ವಿಜಯಪುರ: ಇಂಡಿ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯ ಸರ್ಕಾರದಿಂದ ಕೈಗೊಳ್ಳಲಾಗಿರುವ ₹4,564 ಸಾವಿರ ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ, ಲೋಕಾರ್ಪಣೆ ಕಾರ್ಯಕ್ರಮ ಜುಲೈ 14ರಂದು ಬೆಳಿಗ್ಗೆ 11ಕ್ಕೆ ನಡೆಯಲಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ತಿಳಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಂಬಂಧ ಪಟ್ಟ ಇಲಾಖೆಗಳ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಹೊರ್ತಿ–ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯ 2 ಮತ್ತು 3ನೇ ಹಂತಕ್ಕೆ ಶಂಕು ಸ್ಥಾಪನೆ, ತಿಡಗುಂದಿ ಶಾಖಾ ಕಾಲುವೆಗೆ ಪೈಪ್‌ಲೈನ್ ಅಳವಡಿಕೆಗೆ ಶಂಕು ಸ್ಥಾಪನೆ ಹಾಗೂ ಇಂಡಿ ಮತ್ತು ಚಡಚಣ ತಾಲ್ಲೂಕಿನ 19 ಕೆರೆ ತುಂಬವ ಯೋಜನೆ ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.
₹250 ಕೋಟಿ ಮೊತ್ತದಲ್ಲಿ ಕೈಗೊಳ್ಳಲಾಗಿರುವ ಚಡಚಣ–ಗಾಣಗಾಪುರ ರಸ್ತೆ(115 ಕಿ.ಮೀ) ಅಭಿವೃದ್ಧಿ, ₹65 ಕೋಟಿ ಮೊತ್ತದಲ್ಲಿ ಪಡನೂರ–ಅಂಕರಲಗಿ ನಡುವೆ ಭೀಮಾ ನದಿಗೆ ಸೇತುವೆ ನಿರ್ಮಾಣ, ₹10 ಕೋಟಿ ವೆಚ್ಚದಲ್ಲಿ ಇಂಡಿ ರೈಲು ನಿಲ್ದಾಣದಿಂದ ಹಲಸಂಗಿ ರಾಷ್ಟ್ರೀಯ ಹೆದ್ದಾರಿ ವರೆಗೆ ರಸ್ತೆ ಸುಧಾರಣೆ, ₹6.5 ಕೋಟಿ ವೆಚ್ಚದಲ್ಲಿ ಔರದ್ –ಸದಾಶಿವಗಡ ರಾಜ್ಯ ಹೆದ್ದಾರಿ ರಸ್ತೆ ಸುಧಾರಣೆಗೆ ಶಂಕು ಸ್ಥಾಪನೆ ನೆರವೇರಲಿದೆ ಎಂದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ₹104 ಕೋಟಿ ಮೊತ್ತದಲ್ಲಿ ಕೈಗೊಂಡಿರುವ ಜಲ ಜೀವನ್ ಮಿಷನ್ ಲೋಕಾರ್ಪಣೆ, ₹73 ಕೋಟಿ ಮೊತ್ತದಲ್ಲಿ ಸರ್ಕಾರಿ ಜಿಟಿಟಿಸಿ ಕಾಲೇಜು ನಿರ್ಮಾಣಕ್ಕೆ ಶಂಕು ಸ್ಥಾಪನೆ, ಇಂಡಿ ನಗರದಲ್ಲಿ ₹ 30 ಕೋಟಿ ಅನುದಾನದಲ್ಲಿ ನಿರ್ಮಾಣವಾಗಿರುವ ಶ್ರೀ ಸಿದ್ದೇಶ್ವರ ಮೆಘಾ ಮಾರುಕಟ್ಟೆ (244 ವಾಣಿಜ್ಯ ಮಳಿಗೆ) ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.
ಇಂಡಿ ಪಟ್ಟಣದಲ್ಲಿ ಹೊರ ವರ್ತುಲ ರಸ್ತೆ (ಔಟರ್ ರಿಂಗ್ ರೋಡ್) ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಗುವುದು ಎಂದರು.
ಹಡಲಸಂಗ ಗ್ರಾಮದಲ್ಲಿ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಶಂಕು ಸ್ಥಾಪನೆ, ₹19.30 ಕೋಟಿ ಅನುದಾನದಲ್ಲಿ ಇಂಡಿ ನಗರದಲ್ಲಿ ಸಣ್ಣ ಕೈಗಾರಿಕಾ ಅಭಿವೃದ್ಧಿ ಇಲಾಖೆ ವಸಾಹತು ನಿರ್ಮಾಣಕ್ಕೆ ಶಂಕು ಸ್ಥಾಪನೆ, ₹1 ಕೋಟಿ ಅನುದಾನದಲ್ಲಿ ಇಂಡಿ ನಗರದ ತಾಲ್ಲೂಕಿನ ಕ್ರೀಡಾಂಗಣದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನಡೆಯಲಿದೆ ಎಂದರು.
ಲಚ್ಯಾಣ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಶಂಕು ಸ್ಥಾಪನೆ, ಇಂಡಿ ನಗರದಲ್ಲಿ ನಿರ್ಮಾಣವಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಲೋಕಾರ್ಪಣೆ, ಇಂಡಿ ನಗರದ ಪ್ರಗತಿ ಕಾಲೊನಿ ಸಿ.ಸಿ ರಸ್ತೆ ಲೋಕಾರ್ಪಣೆ, ಗಣವಲಗಾ, ಗುಬ್ಬೇವಾಡ, ಮಿರಗಿ, ಭೀಮಾನಗರ, ಚಿಕ್ಕಮಣೂರ, ಸಾತಲಗಾಂವ, ನಾದ ಕೆ.ಡಿ., ರೋಡಗಿ, ಹಿಂಗಣಿ ಗ್ರಾಮಗಳಲ್ಲಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಶಂಕು ಸ್ಥಾಪನೆ, ಹೊರ್ತಿಯಲ್ಲಿ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿಗಳಿಗೆ ಹೆಚ್ಚುವರಿ ಕೊಠಡಿಗಳ ಲೋಕಾರ್ಪಣೆ ಮಾಡಲಾಗುವುದು ಎಂದರು.
ಇಂಡಿ ಕ್ಷೇತ್ರವನ್ನು ನೀರಾವರಿ ಶೈಕ್ಷಣಿಕ ಔದ್ಯೋಗಿಕವಾಗಿ ಅಭಿವೃದ್ಧಿ ಮಾಡುವ ಮೂಲಕ ಕ್ಷೇತ್ರದ ಜನರ ಋಣಭಾರ ಕಡಿಮೆ ಮಾಡುವ ಕೆಲಸ ಮಾಡಿದ್ದೇನೆ-ಯಶವಂತರಾಯಗೌಡ ಪಾಟೀಲ ಶಾಸಕ ಇಂಡಿ
‘ಹೊರ್ತಿ–ರೇವಣ ಸಿದ್ದೇಶ್ವರ ಏತನೀರಾವರಿ ಯೋಜನೆಗೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಯಾ ಪೈಸೆ ಕೂಡ ಬಿಡುಗಡೆಯಾಗಿಲ್ಲ’ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ‘ರೇವಣ ಸಿದ್ದೇಶ್ವರ ಯೋಜನೆಗೆ ಚಾಲನೆ ಕೊಟ್ಟಿದ್ದು ಅನುದಾನ ಬಿಡುಗಡೆ ಮಾಡಿರುವುದು ಕಾಂಗ್ರೆಸ್ ಸರ್ಕಾರ’ ಎಂದರು. ‘ಯೋಜನೆಗೆ 2018-19ರಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯ ಬಜೆಟ್‌ನಲ್ಲಿ ₹500 ಕೋಟಿ ಮೀಸಲಿಟ್ಟಿತ್ತು. ಬಿಜೆಪಿ ಸರ್ಕಾರದಲ್ಲಿ 2023ರ ಮಾರ್ಚ್ 9ರಂದು ಯೋಜನೆಗೆ ಭೂಮಿಪೂಜೆ ಮಾಡಲಾಗಿತ್ತು. ಆದರೆ ಮಾ.17ಕ್ಕೆ ಅದರ ಕಾರ್ಯಾದೇಶ ಹೊರಬಂತು. ಅ ನಂತರದಲ್ಲಿ ಚುನಾವಣೆ ನೀತಿಸಂಹಿತೆ ಜಾರಿಗೆ ಬಂತು. ಇದಾದ ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಯೋಜನೆಗೆ ಅನುದಾನ ನೀಡಿ ಅನುಷ್ಠಾನಗೊಳಿಸುತ್ತಿದೆ. ಇದರಲ್ಲಿ ಕ್ರೆಡಿಟ್ ವಾರ್ ಅವಶ್ಯಕತೆ ಇಲ್ಲ. ಯಾಕೆಂದರೆ ಯಾವುದೇ ಕಾಮಗಾರಿಗೆ ಅನುದಾನ ಸಿಗುವುದು ಜನ ತೆರಿಗೆ ಹಣದಿಂದ. ಹೀಗಾಗಿ ನೈತಿಕತೆ ಇದ್ದರೆ ಸಾಕು’ ಎಂದು ಹೇಳಿದರು. ‘ಆಲಮಟ್ಟಿ ಜಲಾಶಯವನ್ನು 519ರಿಂದ 524 ಮೀಟರ್‌ಗೆ ಎತ್ತರ ಹೆಚ್ಚಿಸಲು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬೇಕು. ಈ ಅಧಿಸೂಚನೆ ಪ್ರಕಟಿಸಿದ ತಕ್ಷಣದಿಂದಲೇ ರಾಜ್ಯ ಸರ್ಕಾರ ತನ್ನ ಕಾರ್ಯವನ್ನು ಯುದ್ಧೋಪಾದಿಯಲ್ಲಿ ಆರಂಭಿಸಲಿದೆ’ ಎಂದು ಹೇಳಿದರು. ‘ಆಲಮಟ್ಟಿ ಜಲಾಶಯ ಹಾಗೂ ಕೃಷ್ಣ ಮೇಲ್ದಂಡೆ ಯೋಜನೆಗೆ ಹೆಚ್ಚಿನ ಯೋಗದಾನ ಕಾಂಗ್ರೆಸ್ ನೀಡಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.