ADVERTISEMENT

6363 ಹೆಕ್ಟೇರ್‌ಗೆ ನೀರಾವರಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 7:35 IST
Last Updated 5 ಅಕ್ಟೋಬರ್ 2012, 7:35 IST

ವಿಜಾಪುರ: `ವ್ಯರ್ಥವಾಗಿ ಹರಿದು ಹೋಗುತ್ತಿರುವ ಮಳೆ ನೀರನ್ನು ಸಂಗ್ರಹಿಸಿ, ಜನ ಮತ್ತು ಜಾನುವಾರು ಗಳಿಗೆ ನೀರಿನ ಅನುಕೂಲ ಕಲ್ಪಿಸಲು ಇಂಡಿ ತಾಲ್ಲೂಕಿನಲ್ಲಿ 24ರ ಪೈಕಿ 13 ಬಾಂದಾರ ಸೇತುವೆ ಹಾಗೂ ಏಳು ಹೊಸ ಕೆರೆಗಳನ್ನು ನಿರ್ಮಿಸಲಾಗಿದೆ~ ಎಂದು ಸಣ್ಣ ನೀರಾವರಿ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಗೋವಿಂದ ಕಾರಜೋಳ ಹೇಳಿದರು.

ಇಂಡಿ ತಾಲ್ಲೂಕಿನ ವಿವಿಧೆಡೆ ಕೈಗೊಂಡಿರುವ ಬಾಂದಾರ ಸೇತುವೆ ಕಾಮಗಾರಿಗಳನ್ನು ಗುರುವಾರ ಪರಿಶೀಲಿಸಿ ಅವರು ಮಾತನಾಡಿದರು.

ಬರ ಪೀಡಿತ ಇಂಡಿ ತಾಲ್ಲೂಕಿನಲ್ಲಿ ಕಳೆದ ನಾಲ್ಕು ವರ್ಷದಲ್ಲಿ ರೂ.64 ಕೋಟಿ ವೆಚ್ಚ ಮಾಡಿ, 24  ಬಾಂದಾರ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದೆ. ಈ ಪೈಕಿ 13 ಕಾಮಗಾರಿಗಳು ಪೂರ್ಣಗೊಂಡಿದ್ದು, 11 ಕಾಮಗಾರಿಗಳು ಪ್ರಗತಿಯಲ್ಲಿವೆ. ತಲಾ ಒಂದು ಕೋಟಿ ವೆಚ್ಚದಲ್ಲಿ ಏಳು ಕೆರೆ ನಿರ್ಮಿಸಲಾಗಿದೆ. ಇದರಿಂದ ಒಟ್ಟಾರೆ 6363 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಕರ್ಯ ಕಲ್ಪಿಸಲಾಗಿದೆ~ ಎಂದರು.

ಪರಿಶಿಷ್ಟ ಜಾತಿ ಮತ್ತು  ಪರಿಶಿಷ್ಟ ವರ್ಗದ ರೈತರ ಜಮೀನುಗಳಿಗೆ ನೀರಾವರಿ ಸೌಕರ್ಯ ಒದಗಿಸಲು 182 ಸಮುದಾಯ ಏತ ನೀರಾವರಿ ಕಾಮಗಾರಿಗಳನ್ನು ಕೈಗೊಂಡಿದ್ದು, 215 ಎಕರೆ ಪ್ರದೇಶಕ್ಕೆ ನೀರಾವರಿ ಸೌಕರ್ಯ ಕಲ್ಪಿಸಲಾಗಿದೆ. ರೂ. 24 ಕೋಟಿಗಳನ್ನು ಈ ಉದ್ದೇಶಕ್ಕಾಗಿ ವೆಚ್ಚ ಮಾಡಲಾಗಿದೆ ಎಂದು ಹೇಳಿದರು.

ಬಾಂದಾರ ನಿರ್ಮಿಸಿ ಹಳ್ಳ- ಕೊಳ್ಳಗಳಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಸಂಗ್ರಹಿಸಿದರೆ ಈ ಭಾಗದ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸೌಕರ್ಯ, ಅಂತರ್ಜಲ ಹೆಚ್ಚಳ, ಅನೇಕ ಜಲಚರ ಗಳು, ಸಸ್ಯರಾಶಿಗಳಿಗೆ ಉಪಯುಕ್ತ ವಾಗುತ್ತದೆ. ಪರಿಸರದಲ್ಲಿ ಉತ್ತಮ ಬದಲಾವಣೆ ಉಂಟಾಗಿ ರೈತರಿಗೆ ಅನುಕೂಲವಾಗಲಿದೆ. ಈಗಾಗಲೇ ಪೂರ್ಣಗೊಂಡಿರುವ ಈ ಭಾಗದ ಎಲ್ಲ  ಬಾಂದಾರ ಸೇತುವೆ ಒಂದೇ ಮಳೆಗೆ 2 ರಿಂದ 3 ಮೀಟರ್‌ನಷ್ಟು ನೀರು ನಿಂತಿದೆ ಎಂದು ಸಚಿವರು ಹರ್ಷ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.