ADVERTISEMENT

ಹೊಸ ಮುಖ,ಯುವಕರಿಗೆ ಮಣೆ

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಿಗೆ ಟಿಕೆಟ್‌ ಇಲ್ಲಾ; ಜೆಡಿಎಸ್‌ನಲ್ಲಿ ವಲಸಿಗರಿಗೆ ಮನ್ನಣೆ

ಡಿ.ಬಿ, ನಾಗರಾಜ
Published 21 ಏಪ್ರಿಲ್ 2018, 12:11 IST
Last Updated 21 ಏಪ್ರಿಲ್ 2018, 12:11 IST

ವಿಜಯಪುರ: ಬಿಜೆಪಿ ಶುಕ್ರವಾರ ಬಿಡುಗಡೆ ಮಾಡಿದ 3ನೇ ಪಟ್ಟಿಯಲ್ಲಿ ಬಸವನ ಬಾಗೇವಾಡಿ, ನಾಗಠಾಣ ಮೀಸಲು ಮತಕ್ಷೇತ್ರಗಳ ಹುರಿಯಾಳು ಘೋಷಿ ಸಿದ್ದು, ಯುವಕರಿಗೆ ಮಣೆ ಹಾಕಿದೆ.

ಬಸವನಬಾಗೇವಾಡಿಯಿಂದ ಬಿಎಸ್‌ವೈ ಆಪ್ತ, ಈ ಹಿಂದಿನ ಚುನಾವಣೆ ಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಸಂಗರಾಜ ದೇಸಾಯಿ, ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಅವರನ್ನು ಹಿಂದಿಕ್ಕಿ ಟಿಕೆಟ್‌ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದಿಂದ ಡಾ.ಗೋಪಾಲ ಕಾರಜೋಳ ಟಿಕೆಟ್ ಗಿಟ್ಟಿಸಿದ್ದು, ಬಿಜೆಪಿ ಹಿರಿಯ ಮುಖಂಡ, ಮುಧೋಳ ಶಾಸಕ ಗೋವಿಂದ ಕಾರಜೋಳ ತಮ್ಮ ಪುತ್ರನನ್ನು ರಾಜಕೀಯಕ್ಕೆ ಪದಾರ್ಪಣೆ ಮಾಡಿಸಿದಂತಾಗಿದೆ.

ADVERTISEMENT

ಎರಡೂ ಕ್ಷೇತ್ರಗಳಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಟಿಕೆಟ್‌ ಘೋಷಣೆಗೂ ಮುನ್ನವೇ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿಠ್ಠಲ ಕಟಕದೊಂಡ ನಗರದ ಹೊರ ವಲಯದಲ್ಲಿರುವ ಅಲಿಯಾಬಾದ್‌ ಬಳಿಯ ತಮ್ಮ ತೋಟದ ನಿವಾಸದಲ್ಲಿ ಬೆಂಬಲಿಗರು, ಅಭಿಮಾನಿಗಳ ಸಭೆ ನಡೆಸಿ, ಕಣ್ಣೀರಿಟ್ಟರು ಎನ್ನಲಾಗಿದೆ.

ಎಸ್‌.ಕೆ.ಬೆಳ್ಳುಬ್ಬಿ ಬೆಂಬಲಿಗರು ಸಹ ಬಾಗೇವಾಡಿಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಶನಿವಾರ ಬೆಳಿಗ್ಗೆ ಈ ವಿದ್ಯಮಾನಕ್ಕೆ ಸಂಬಂಧಿಸಿದಂತೆ ಕೊಲ್ಹಾರ ಪಟ್ಟಣದ ಬೆಳ್ಳುಬ್ಬಿ ನಿವಾಸದಲ್ಲೇ ಸಭೆ ನಡೆಸಿ, ಮುಂದಿನ ನಡೆಯ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದು ತಿಳಿದು ಬಂದಿದೆ.

ಕಣ್ಣೀರ ಧಾರೆ: ಟಿಕೆಟ್‌ ಕೈತಪ್ಪುವ ಮುನ್ಸೂಚನೆ ಇದ್ದುದರಿಂದ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿಠ್ಠಲ ಕಟಕದೊಂಡ ಘೋಷಣೆಗೂ ಮುನ್ನವೇ ಶುಕ್ರವಾರ ಮಧ್ಯಾಹ್ನ ತಮ್ಮ ಅಭಿಮಾನಿಗಳ ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿದರು.

‘ನನ್ನ ಇಬ್ಬರು ಮಕ್ಕಳು ಮೃತಪಟ್ಟ ಸಂದರ್ಭ ಬಿಎಸ್‌ವೈ ತಂದೆ ಸ್ಥಾನದಲ್ಲಿ ನಿಂತು ಸಾಂತ್ವನ ಹೇಳಿದ್ದರು. ದುಃಖ ಮರೆ. ಕ್ಷೇತ್ರದ ಜನರನ್ನೇ ನಿನ್ನ ಮಕ್ಕಳೆಂದು ತಿಳಿದು ಅವರ ಸೇವೆ ಮಾಡು. ಒಳ್ಳೆಯದಾಗುತ್ತೆ ಎಂದಿದ್ದರು. ಅದರಂತೆ ನಡೆದುಕೊಂಡಿದ್ದೆ. ಮೊನ್ನೆ ಬೆಂಗಳೂರಿಗೆ ಕರೆಸಿಕೊಂಡು ನನ್ನ ಸಂಕಷ್ಟದ ಕಾಲದಲ್ಲಿ ಜತೆಯಲ್ಲಿದ್ದವ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನನ್ನನ್ನು ಬೆಂಬಲಿಸಿದ್ದೆ. ಯಾವ ಆಮಿಷಕ್ಕೂ ಬಲಿಯಾಗಿರಲಿಲ್ಲ. ಇದೀಗ ನಿನ್ನ ಕೈ ಹಿಡಿಯಲು ನನಗಾಗುತ್ತಿಲ್ಲ ಎಂದು ನೊಂದು ಕಣ್ಣೀರಿಟ್ಟರು.

‘ಕುಟುಂಬ ರಾಜಕಾರಣಕ್ಕೆ ಬಲಿಯಾದೆ. ವರಿಷ್ಠರ ಹಂತದಲ್ಲಿ ಬ್ಲಾಕ್‌ಮೇಲ್‌ ಮಾಡಿ, ನಿನಗೆ ಟಿಕೆಟ್‌ ತಪ್ಪಿಸುತ್ತಿದ್ದಾರೆ ಎಂದೆಲ್ಲಾ ಗೋಳಾಡಿ
ದರು. ಅದನ್ನು ನೆನೆಸಿಕೊಂಡರೆ ತುಂಬಾ ನೋವಾಗುತ್ತೆ...’ ಎಂದು ಕಟಕದೊಂಡ ಸಭೆಯಲ್ಲಿ ನೆರೆದಿದ್ದ ಅಭಿಮಾನಿಗಳ ಎದುರು ಕಣ್ಣೀರಿಟ್ಟರು ಎಂದು ಸಭೆಯಲ್ಲಿ ದ್ದರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನೆರೆದಿದ್ದ ಬೆಂಬಲಿಗರು ನೀವು ಚಿಂತಿಸಬೇಡಿ. ನಿಮ್ಮಜೊತೆ ನಾವಿದ್ದೇವೆ. ಕಾಂಗ್ರೆಸ್‌ನಿಂದ ಅವಕಾಶವಿದೆ. ಸುಮ್ಮನೆ ಸ್ಪರ್ಧಿಸಿ’ ಎಂದು ಒತ್ತಾಯಿಸಿದರು ಎಂದು ತಿಳಿದು ಬಂದಿದೆ.

ಕಾಂಗ್ರೆಸ್‌ನತ್ತ ಕಟಕದೊಂಡ ಚಿತ್ತ?

ಕೇಂದ್ರದ ಮಾಜಿ ಗೃಹ ಸಚಿವ, ಕಾಂಗ್ರೆಸ್‌ ಹಿರಿಯ ಮುಖಂಡ ಸುಶೀಲ್‌ಕುಮಾರ್‌ ಶಿಂಧೆ ಸಂಪರ್ಕದಲ್ಲಿರುವ ವಿಠ್ಠಲ ಕಟಕದೊಂಡ ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದ ಟಿಕೆಟ್‌ಗೆ ಯತ್ನಿಸಿದ್ದಾರೆ ಎಂಬುದು ಮೂಲಗಳಿಂದ ಖಚಿತಪಟ್ಟಿದೆ. ಶಿಂಧೆ ಈ ವಿಚಾರದಲ್ಲಿ ಸ್ಥಳೀಯ ನಾಯಕ ಎಂ.ಬಿ.ಪಾಟೀಲ, ಮಲ್ಲಿಕಾರ್ಜುನ ಖರ್ಗೆ ಜತೆ ಚರ್ಚಿಸಿ ಹಸಿರು ನಿಶಾನೆಯ ಮುದ್ರೆಯೊತ್ತಿದ್ದಾರೆ. ಶನಿವಾರ ಕಟಕದೊಂಡ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ಈ ಕುರಿತಂತೆ ಸಚಿವ ಪಾಟೀಲ ಜತೆ ಚರ್ಚೆಯನ್ನು ನಡೆಸಿದ್ದಾರೆ ಎನ್ನಲಾಗಿದೆ. ಬಿ.ಎಸ್‌.ಯಡಿಯೂರಪ್ಪ ಸಹ ತಮ್ಮ ಆಪ್ತನನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು, ಮನವೊಲಿಸಲು ಮುಂದಾಗಿದ್ದಾರೆ ಎಂಬುದು ಗೊತ್ತಾಗಿದೆ.

ವಲಸಿಗರಿಗೆ ಟಿಕೆಟ್‌

ಬಿಜೆಪಿ ಟಿಕೆಟ್‌ ದೊರೆಯದಿದ್ದುರಿಂದ ಅಸಮಾಧಾನಿತರಾಗಿ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದ, ರಾಜುಗೌಡ ಪಾಟೀಲ ಕುದರಿಸಾಲವಾಡಗಿಗೆ ದೇವರಹಿಪ್ಪರಗಿ, ಮಂಗಳಾದೇವಿ ಬಿರಾದಾರ ಅವರಿಗೆ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಟಿಕೆಟ್‌ನ್ನು ಜೆಡಿಎಸ್‌ ಘೋಷಿಸಿದೆ.

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಇನ್ನೂ ಘೋಷಿಸಿಲ್ಲ. ದಿಢೀರ್‌ ಬೆಳವಣಿಗೆ ನಿರೀಕ್ಷೆಯಲ್ಲಿ ಎಚ್‌ಡಿಕೆ ಕಾದಿದ್ದಾರೆ ಎನ್ನಲಾಗಿದ್ದು, ವರಿಷ್ಠರ ನಿರ್ಧಾರದಿಂದ ಅಸಮಾಧಾನಗೊಂಡಿರುವ ಸ್ಥಳೀಯ ನಾಯಕಿ ರೇಷ್ಮಾ ಪಡೇಕನೂರ ಬಿ ಫಾರ್ಮ್ ಇಲ್ಲದೆ ಶುಕ್ರವಾರ ನಾಮಪತ್ರ ಸಲ್ಲಿಸಿದರು.

**

ಗುರುವಾರವಷ್ಟೇ ಬಿಎಸ್‌ವೈ ನೀನೇ ಅಭ್ಯರ್ಥಿ ಎಂದು ಹೇಳಿದ್ದರು. ಶುಕ್ರವಾರ ಯಾವ ಕಾರಣಕ್ಕಾಗಿ ಬದಲಾವಣೆ ಮಾಡಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ – ಎಸ್‌.ಕೆ.ಬೆಳ್ಳುಬ್ಬಿ, ಬಿಜೆಪಿ ಟಿಕೆಟ್ ವಂಚಿತರು.

**

ಹೊರಗಿನವರಿಂದ ಒಳಗಿನವರಿಗೆ ಶೋಷಣೆ ಆಗುತ್ತಿದೆ. ಕುಟುಂಬ ರಾಜಕಾರಣಕ್ಕೆ ಪಕ್ಷ ಬಲಿಯಾಗಿದೆ. ಅಧಿಕಾರಕ್ಕೆ ಎಂದೂ ಜೋತು ಬಿದ್ದವರಲ್ಲ – ವಿಠ್ಠಲ ಕಟಕದೊಂಡ,ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.