ವಿಜಯಪುರ: ರಾಜ್ಯ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ ₹60 ಸಾವಿರ ಕೋಟಿ ಅನುದಾನ ವಿನಿಯೋಗಿಸುತ್ತಿದೆ. ಐದು ವರ್ಷಕ್ಕೆ ₹3 ಲಕ್ಷ ಕೋಟಿ ಹಣವನ್ನು ವಿನಿಯೋಗಿಸುತ್ತಿದೆ. ಬಡವರ ಪರವಾಗಿ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡುತ್ತಿರುವ ರಾಜ್ಯ ಸರ್ಕಾರ ದೇಶದಲ್ಲಿ ಮತ್ತೊಂದಿಲ್ಲ’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಬುಧವಾರ ಕಾರ್ಮಿಕ ಇಲಾಖೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್‌ಕಾರ್ಡ್ ವಿತರಿಸಿ ಅವರು ಮಾತನಾಡಿದರು.
‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ದೇಶದ ಶ್ರೀಮಂತ ಉದ್ಯಮಿಗಳಾದ ಅದಾನಿ, ಅಂಬಾನಿಗೆ ನೆರವಾಗುತ್ತಿದೆ. ಕಪ್ಪು ಹಣ ತಡೆಗೆ ಮೋದಿ ಕೈಗೊಂಡ ಕ್ರಮಗಳು ಸಂಪೂರ್ಣ ವಿಫಲವಾಗಿದೆ.ಮೋದಿ ಅವರು ಪ್ರಿಂಟ್ ಹಾಕಿದ್ದ ₹ 2 ಸಾವಿರ ಮುಖಬೆಲೆಯ ನೋಟುಗಳು ಈಗ ಎಲ್ಲಿಗೆ ಹೋದವು? 50 ದಿನಗಳಲ್ಲಿ ಕಪ್ಪು ಹಣ ವಾಪಸ್ ತರುತ್ತೇನೆ ಎಂದಿದ್ದರು, ಬಂತೇ? ಬಡವರಿಗೆ ಇದರಿಂದ ಅನುಕೂಲವಾಯಿತೇ? ನೋಟು ನಿಷೇಧದ ವೇಳೆ ದೇಶದಲ್ಲಿ ಬ್ಯಾಂಕುಗಳ ಮುಂದೆ ಸಾಲುಗಟ್ಟಿ ನಿಂತಿದ್ದವರಲ್ಲಿ 103 ಜನ ಬಡವರು ಜೀವ ಕಳೆದುಕೊಂಡರು ಅಷ್ಟೆ, ಈ ಬಗ್ಗೆ ಬಿಜೆಪಿಯ ಯಾವೊಬ್ಬರೂ ಚಕಾರ ಮಾತನಾಡುತ್ತಿಲ್ಲ ಏಕೆ?’ ಎಂದರು.
‘ಕೇಂದ್ರದಲ್ಲಿ ಆಡಳಿತಕ್ಕೆ ಬಂದ ಬಿಜೆಪಿ 11 ವರ್ಷಗಳಲ್ಲಿ ಒಬ್ಬರ ರೈತರ ಸಾಲ ಮನ್ನಾ ಮಾಡಲಿಲ್ಲ, ಬಡ್ಡಿ ಮನ್ನಾ ಮಾಡಲಿಲ್ಲ.₹16.5 ಲಕ್ಷ ಕೋಟಿ ಕಾರ್ಪೊರೇಟ್ ಟ್ಯಾಕ್ಸ್ ಮನ್ನಾ ಮಾಡಲಾಗಿದೆ. ಅದೇ ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ರೈತರ ಸಾಲ ಮನ್ನಾ ಮಾಡಿದರು’ ಎಂಬುದನ್ನು ಕೃಷಿಕರು ಮರೆಯಬಾರದು‘ ಎಂದರು.
‘ದೇಶದಲ್ಲಿ ಯುವಜನರು ಉದ್ಯೋಗ ಸಿಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಚರ್ಚೆ ಆಗಬೇಕು. ಯಾವುದೇ ಸರ್ಕಾರ ಜನರಿಗಾಗಿ ಖರ್ಚು ಮಾಡುವುದು ಆಯಾ ಪಕ್ಷಗಳ ಹಣವಲ್ಲ, ಅದು ಈ ದೇಶದ ಜನರ ತೆರಿಗೆ ಹಣ ಎಂಬುದು ಅರಿಯಬೇಕು’ ಎಂದು ಹೇಳಿದರು.
ಕೇಂದ್ರ ಸರ್ಕಾರ ಪ್ರತಿಯೊಂದಕ್ಕೂ ಜೆಎಸ್‌ಟಿ ವಸೂಲಿ ಮಾಡುತ್ತಿದೆ. ಹಾಲು, ಮೊಸರು, ತುಪ್ಪು ಎಲ್ಲದಕ್ಕೂ ಜಿಎಸ್‌ಟಿ ಹಾಕಲಾಗುತ್ತಿದೆ’ ಎಂದು ಆರೋಪಿಸಿದರು.
ಶಾಸಕ ವಿಠಲ ಕಟಕದೊಂಡ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಜಿಲ್ಲಾಧಿಕಾರಿ ಡಾ.ಆನಂದ ಕೆ., ಜಂಟಿ ಕಾರ್ಮಿಕ ಆಯುಕ್ತ ಡಾ.ಎಸ್.ಬಿ.ರವಿಕುಮಾರ, ಕಾರ್ಮಿಕ ಇಲಾಖೆ ಉಪ ಕಾರ್ಮಿಕ ಆಯುಕ್ತ ಡಿ.ಜಿ.ನಾಗೇಶ, ಸಹಾಯಕ ಕಾರ್ಮಿಕ ಆಯುಕ್ತ ಕೆ.ಬಿ.ನಾಗರಾಜ, ಕಾರ್ಮಿಕ ಅಧಿಕಾರಿ ಉಮಾಶ್ರೀ ಕೋಳಿ ಇದ್ದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಬಡವರ ಪರವಾದ ಕಾರ್ಯಕ್ರಮಗಳ ಅನುಷ್ಠಾನವನ್ನು ಬಿಜೆಪಿಗೆ ಸಹಿಸಿಕೊಳ್ಳಲು ಸಾಧ್ಯವಾಗದೇ ಸುಳ್ಳು ಅಪಪ್ರಚಾರದಲ್ಲಿ ತೊಡಗಿದೆಸಂತೋಷ ಲಾಡ್ ಕಾರ್ಮಿಕ ಸಚಿವ
ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ
ವಿಜಯಪುರ: ವಿವಿಧ ಸಣ್ಣ ಸಣ್ಣ ವೃತ್ತಿ ಕೈಗೊಂಡು ವೃತ್ತಿಯನ್ನೇ ಅವಲಂಬಿಸಿ ಶ್ರಮಿಜೀವಿಯಾಗಿ ತಮ್ಮ ಜೀವನ ನಿರ್ವಹಿಸುತ್ತಿರುವ ಅಸಂಘಟಿತ ವರ್ಗಗಳ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಹಾಗೂ ಜೀವನ ಮಟ್ಟ ಸುಧಾರಣೆಗೆ ಸರ್ಕಾರ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕಾರ್ಮಿಕ ಖಾತೆ ಸಚಿವ ಸಂತೋಷ ಲಾಡ್ ಹೇಳಿದರು. ಜಿಲ್ಲೆಯ ವಿವಿಧ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ವಿತರಿಸಿ ಅವರು ಮಾತನಾಡಿದರು. ರಾಜ್ಯದಾದ್ಯಂತ ವಿವಿಧ ವೃತ್ತಿಗಳಲ್ಲಿ ತೊಡಗಿರುವ 91 ಅಸಂಘಟಿತ ವರ್ಗಗಳ ಕಾರ್ಮಿಕರನ್ನು ಗುರುತಿಸಲಾಗಿದೆ. ಅಸಂಘಟಿತ ವಲಯದ ಕಾರ್ಮಿಕರು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅಷ್ಟೇನೂ ಸಬಲರಾಗಿರುವುದಿಲ್ಲ.
ಸಂಘಟಿತ ಕಾರ್ಮಿಕರಿಗೆ ದೊರಕುವ ಕಾನೂನಾತ್ಮಕ ಸೌಲಭ್ಯಗಳು ಅಸಂಘಟಿತ ಕಾರ್ಮಿಕರಿಗೂ ದೊರೆತು ಅವರ ಜೀವನಮಟ್ಟ ಸುಧಾರಣೆಗೊಳ್ಳಲಿ ಎಂದು ಸರ್ಕಾರ ಸದುದ್ದೇಶ ಹೊಂದಿ ವಿವಿಧ ಯೋಜನೆಗಳಡಿ ಈ ಕಾರ್ಮಿಕರನ್ನು ಒಳಪಡಿಸಿ ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತಿದೆ ಎಂದು ಅವರು ಹೇಳಿದರು. ಈವರೆಗೆ ರಾಜ್ಯದಲ್ಲಿ 2545607 ಕಾರ್ಮಿಕರು ನೋಂದಣಿಯಾಗಿದ್ದು ವಿಜಯಪುರ ಜಿಲ್ಲೆಯಲ್ಲಿ 102971 ನೋಂದಾಯಿಸಿಕೊಂಡ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತಿದೆ. ಅಸಂಘಟಿತ ಕಾರ್ಮಿಕರು ಸ್ಮಾರ್ಟ್ ಕಾರ್ಡ್ ಪಡೆದುಕೊಂಡು ಸರ್ಕಾರದ ಯೋಜನೆಗಳ ಲಾಭ ಪಡೆದು ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬೀದರ್ ಮಾದರಿಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸೊಸೈಟಿ ರಚನೆ ಮಾಡಿ ಸೊಸೈಟಿ ಮೂಲಕವೇ ವೇತನ ಪಾವತಿಸುವ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದರು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ನಿರುದ್ಯೋಗಿಗಳಿಗೆ ವಿವಿಧ ಖಾಸಗಿ ವಲಯದ ಕೈಗಾರಿಕೆ ಕಾರ್ಖಾನೆಗಳಲ್ಲಿ ಹೆಚ್ಚೆಚ್ಚು ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಆಶಾ ದೀಪ ಯೋಜನೆಯನ್ನು ಜಾರಿಗೊಳಿಸಿ ಮಾಲೀಕರು ಹಾಗೂ ಉದ್ಯೋಗದಾತರನ್ನು ಉತ್ತೇಜಿಸಲಾಗುತ್ತಿದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.