ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಅವಳಿನಗರದಲ್ಲಿಅವೈಜ್ಞಾನಿಕ ರೋಡ್ ಹಂಪ್‌ಗಳಿವೆ ಎಂಬುದನ್ನು ಪೊಲೀಸ್ ಇಲಾಖೆಯೇ ದೃಢೀಕರಿಸಿದೆ!
ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾಗಿದ್ದ ಅರ್ಜಿಗೆ ನೀಡಿದ ಉತ್ತರದಲ್ಲಿ ಈ ಮಾಹಿತಿ ನೀಡಿರುವ ಹುಬ್ಬಳ್ಳಿ–ಧಾರವಾಡ ಸಂಚಾರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರು, ಅವೈಜ್ಞಾನಿಕ ರೋಡ್ ಹಂಪ್‌ಗಳ ರಚನೆ ಮತ್ತು ಗುಣಮಟ್ಟ, ಮಹಾನಗರ ಪಾಲಿಕೆ ಹಾಗೂ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ್ದು ಎಂದು ವಿವರಿಸಿದ್ದಾರೆ.
ವಕೀಲ ಹಾಗೂ ಮಾಹಿತಿ ಹಕ್ಕು ಹೋರಾಟಗಾರ ಮೋಹನ ಮಾಳಿಗೇರ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಉತ್ತರ ನೀಡಿರುವ ಅವರು, ‘ನಗರದಲ್ಲಿ ಒಟ್ಟು 36 ರೋಡ್ ಹಂಪ್‌ಗಳನ್ನು ಅಳವಡಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
‘ಈ ಪೈಕಿ ರಮೇಶ ಭವನದ ಪಕ್ಕದ ರಸ್ತೆಯಿಂದ ಅಶೋಕನಗರ ರೈಲ್ವೆ ಕೆಳ ಸೇತುವೆ ವರೆಗೆ ಒಟ್ಟು 11 ರೋಡ್ ಹಂಪ್‌ಗಳಿವೆ. ಗೋಪನಕೊಪ್ಪ ಬಸ್ ನಿಲ್ದಾಣದಿಂದ ಶ್ರೀನಗರದ ಚರ್ಚ್ ಕ್ರಾಸ್ ವರೆಗೆ ಒಟ್ಟು 6 ಅವೈಜ್ಞಾನಿಕ ರೋಡ್ ಹಂಪ್‌ಗಳಿವೆ’ ಎಂದು ಮಾಹಿತಿ ನೀಡಿದ್ದಾರೆ.
ಅಲ್ಲದೇ, ಅಶೋಕನಗರ ಪೊಲೀಸ್ ಠಾಣೆಯಿಂದ ನೃಪತುಂಗ ಬೆಟ್ಟದವರೆಗೆ, ರಾಜನಗರದಲ್ಲಿರುವ ಕ್ರಿಕೆಟ್ ಮೈದಾನದವರೆಗೆ ಹಾಗೂ ಗೋಪನಕೊಪ್ಪ ಬಸ್ ನಿಲ್ದಾಣದಿಂದ ಜೆ.ಕೆ.ಸ್ಕೂಲ್ ಮೂಲಕ ಡಾ.ಗಂಗೂಬಾಯಿ ಹಾನಗಲ್ಲ ಸ್ಮಾರಕದ ವರೆಗಿನ ರಸ್ತೆಯಲ್ಲಿ ಅವೈಜ್ಞಾನಿಕ ರೋಡ್ ಹಂಪ್‌ಗಳಿವೆ ಎಂದು ಮಾಹಿತಿ ನೀಡಿದ್ದಾರೆ. ಆದರೆ, ಈ ರಸ್ತೆಗಳಲ್ಲಿರುವ ಅವೈಜ್ಞಾನಿಕ ರೋಡ್ ಹಂಪ್‌ಗಳ ಸಂಖ್ಯೆಯನ್ನು ಮಾತ್ರ ಹೇಳಿಲ್ಲ!
ಮೇಲ್ಮನವಿಗೆ ನಿರ್ಧಾರ: ನಗರದಲ್ಲಿರುವ ಅವೈಜ್ಞಾನಿಕ ರೋಡ್ ಹಂಪ್‌ಗಳ ಕುರಿತು ಸಂಚಾರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ನೀಡಿರುವ ಮಾಹಿತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮೋಹನ್ ಮಾಳಿಗೇರ, ‘ನನಗೆ ಸಲ್ಲಿಸಿರುವ ಮಾಹಿತಿ ಅಪೂರ್ಣವಾಗಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಶೀಘ್ರವೇ ಮೇಲ್ಮನವಿ ಸಲ್ಲಿಸುತ್ತೇನೆ’ ಎಂದು ಸ್ಪಷ್ಟಪಡಿಸಿದರು.
‘ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಕೇವಲ 36 ರೋಡ್ ಹಂಪ್‌ಗಳಿವೆ ಎಂಬುದನ್ನು ನಂಬಲಿಕ್ಕಾಗದು. ಅದೂ ಅಲ್ಲದೇ, ಅವೈಜ್ಞಾನಿಕ ರೋಡ್ ಹಂಪ್‌ಗಳ ಸಂಖ್ಯೆಯನ್ನು ಸಹ ಸ್ಪಷ್ಟವಾಗಿ ನೀಡಿಲ್ಲ. ಹೀಗಾಗಿ ನಿಖರ ಮಾಹಿತಿ ನೀಡುವಂತೆ ಕೋರಿ ಮೇಲ್ಮನವಿ ಸಲ್ಲಿಸುತ್ತೇನೆ’ ಎಂದರು.
‘ಹಾಗೆ ನೋಡಿದರೆ, ಅವಳಿನಗರದಲ್ಲಿ ಒಂದೇ ಒಂದು ರೋಡ್ ಹಂಪ್ ಸಹ ಇಂಡಿಯನ್ ರೋಡ್ ಕಾಂಗ್ರೆಸ್‌ನ ನಿಯಮಾವಳಿ ಪ್ರಕಾರ ಇಲ್ಲ. ಈ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಮಹಾನಗರ ಪಾಲಿಕೆ ಮತ್ತು ಲೋಕೋಪಯೋಗಿ ಇಲಾಖೆ ವಿಫಲವಾಗಿವೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ’ ಎಂದೂ ಅಭಿಪ್ರಾಯಪಟ್ಟರು.
ಬದಲಾಗದ ರೋಡ್ ಹಂಪ್ ಸ್ಥಿತಿ!
ಅವಳಿ ನಗರದಲ್ಲಿರುವ ಅವೈಜ್ಞಾನಿಕ ರೋಡ್ ಹಂಪ್‌ಗಳು, ಅವುಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಕುರಿತಂತೆ ‘ಪ್ರಜಾವಾಣಿ’ 2013ರ ನವೆಂಬರ್ 8ರಂದು ವಿಶೇಷ ವರದಿಯನ್ನು ಪ್ರಕಟಿಸಿತ್ತು. ಈ ವರದಿಯನ್ನು ಉಲ್ಲೇಖಿಸಿ ಅವಳಿನಗರದಲ್ಲಿರುವ ನಾಲ್ಕು ಸಂಚಾರ ಠಾಣೆಗಳಿಗೆ ನವೆಂಬರ್ 28ರಂದು ಪತ್ರ ಬರೆದಿದ್ದ ಸಂಚಾರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರು, ಆಯಾ ಠಾಣೆ ವ್ಯಾಪ್ತಿಯಲ್ಲಿ ‘ಇಂಡಿಯನ್ ರೋಡ್ ಕಾಂಗ್ರೆಸ್’(ಐಆರ್‌ಸಿ) ನಿಯಮಾವಳಿ ಪ್ರಕಾರ ಇರದ ರೋಡ್ ಹಂಪ್‌ಗಳನ್ನು ಪತ್ತೆ ಹಚ್ಚುವಂತೆ ಸೂಚಿಸಿದ್ದರು. ಅಲ್ಲದೇ, ಅವೈಜ್ಞಾನಿಕ ಹಂಪ್‌ಗಳನ್ನು ತೆಗೆಸಿ, ಐಆರ್‌ಸಿ ನಿಯಮಗಳ ಪ್ರಕಾರವೇ ಅವುಗಳನ್ನು ನಿರ್ಮಿಸಲು ಕ್ರಮ ಕೈಗೊಂಡು ಒಂದು ವಾರದ ಒಳಗಾಗಿ ಅನುಪಾಲನಾ ವರದಿ ಸಲ್ಲಿಸುವಂತೆಯೂ ಸೂಚಿಸಿದ್ದರು. ಆದರೆ, ಈ ವರೆಗೂ ನಗರದಲ್ಲಿ ಒಂದೇ ಒಂದು ರೋಡ್ ಹಂಪ್ ಬದಲಾಗಿಲ್ಲ!
ಇನ್ನು, ನಗರದ ಸದ್ಭಾವನಾ ಸಮಿತಿ ಸಮಿತಿ ಈ ಸಂಬಂಧ ಮಹಾನಗರ ಪಾಲಿಕೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದು, ವಿಚಾರಣೆ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.