ADVERTISEMENT

₹8 ಲಕ್ಷ ಶಾಲಾ ವಿಕಾಸ ನಿಧಿ ಸಂಗ್ರಹ

ಗಡಿ ಭಾಗದ ಕನ್ನಡ ಶಾಲೆ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ: ಪಾಟೀಲ

​ಪ್ರಜಾವಾಣಿ ವಾರ್ತೆ
Published 9 ಮೇ 2025, 14:55 IST
Last Updated 9 ಮೇ 2025, 14:55 IST
ಜತ್ತ ತಾಲ್ಲೂಕಿನ ಸೀಳಿನವಸ್ತಿ ಸಂಖ ಗ್ರಾಮದ ಸರ್ಕಾರಿ ಕನ್ನಡ ಶಾಲೆಯ ಮಕ್ಕಳ ಹಬ್ಬ ಸಾಂಸ್ಕೃತಿಕ ಕಲರವ ಕಾರ್ಯಕ್ರಮವನ್ನು ಸಂಖ ಗ್ರಾಮದ ಉಪ ಸರಪಂಚ ಸುಭಾಷ ಪಾಟೀಲ ಉದ್ಘಾಟಿಸಿದರು
ಜತ್ತ ತಾಲ್ಲೂಕಿನ ಸೀಳಿನವಸ್ತಿ ಸಂಖ ಗ್ರಾಮದ ಸರ್ಕಾರಿ ಕನ್ನಡ ಶಾಲೆಯ ಮಕ್ಕಳ ಹಬ್ಬ ಸಾಂಸ್ಕೃತಿಕ ಕಲರವ ಕಾರ್ಯಕ್ರಮವನ್ನು ಸಂಖ ಗ್ರಾಮದ ಉಪ ಸರಪಂಚ ಸುಭಾಷ ಪಾಟೀಲ ಉದ್ಘಾಟಿಸಿದರು   

ಸೋಲಾಪುರ: ಗಡಿ ಭಾಗದಲ್ಲಿರುವ ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಸಂಕ ಗ್ರಾಮದ ಉಪಸರಪಂಚ ಸುಭಾಷ ಪಾಟೀಲ ಹೇಳಿದರು.

ಜತ್ತ ತಾಲ್ಲೂಕಿನ ಸೀಳಿನವಸ್ತಿ ಸಂಖ ಸರ್ಕಾರಿ ಕನ್ನಡ ಶಾಲೆಯಲ್ಲಿ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ  ‘ಮಕ್ಕಳ ಹಬ್ಬ– ಸಾಂಸ್ಕೃತಿಕ ಕಲರವ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ಜನರ ಸಹಭಾಗಿತ್ವದಲ್ಲಿ ಶಾಲಾ ವಿಕಾಸ ಅಡಿಯಲ್ಲಿ ಸುಮಾರು ₹8 ಲಕ್ಷ ಶಾಲಾ ವಿಕಾಸ ನಿಧಿ ಸಂಗ್ರಹಿಸಲಾಗಿದೆ’ ಎಂದು ಹೇಳಿದರು.

ಜತ್ತ ತಾಲ್ಲೂಕಿನ ಮಾಜಿ ಸಭಾಪತಿ ಡಾ.ಆರ್.ಕೆ.ಪಾಟೀಲ ಮಾತನಾಡಿ, ‘ಸದ್ಯ ಸರ್ಕಾರಿ ಶಾಲೆಗಳು ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗಿಂತಲೂ ಹೆಚ್ಚಿನ ಗುಣಮಟ್ಟ ಹೊಂದಿವೆ. ಪಾಲಕರು ಸರ್ಕಾರಿ ಶಾಲೆಗಳ ಕಡೆ ಒಲವು ತೋರುತ್ತಿರುವುದು ಗಮನಾರ್ಹವಾಗಿದೆ’ ಎಂದು ಹೇಳಿದರು.

ADVERTISEMENT

ಉದ್ಯಮಿ ಡಾ. ನಾಗರಾಜ್ ಮಾನೆ ಜ್ಯೋತಿ ಬೆಳಗಿಸಿದರು. ಪ್ರವೀಣ್ ಅವರಾದಿ ಹಾಗೂ ಚಂದ್ರಶೇಖರ ಬಿರಾದಾರ ರಂಗಭೂಮಿ ಕಟ್ಟೆ ಪೂಜೆ ಮಾಡಿದರು. ವೇದಿಕೆಯಲ್ಲಿ ಶಾಲಾ ಕೇಂದ್ರ ಪ್ರಮುಖರಾದ ಧರೆಪ್ಪಾ ಕಟ್ಟಿಮನಿ, ಶಿಕ್ಷಕ ನಾಯಕರಾದ ರಾಜಶೇಖರ ಉಮರಾಣಿಕರ, ಸಚಿನ ಲಾಡ, ಬಾಪು ಮನೆ, ಅಬ್ಬಾಸ್ ಸಯದ್ ಇದ್ದರು.

ಮೊದಲಿಗೆ ಚಾವಡಿ ವಾಚನದ ಮುಖಾಂತರ ಕಾರ್ಯಕ್ರಮ ಪ್ರಾರಂಭವಾಯಿತು. ಸಂಜೆ 6 ಗಂಟೆಗೆ ಮಕ್ಕಳ ಹಬ್ಬ ಮಕ್ಕಳ ಕಲಾ ಪ್ರದರ್ಶನಕ್ಕೆ ಸಾಕ್ಷಿಯಾಯಿತು.  ಕಾರ್ಯಕ್ರಮಗಳು ನೋಡುಗರ ಮನ ಸೆಳೆದವು. ಚಲನಚಿತ್ರ ಗಾಯಕರಾದ ಮಹೇಶ್ ಮೇತ್ರಿ ಮತ್ತು ಸಂಗಡಿಗರಿಂದ ಸಂಗೀತ ಸಂಜೆ ನೆರವೇರಿತು. ಮಕ್ಕಳು ವಚನ ನೃತ್ಯ ಭರತನಾಟ್ಯ ಜನಪದ ನೃತ್ಯ ಚಲನಚಿತ್ರ ಗೀತೆಗಳ ನೃತ್ಯ, ಗೀತ ಗಾಯನ, ಚುಟುಕು ಹಾಗೂ ನಾಟಕಗಳನ್ನು ಪ್ರದರ್ಶಿಸಿದರು. ಸರ್ಕಾರಿ ಕನ್ನಡ ಶಾಲೆಯ ಮಕ್ಕಳ ಉತ್ಕೃಷ್ಟ ಪ್ರದರ್ಶನ ನೋಡಿ ಮೆಚ್ಚುಗೆ ವ್ಯಕ್ತವಾಯಿತು.

ಶಾಲಾ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಮೇಶ ಕನಮಡಿ, ಪ್ರಕಾಶ ಕಾತ್ರಾಳ, ಸದಾಶಿವ ಕನಮಡಿ, ಸಂಗಣ್ಣ ಸೀಳಿನ, ಬಸಣ್ಣ ಕಾತ್ರಾಳ,ಶರಣಪ್ಪ ಕೊಲೂರ, ಸುರೇಶ ವಜ್ರಶೆಟ್ಟಿ, ಶಿವಾನಂದ ಕನಮಡಿ, ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.

ಮಲಿಕಜಾನ ಶೇಖ ನಿರೂಪಿಸಿದರು. ಗುರುಬಸು ಬಿರಾಜದಾರ ಸ್ವಾಗತಿಸಿದರು. ಗುರುಬಸು ವಗ್ಗೋಲಿ ವಂದಿಸಿದರು.

ಮಕ್ಕಳ ನೃತ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.