಕರ ತಂಡ ಹಲಗಿ ಬಾರಿಸಿ ಮನೆ ಮನೆಗಳಿಂದ ಚಂದಾ ವಸೂಲಿ ಮಾಡುವ ಮೂಲಕ ಹೋಳಿಗೆ ಅದ್ಧೂರಿ ಮುನ್ನುಡಿ ಬರೆದಿದೆ.

ಮನರಂಜನೆ ಸ್ಪರ್ಧೆ

ಬಜಾರ್‌ಗೆ ದಾಂಗುಡಿಯಿಟ್ಟು ಪಿಚಕಾರಿ, ಬಣ್ಣ ಖರೀದಿಸಿದೆ. ಮೂರು ದಿನ ಬಣ್ಣದೋಕುಳಿಯಲ್ಲಿ ಮಿಂದೇಳುವ ಸಂಭ್ರಮದ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದೆ. ಬಣ್ಣದಾಟಕ್ಕಾಗಿಯೇ ನಗರದ ಕಿರಾಣ ಬಜಾರ್, ಎಲ್‌ಬಿಎಸ್‌ ಮಾರುಕಟ್ಟೆ, ಸರಾಫ್ ಬಜಾರ್ ಸೇರಿದಂತೆ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ವಹಿವಾಟು ಬಂದ್ ಆಗಲಿದೆ. ಬಣ್ಣದಾಟದ ಅಂಗವಾಗಿಯೇ ಗಲ್ಲಿಗಳಲ್ಲಿ ಮನರಂಜನೆ ಸ್ಪರ್ಧೆ ಆಯೋಜನೆಗೊಂಡಿರುವುದು ಈ ಬಾರಿಯ ವಿಶೇಷ.

* * 

ತೊಗಲಿನ ಹಲಗಿ ಕೇಳೋರೇ ಇಲ್ಲ. ಫೈಬರ್‌ ಹಲಗಿಗೆ ಬೇಡಿಕೆ ಹೆಚ್ಚಿದೆ. ಆವಾಜ್‌ ಹೆಚ್ಚು ಬರುತ್ತದೆ ಎಂದು ಮುಗಿ ಬಿದ್ದು ಖರೀದಿಸುತ್ತಾರೆ. ವ್ಯಾಪಾರ ಡಲ್‌ ಆಗಿದೆ
ಅರ್ಜುನ್ ಸೋನವಾನಿ ಹಲಗಿ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.