ADVERTISEMENT

‘ಬದುಕಿನ ಪ್ರತಿಕ್ಷಣವು ಅಮೂಲ್ಯ’

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 5:34 IST
Last Updated 13 ಡಿಸೆಂಬರ್ 2013, 5:34 IST

ಇಂಡಿ: ಈಶಾವಾಸ್ಯೋಪ ನಿಷತ್ತು ಗುರು ಶಿಷ್ಯರ ಮಧ್ಯ ದಲ್ಲಿ ಅರಳಿದ ಸುಂದರ ಜ್ಞಾನ ಪುಷ್ಪ. ಅಲ್ಲಿ ತುಂಬಿ ನಿಂತಿದೆ ಅಮೃತೋಪದೇಶ. ನಮ್ಮ ಬದುಕನ್ನು ಪಾವನಗೊಳಿಸುವ ವಿದ್ಯೆ. ನಮ್ಮ ಬದುಕಿನ ಭೂಮಿ ಸಮೃದ್ಧವಾಗಿ ಬೆಳೆಯಬೇಕು. ವಕ್ಕಲಿಗ ಮುದ್ದಯ್ಯ 12ನೇ ಶತಮಾನದ ಒಬ್ಬ ಶ್ರೇಷ್ಠ ಶರಣ.

ಅವರ ಒಂದು ವಚನದಂತೆ ಅಂಗವೇ ಭೂಮಿ ಮನವೆಂಬ ಭೂಮಿಯಲ್ಲಿ ಪರಮ ಶಾಂತಿಯ ಬೆಳೆ ಫಲಿಸಬೇಕು. ದಾರಿಹೋಕರು ಒಂದು ಕ್ಷಣ ಸುಂದರ ಪೈರನ್ನು ನೋಡಿ ಆನಂದ ಆಶ್ಚರ್ಯ ಪಡುವಂತೆ ನಮ್ಮ ಬದುಕಿನಲ್ಲಿಯ ಆನಂದದ ಪೈರನ್ನು ನೋಡಿ ಅನ್ಯರಿಗೂ ಸಂತೋಷವಾಗಬೇಕು. ಆ ಬೆಳೆ ನಮ್ಮ ಬದುಕನ್ನು ಸಿರಿವಂತಗೊಳಿಸಬೇಕು. ಆದರೆ ಕಸ ಕಡ್ಡಿ ಬೆಳೆದ ಬದುಕು ಎಂದಾದರೂ ಸಂತೋಷ ಕೊಡುವುದೇ ? ಅತೀ ಆಸೆ, ದ್ವೇಷ, ವೈರ, ಕಾಮ ಇತ್ಯಾದಿ ಮನೋಭೂಮಿಯಲ್ಲಿ ಬೆಳೆಯಕೊಡಬಾರದು. ಅಮೂಲ್ಯವಾದ ಈ ಬದುಕಿನ ಭೂಮಿಯನ್ನು ಹಾಳುಗೆಡವಬಾರದು.

ಬದುಕಿನ ಪ್ರತಿಯೊಂದು ಕ್ಷಣವು ಅಮೂಲ್ಯ. ಇದರ ಜ್ಞಾನ ನಮಗಿರಬೇಕು. ಊರ ಹೊರಗೆ ಒಬ್ಬ ಭಿಕ್ಷುಕ ದಿನವೂ ಊರಲ್ಲಿ ಭಿಕ್ಷೆ ಬೇಡಿ ಹಾಳು ದೇಗುಲದಲ್ಲಿ ವಾಸಿಸುತ್ತಿದ್ದ. ಒಮ್ಮೆ ಆ ದೇಗುಲದಲ್ಲಿ ಭಕ್ಷಾನ್ನ ತಂದಿದ್ದ. ಅಲ್ಲಿಗೆ ಒಬ್ಬ ಯೋಗಿ ಬಂದು ಕುಳಿತುಕೊಂಡ, ಆತನಿಗೆ ಸ್ವಲ್ಪ ಅನ್ನ ಕೊಡಲು ಹೋದಾಗ ಯೋಗಿ ಆಶ್ಚರ್ಯದಿಂದ ಕೇಳಿದ.

ನೀನು ಕೈಯಲ್ಲಿ ಹಿಡಿದ ಭಿಕ್ಷಾಪಾತ್ರೆ ಯಾವುದು ಗೊತ್ತೇ ? ಆಗ ಅವನು ಇಲ್ಲ ಎಂದ ಭಿಕ್ಷುಕ. ಅಯ್ಯೋ ಅದು ‘ಪರುಷದ‘ ಪಾತ್ರೆ ಮುಟ್ಟಿಸಿದ ಕಬ್ಬಿಣವೂ  ಕೂಡಾ ಬಂಗಾರವಾಗಿ ಮಾಡಬಲ್ಲ ಅಮೂಲ್ಯ ಪಾತ್ರೆ ಅದು ಎಂದ ಯೋಗಿ. 40 ವರ್ಷಗಳಿಂದ ಅದರಲ್ಲಿಯೇ ಭಿಕ್ಷೆ ಬೇಡಿದ ಭಿಕ್ಷುಕ ಅಮೂಲ್ಯ ವಸ್ತು ಎಂದು ಅರಿತೊಡನೆಯೇ ನೆಲಕ್ಕೆ ಕುಸಿದು ಸಾವನ್ನಪ್ಪಿದ. ಸಿರಿವಂತನಾಗಿ ಬಾಳಬೇಕಿದ್ದ ಭಿಕ್ಷುಕ  ಭಿಕ್ಷುಕನಾಗಿಯೇ ಸತ್ತ.

ನಮ್ಮ ಪರಿಸ್ಥಿತಿಯೂ ಅದಕ್ಕಿಂತ ಭಿನ್ನವೇನಲ್ಲ. ನಮ್ಮ ಅಮೂಲ್ಯವಾದ ‘ಪರುಷದಂತಹ’ ಬದುಕನ್ನು ಕಾಮ ಕಾಂಚಣ, ತಮಂಧಗಳಿಗೆ ಗುರಿಯಾಗಿ ಬದುಕುತ್ತಿದ್ದೇವೆ ಎಂದು ಆತ್ಮಜ್ಞಾನಿ ಅನುಪಮಯೋಗಿ ಅಲ್ಲಮರು ಹೇಳಿದ್ದಾರೆ. ಅವರನ್ನು ಆತ್ಮಹನರು ಅಥವಾ ಆತ್ಮಘಾತಿಗಳೆಂದು ಕರೆಯುತ್ತಾರೆ. ಇತಿಹಾಸದ ಪುಟಗಳನ್ನೊಮ್ಮೆ ತಿರುವಿದರೆ ಸಮಾಧಾನದಿಂದ ಬದುಕಿದವರೆಲ್ಲಿ ? ಬರೀ ಹೋರಾಟ ,ಜಗಳ, ಭಯ, ಕಿತ್ತಾಟ ಕಾಮಕ್ಕಾಗಿಯೇ ಬದುಕಿದವರೇ ಹೆಚ್ಚು.

ADVERTISEMENT

ಎಲ್ಲೆಲ್ಲೋ ಕೆಲವರು ಜಗತ್ತನ್ನು ಬೆಳಗಲು ಬಂದರು. ಬುದ್ಧ, ಅಲ್ಲಮಪ್ರಭು, ಬಸವ, ಆಚಾರ್ಯ ಶಂಕರ, ಮದ್ವಾಚಾರ್ಯರು, ಚೈತನ್ಯ, ಮೀರಾ, ರಾಮಾನುಜ, ಮಹಾವೀರರಂಥಹ ಕೆಲವರು ಜ್ಞಾನ ದೀವಿಗೆಗಳನ್ನು ಹೊತ್ತಿಸಿಟ್ಟು ಹೋದರು. ಅವು ನಂದಾ ದೀವಿಗೆಯಂತೆ ಇಂದಿಗೂ ಕೂಡಾ ಬೆಳಕನ್ನು ನೀಡುತ್ತಿವೆ.

ಆದರೆ ನಾವು ಮಾತ್ರ ಚಿಂತೆ, ಭ್ರಾಂತಿಯಿಂದ ಹೊರಬರಲಿಲ್ಲ. ಜಗತ್ತನ್ನೇ ಗೆಲ್ಲಬೇಕು, ಎಲ್ಲರನ್ನೂ ಬದಲಾಯಿಸಬೇಕೆಂಬ ಭ್ರಾಂತಿಯಲ್ಲಿ ನನ್ನಲ್ಲಿ ಏನೂ ಇಲ್ಲ ಎಲ್ಲ ಅಯೋಮಯ ಎಂಬ ಚಿಂತೆ ಕಾಡುತ್ತಿದೆ. ಇದರಲ್ಲಿ ಸುಖವೆಲ್ಲಿದೆ ? ಆದರೆ ಒಂದು ಮಗುವನ್ನೇ ನೋಡಿ ಚಿಂತೆ ಭ್ರಾಂತಿಗಳಿಲ್ಲದ ಆನಂದದ ಬದುಕು, ಅದನ್ನು ನೋಡಿಯಾದರೂ ಮಗುವಿನಂತಹ ಮುಗ್ಧ ಬೆಳಕಿನ ಜೀವನವನ್ನು ಬಾಳಬೇಕು. ಮನದಲ್ಲಿ ಬ್ರಹ್ಮಜ್ಞಾನದ ಬೆಳಕು ಹರವಿರಬೇಕು. ತೃಪ್ತಿಯ ಬಾಳು ನಮ್ಮದಾಗಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.