ADVERTISEMENT

‘ಕಲಿಯುಗದ ದಾಸೋಹಿ ಅನ್ನದಾನೇಶ್ವರರು’

ಯಲ್ಲಮ್ಮನಗುಡ್ಡದಲ್ಲಿ ಲಕ್ಷಾಂತರ ಭಕ್ತರಿಗೆ ಊಟದ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2015, 6:28 IST
Last Updated 8 ಜನವರಿ 2015, 6:28 IST

ಸವದತ್ತಿ: ಉತ್ತರ ಕರ್ನಾಟಕದ ಪ್ರಸಿದ್ಧ ಯಾತ್ರಾ­ತಾಣವಾದ ಶ್ರೀ ರೇಣುಕಾದೇವಿಯ ಯಲ್ಲಮ್ಮನ­ಗುಡ್ಡದಲ್ಲಿ ಜಮಖಂಡಿ ತಾಲ್ಲೂಕಿನ ಬಂಡಿಗಣಿಯ ಶ್ರೀ ಬಸವಗೋಪಾಲ ನೀಲಮಾಣಿ­ಕಮಠದ ಚಕ್ರವರ್ತಿ ಅನ್ನದಾನೇಶ್ವರರು ಆಯೋ­ಜಿ­ಸಿದ್ದ ದಾಸೋಹ ಕೇಂದ್ರಗಳಲ್ಲಿ ಲಕ್ಷಾಂತರ ಭಕ್ತರು ಮಹಾಪ್ರಸಾದ ಸ್ವೀಕರಿಸಿದರು.

ಎಲ್ಲಿಯೇ ಜಾತ್ರೆ, ಉತ್ಸವಗಳು ನಡೆಯಲಿ ಅಲ್ಲಿ ನೀಲಮಾಣಿಕಮಠದ ದಾಸೋಹ ಕೇಂದ್ರ­ದಲ್ಲಿ ಮಹಾಪ್ರಸಾದ ವ್ಯವಸ್ಥೆ ನಡೆಯುವುದು. 1970ರಲ್ಲಿ ಆರಂಭವಾದ ದಾಸೋಹ ಕಾರ್ಯ­ಕ್ರಮ ಇಲ್ಲಿಯವರೆಗೆ ಭಾರಿ ಪ್ರಮಾಣದಲ್ಲಿ ಮುಂದುವರಿದಿದ್ದರಿಂದ ಅನ್ನದಾನೇಶ್ವರರನ್ನು ಕಲಿಯುಗದ ದಾಸೋಹಿ, ಬಸವಣ್ಣನೆಂದೇ ಪ್ರಚಲಿತರಾಗಿದ್ದಾರೆ.

ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಮೂರು ದಿನ­ದಿಂದ, ಮೂರು ಕಡೆಗಳಲ್ಲಿ ದಾಸೋಹ ಕೇಂದ್ರ­ಗಳನ್ನು ತೆರೆಯಲಾಗಿದ್ದು, ಅಲ್ಲಿ ಸುಮಾರು 6 ರಿಂದ 7 ಲಕ್ಷ ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದ್ದಾರೆ ಎಂದು ಅಂದಾಜಿಸಲಾಗಿದೆ. ‘ಇಷ್ಟೊಂದು ಜನರಿಗೆ ವ್ಯವಸ್ಥಿತವಾಗಿ ಊಟದ ವ್ಯವಸ್ಥೆ ಮಾಡುವುದು. ಯಾವುದೇ ಸರ್ಕಾರ ಹಾಗೂ ಆಡಳಿತ ಮಂಡಳಿಯಿಂದ ಸಾಧ್ಯವಿಲ್ಲ.

ಅನ್ನದಾನದಂತಹ ಪುಣ್ಯದ ಕೆಲಸ ಬಂಡಿಗಣಿಯ ಶ್ರೀಮಠ ಮಾಡುತ್ತಿರುವುದು ಸ್ವಾಗ­­ತಾರ್ಹ ಎಂದು ಮೂಡಲಗಿಯ ಹಳ್ಳೂರು ಗ್ರಾಮದ ಭಕ್ತ ಮುರಿಗೆಪ್ಪ ಮಾಲಗಾರ ಹೇಳಿದರು. ‘ಮೊದಲು ಪೇಠೋಬಾ, ನಂತರ್ ವಿಠೋಬಾ’ ಎಂಬ ನಾಣ್ಣುಡಿಯಂತೆ ಬಂಡಿಗ­ಣಿಯ ಶ್ರೀಮಠ ಅನ್ನ ದಾಸೋಹದಲ್ಲಿ ತೊಡಗಿದೆ ಎಂದು ಅನ್ನದಾನೇಶ್ವರರು ತಿಳಿಸಿದರು.

೧೫೨ ಕಡೆ ದಾಸೋಹ: ಬಂಡಿಗಣಿಯ ನೀಲ­ಮಾಣಿ­ಕ­ಮಠವು ರಾಜ್ಯದ ಹಾಗೂ ನೆರೆಯ ರಾಜ್ಯ­ಗಳಾದ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳನಾಡುಗಳಲ್ಲಿನ ಪ್ರಮುಖ ಯಾತ್ರಾತಾಣ­ಗಳಲ್ಲಿ, ಧಾರ್ಮಿಕ ಸ್ಥಳಗಳಲ್ಲಿ ಯಾರದೇ ಸಹಕಾರವಿಲ್ಲದೆ. ಇಡೀ ವರ್ಷದಲ್ಲಿ ಸುಮಾರು 152 ಕಡೆಗಳಲ್ಲಿ ಉಚಿತ ಅನ್ನ ದಾಸೋಹ ನಡೆಯುತ್ತಿದೆ.

ರಾಜ್ಯದ ಯಲ್ಲಮ್ಮನಗುಡ್ಡ, ಶಿರಸಂಗಿ, ಚಿಕ್ಕೂಡಿಯ ಯಡಿಯೂರ ವೀರಭದ್ರೇಶ್ವರ ಜಾತ್ರೆ, ಚಿಂಚಲಿ ಮಾಯಕ್ಕಾದೇವಿ ಜಾತ್ರೆ, ಸಂಡೂರಿನ ಶಣಮುಖಸ್ವಾಮಿ ಜಾತ್ರೆ, ಸೋಗಲದ ಶ್ರೀಸೋಮೆಶ್ವರ ಜಾತ್ರೆ, ಜಮಖಂಡಿ ಹನಮಂತದೇವರ ಹಾಗೂ ಕಲ್ಲೂಳ್ಳಿ ಹನಮಂತ­ದೇವರ ಜಾತ್ರೆ ಅನ್ನ ದಾಸೋಹ ನಡೆಯುತ್ತಿದೆ.

ಮಹಾರಾಷ್ಟ್ರದ ಪಂಢರಪುರದಲ್ಲಿ ಆರು ದಿನ, ಉಲಜಂತಿಯ ಮಾನಿಂಗರಾಯ, ಗುಡ್ಡಾಪುರ ದಾನಮ್ಮನ ಜಾತ್ರೆ, ಕೀಳೆಗಾಂವ ಬಸವಣ್ಣ, ತುಳಜಾಪುರದ ಅಂಬಾಭವಾನಿ ಜಾತ್ರೆ, ಆಂಧ್ರದ ಶ್ರೀಶೈಲಂನಲ್ಲಿ 7 ದಿನಗಳ ದಾಸೋಹ ಹಾಗೂ ತಮಿಳನಾಡಿ­ನಲ್ಲಿ­ಯೂ ಅನ್ನದಾಸೋಹ ವ್ಯವಸ್ಥೆ ಮಾಡುತ್ತಾರೆ.

ವಿಶೇಷ ಊಟ: ಪ್ರತಿದಿನ ಒಂದೊಂದು ತರಹದ ಊಟದ ವ್ಯವಸ್ಥೆ ಮಾಡುತ್ತಾರೆ. ಗೋಧಿ ಹುಗ್ಗಿ, ಬೂಂದಿ, ಹೋಳಿಗೆ, ಕಡಬು (ಕರ್ಚಿಕಾಯಿ), ಮಾದಲಿ, ತುಪ್ಪ, ಸಂಡಿಗೆ, ಮಸಾಲಿ ಹಾಗೂ ಬಿಳಿ ಅನ್ನ, ಸಾಂಬಾರ, ತರಕಾರಿ ಇರುವುದು.
ಲಕ್ಷಾಂತರ ಭಕ್ತರ ಊಟದ ತಯಾರಿಯನ್ನು 25 ಜನರು ಅಡುಗೆ ಮಾಡುವರು, ಊಟ ಬಡಿಸಲು 450 ಕ್ಕೂ ಹೆಚ್ಚು ಜನರು ಸೇವೆ ಸಲ್ಲಿಸಿದ್ದಾರೆ. ದಾಸೋಹ ಆರಂಭವಾಗುತ್ತಿದ್ದಂತೆ ಮುತ್ತೈದೆ­ಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯುವುದು, ಅಲ್ಲದೇ ಸಾವಿರಾರು ಮಹಿಳೆಯರಿಗೆ ವಸ್ತ್ರದಾನ ಸಹ ನಡೆಯುವುದು.
ಸದಾಶಿವ ಮಿರಜಕರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.