ಆಲಮಟ್ಟಿ: ಆಲಮಟ್ಟಿ ಜಲಾಶಯದ ಬಲಭಾಗದ ಸೀತಮ್ಮನಗಿರಿಯಲ್ಲಿ ನಿರ್ಮಾಣಗೊಂಡಿರುವ ಲವಕುಶ ಉದ್ಯಾನದ ನಾನಾ ಪ್ರಸಂಗದ ಘಟನೆಗಳಿಗೆ ಧ್ವನಿ ಮುದ್ರಿತ ವ್ಯವಸ್ಥೆ ಅಳವಡಿಸಲಾಗಿದೆ.
ಉತ್ತರ ರಾಮಾಯಣದಲ್ಲಿ ಗರ್ಭಿಣಿ ಸೀತಾಮಾತೆ ಕಾಡಿಗೆ ಒಬ್ಬಂಟಿಯಾಗಿರುವಾಗ ಬಂದಿದ್ದು ಇದೇ ಸೀತಮ್ಮನಗಿರಿಗೆ. ವಾಲ್ಮಿಕಿ ಆಶ್ರಮದಲ್ಲಿ ನೆಲೆ ನಿಂತಳು ಎಂಬುದು ಪೌರಾಣಿಕ ಕತೆ. ಅದಕ್ಕೆ ಪೂರಕವಾಗಿ ಜಲಾಶಯದ ಬಲಭಾಗದ ಗುಡ್ಡ ‘ಸೀತಮ್ಮನ ಗುಡ್ಡ’ ಎಂದೂ, ಅಲ್ಲಿ ಪುರಾತನ ಕಾಲದಿಂದಲೂ ಸೀತಾಮಾತೆ ಮಂದಿರ, ಲವ-ಕುಶ ಹೊಂಡಗಳು ಇವೆ.
ಲವ-ಕುಶ ಉದ್ಯಾನ:
ಈ ಕತೆಯನ್ನೇ ಆಧಾರವಾಗಿಟ್ಟುಕೊಂಡು, ಕೃಷ್ಣಾ ಭಾಗ್ಯ ಜಲ ನಿಗಮದ ಅರಣ್ಯ ಇಲಾಖೆಯವರು ಆ ಕುರುಚಲು ಗುಡ್ಡದಲ್ಲಿಯೇ ಸುಂದರವಾದ ಲವ–ಕುಶ ಉದ್ಯಾನ ನಿರ್ಮಿಸಿ ದಶಕಗಳೇ ಕಳೆದಿವೆ. ಉತ್ತರ ರಾಮಾಯಣದ ಲವ-ಕುಶರ ಚರಿತ್ರೆಯನ್ನು ಸಿಮೆಂಟ್ ಮೂರ್ತಿಗಳಲ್ಲಿ ಒಂದೊಂದು ಘಟನೆಗಳನ್ನು ಚಿತ್ರಿಸಲಾಗಿದೆ. ಆದರೆ ಅದರ ಬಗ್ಗೆ ಮಾಹಿತಿ ಪ್ರವಾಸಿಗರಿಗೆ ಆಗುತ್ತಿರಲಿಲ್ಲ.
ಧ್ವನಿ ವ್ಯವಸ್ಥೆ:
ಈಗ ಪ್ರತಿಯೊಂದು ದೃಶ್ಯಕ್ಕೂ ಧ್ವನಿ ವ್ಯವಸ್ಥೆ ಅಳವಡಿಸಲಾಗಿದೆ. ಆ ಸಿಮೆಂಟ್ ಮೂರ್ತಿಯ ದೃಶ್ಯದ ಬಳಿ ತೆರಳಿದಾಗ, ಅಲ್ಲಿ ಕಾಣುವ ಗುಂಡಿ ಒತ್ತಿದರೇ ಆ ದೃಶ್ಯದ ಇಡೀ ಇತಿಹಾಸವನ್ನೇ ಅಲ್ಲಿ ಅಳವಡಿಸಿರುವ ಧ್ವನಿ ವ್ಯವಸ್ಥೆಯ ತಂತ್ರಜ್ಞಾನದಲ್ಲಿ ಕೇಳಿಬರುತ್ತದೆ.
ಧಾರ್ಮಿಕ ಸಂಸ್ಕೃತಿ ಮರೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಉತ್ತರರಾಮಾಯಣ ಸ್ಪಷ್ಟವಾಗಿ ಪ್ರವಾಸಿಗರಿಗೆ ಮನದಟ್ಟಾಗಲಿದೆ. ದೃಶ್ಯಕ್ಕೆ ತಕ್ಕಂತೆ ಒಂದರಿಂದ ಆರು ನಿಮಿಷದವರೆಗೆ ಮುದ್ರಿತ ಧ್ವನಿ ಕೇಳಿಬರುತ್ತದೆ, ಸಂಗೀತದ ಹಿನ್ನಲೆಯೊಂದಿಗೆ ಈ ಧ್ವನಿ ಕೇಳಿ ಬರುತ್ತಿದ್ದು, ಧ್ವನಿ ನಾಟಕದ ದೃಶ್ಯಗಳಂತೆ ಭಾಸವಾಗುತ್ತವೆ.
8 ಥೀಮ್‌ಗಳು:
ಗರ್ಭಿಣಿ ಸೀತಾ ಮಾತೆಯನ್ನು ಲಕ್ಷ್ಮಣ ಕಾಡಿಗೆ ತಂದು ಬಿಡುವ ದೃಶ್ಯ, ವಾಲ್ಮಿಕಿ ಋಷಿ ಸೀತೆಗೆ ಆಶ್ರಯ ನೀಡುವುದು, ಸೀತಾಮಾತೆ ಲವ-ಕುಶರನ್ನು ಆರೈಕೆ ಮಾಡುವ ದೃಶ್ಯ, ವಾಲ್ಮಿಕಿ ಋಷಿಗಳು ವಿದ್ಯೆ, ಬಿಲ್ವಿದ್ಯೆ ಕಲಿಸುವ ದೃಶ್ಯ, ರಾಮ ಬಿಟ್ಟ ಅಶ್ವಮೇಧಯಾಗದ ಕುದುರೆಯನ್ನು ಲವ-ಕುಶತು ಕಟ್ಟುವ ದೃಶ್ಯ, ಲವ-ಕುಶರೊಂದಿಗೆ ಲಕ್ಷ್ಮಣ, ಭರತ, ಶತ್ರುಘ್ನ ಯುದ್ಧಕ್ಕೆ ಬಂದು ಸೋಲುವ ದೃಶ್ಯ, ವಾನರ ಸೇನೆಯೊಂದಿಗೆ ಯುದ್ಧ, ಕೊನೆಗೆ ರಾಮನ ಜತೆ ಲವ-ಕುಶರ ಯುದ್ಧದ ದೃಶ್ಯ ಹೀಗೆ ಎಂಟು ಥೀಮ್ ಗಳಿಗೆ ಧ್ವನಿ ವ್ಯವಸ್ಥೆ ಅಳವಡಿಸಲಾಗಿದೆ.
ರಂಗಾಯಣ ಕಲಾವಿದರು:
ಧಾರವಾಡದ ರಂಗಾಯಣ ಕಲಾವಿದರ ಸಹಕಾರ ಪಡೆಯಲಾಗಿದ್ದು, ಅವರೇ ಸಾಹಿತ್ಯ ರಚಿಸಿದ್ದಾರೆ. ಬಳಿಕ ರೇಡಿಯೋ ವಾಚಕರ ನೆರವಿನಿಂದ ಪ್ರತಿ ಘಟನೆಯ ಸಾಹಿತ್ಯದ ಧ್ವನಿ ಮುದ್ರಿಸಿ ಅಳವಡಿಸಲಾಗಿದೆ ಎಂದು ಸೂಪರಿಂಟೆಂಡಿಂಗ್ ಎಂಜಿನಿಯರ್ ಡಿ. ಬಸವರಾಜ ತಿಳಿಸಿದರು.
₹80 ಲಕ್ಷ ವೆಚ್ಚದಲ್ಲಿ ಇಡೀ ಉದ್ಯಾನಕ್ಕೆ ಸೌರವಿದ್ಯುತ್ ಚಾಲಿತ ಪಾಥ್ ವೇ ಲೈಟಿಂಗ್ ಹಾಗೂ ಧ್ವನಿ ವ್ಯವಸ್ಥೆ ಅಳವಡಿಸಲಾಗಿದೆ. ಐದು ವರ್ಷಗಳ ಕಾಲ ನಿರ್ವಹಣೆಯೂ ಸೇರಿದೆ.
ಎಂಟು ಥೀಮ್ ಗಳಿಗೆ ಧ್ವನಿ ವ್ಯವಸ್ಥೆ ಅಳವಡಿಕೆ ₹80 ಲಕ್ಷ ವೆಚ್ಚದಲ್ಲಿ ಸೌರವಿದ್ಯುತ್ ಚಾಲಿತ ದೀಪದ ವ್ಯವಸ್ಥೆ ಧಾರವಾಡದ ರಂಗಾಯಣ ಕಲಾವಿದರ ಸಹಕಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.