ADVERTISEMENT

ಆಲಮೇಲ | ಹಕ್ಕುಪತ್ರ ಇಲ್ಲ; ತೋಚಿದ ಆಶ್ರಯ ಮನೆಯಲ್ಲಿ ಬಿಡಾರ

ದೇವಣಗಾಂವ ಆಶ್ರಯ ಕಾಲೊನಿಯ 77 ಕುಟುಂಬಗಳ ಆತಂಕ

​ಪ್ರಜಾವಾಣಿ ವಾರ್ತೆ
Published 19 ಮೇ 2025, 5:06 IST
Last Updated 19 ಮೇ 2025, 5:06 IST
ಆಲಮೇಲ ತಾಲ್ಲೂಕಿನ ದೇವಣಗಾಂವ ಗ್ರಾಮದ ಆಶ್ರಯ ಕಾಲೊನಿ
ಆಲಮೇಲ ತಾಲ್ಲೂಕಿನ ದೇವಣಗಾಂವ ಗ್ರಾಮದ ಆಶ್ರಯ ಕಾಲೊನಿ   

ಆಲಮೇಲ: 2009ರಲ್ಲಿ ಅತಿವೃಷ್ಟಿಯಿಂದಾಗಿ ಮನೆ ಕಳೆದುಕೊಂಡ ಹಲವು ಕುಟುಂಬಗಳಿಗೆ ದಾನಿಗಳ ನೆರವಿನಿಂದ ಆಶ್ರಯ ಕಾಲೊನಿಯಲ್ಲಿ ಮನೆ ನಿರ್ಮಿಸಿ ಸೂರು ಒದಗಿಸಿದ್ದೇನೂ ಆಯಿತು. ಆದರೆ ಅದರ ಹಕ್ಕುಪತ್ರ ಈವರೆಗೂ ನೀಡಿಯೇ ಇಲ್ಲ.

ಸರ್ಕಾರ 4.05 ಎಕರೆ ಭೂಮಿ ಖರೀದಿಸಿ ಆಶ್ರಯ ಕಾಲೊನಿ ನಿರ್ಮಿಸಿ ತಾಲ್ಲೂಕಿನ ರಾಮನಳ್ಳಿ, ವಿಭೂತಿಹಳ್ಳಿ ಸೇರಿದಂತೆ ಹತ್ತಾರು ಹಳ್ಳಿಗಳು, ದೇವಣಗಾಂವ ಗ್ರಾಮದ ಭೀಮೆಯ ದಡದ ಕುಟುಂಬಗಳು ಸೇರಿ ಒಟ್ಟು 77 ಕುಟುಂಬಗಳಿಗೆ ನಿವೇಶನ ಹಾಗೂ ಪುಟ್ಟ ಮನೆಯನ್ನು ನೀಡಲಾಗಿತ್ತು.

‘ಆಗ ಮೌಖಿಕ ಸೂಚನೆಯ ಮೇರೆಗೆ ನಾವು ನಾವೇ ಮಾತನಾಡಿಕೊಂಡು ನಮಗೆ ಬೇಕಾದ ಮನೆಯಲ್ಲಿ ಇದ್ದೇವೆ. ಇಂದೊ, ನಾಳೆಯೊ? ನಮಗೆ ಮನೆಯ ಹಕ್ಕುಪತ್ರ ನೀಡುತ್ತಾರೆ ಎಂಬ ನಂಬಿಕೆಯಿಂದ ಇದ್ದೇವೆ. 15 ವರ್ಷ ಕಳೆದರೂ ಅಧೀಕೃತ ಮಂಜೂರಾತಿ ಪತ್ರ ಸಿಕ್ಕಿಲ್ಲ. ಹೀಗಾಗಿ ಆತಂಕವಾಗಿದೆ’ ಇಲ್ಲಿಯ ನಿವಾಸಿಗಳು ತಿಳಿಸಿದರು.

ADVERTISEMENT

‘2014ರಲ್ಲಿ ಕಾರ್ಯಕ್ರಮ ಮಾಡಿ ಸಾಂಕೇತಿಕವಾಗಿ 5 ಜನರಿಗೆ ಹಕ್ಕುಪತ್ರ ನೀಡಿದ್ದಾರೆ. ಅದಾದ ಮೇಲೆ ಉಳಿದವರೆಲ್ಲರಿಗೂ ನಿರ್ದಿಷ್ಟ ಪಡಿಸಿದ ಮನೆಯ ಉತಾರ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಪಡಿಸುತ್ತಲೇ ಬಂದಿದ್ದೇವೆ. ಮೂವರು ಅಧ್ಯಕ್ಷರು ಬಂದು ಹೋದರು. ಅವರಲ್ಲಿಯೂ ವಿನಂತಿಸಿದ್ದೇವೆ. ಈವರೆಗೂ ಹಕ್ಕುಪತ್ರ ನೀಡಿಲ್ಲ’ ಎಂದು ಆಶ್ರಯ ಕಾಲೊನಿಯ ದತ್ತ ಸೊನ್ನ ದೂರಿದರು.

ಮೂಲಸೌಕರ್ಯಗಳ ಕೊರತೆ: ಆಶ್ರಯ ಕಾಲೊನಿಯಲ್ಲಿ ವಿದ್ಯುತ್ ಹೊರತುಪಡಿಸಿ ಯಾವುದೇ ಮೂಲ ಸೌಕರ್ಯಗಳಿಲ್ಲ. ರಸ್ತೆಯಿಲ್ಲ. ಚರಂಡಿಯೂ ಇಲ್ಲ. ಕುಡಿಯುವ ನೀರಿಲ್ಲ. ನೀರಿನ್ನು ಸಹ ಬೇರೆ ಕಡೆಯಿಂದಲೇ ತರಬೇಕು. ಮುಖ್ಯವಾಗಿ 77 ಫಲಾನುಭವಿ ಕುಟುಂಬಗಳಿಗೆ ಅವರು ನೆಲೆಸಿರುವ ಮನೆ ಅವರದ್ದೇ ಹೌದೋ ಅಲ್ಲವೊ ಎಂಬುದೂ ಗೊತ್ತಿಲ್ಲ. ಹಕ್ಕುಪತ್ರ ಇದ್ದರೆ ತಾನೇ ಇದು ನಮ್ಮದೇ ಮನೆ ಎಂದು ತಿಳಿಯಲು ಸಾಧ್ಯ’ ಎಂದು ಹೇಳಿದರು.

‘ಇನ್ನೂ 6 ಕುಟುಂಬಗಳಿಗೆ ಆಶ್ರಯಮನೆಯೂ ದೊರೆತಿಲ್ಲ. ಅವರೆಲ್ಲ ತಮ್ಮ ಹೊಲದಲ್ಲಿಯೇ ಇದ್ದಾರೆ. ಇಲ್ಲಿನ ಮೂಲ ಸೌಕರ್ಯಗಳ ಬಗ್ಗೆ ಕೇಳಿದರೆ ಈಗಾಗಲೇ ಎಲ್ಲವನ್ನೂ 2010ರಲ್ಲಿ ಮನೆ ಹಸ್ತಾಂತರದ ಮುಂಚೆ ಮಾಡಲಾಗಿದೆ. ಈಗ ಮತ್ತೆ ಅಲ್ಲಿ ಸೌಕರ್ಯ ಹೇಗೆ ಮಾಡುವುದು? ಎನ್ನುತ್ತಾರೆ ಪಂಚಾಯತಿ ಅಧಿಕಾರಿಗಳು. ಅದೆಲ್ಲವೂ ಕಾಗದದ ಮೇಲೆ ಆಗಿದ್ದು, ಈಗ ಈ ಕಾಲೊನಿಯಲ್ಲಿ ಸೌಕರ್ಯಗಳು ಬೇಕು’ ಎನ್ನುತ್ತಾರೆ ಸೊನ್ನ ಅವರು.

ಆಲಮೇಲ ತಾಲ್ಲೂಕಿನ ದೇವಣಗಾಂವ ಗ್ರಾಮದ ಆಶ್ರಯ ಕಾಲೊನಿಯಲ್ಲಿ ಮೂಲ ಸೌಕರ್ಯ ಕೊರತೆಯಿದೆ

ಎಲ್ಲರಿಗೂ ಹಕ್ಕುಪತ್ರ: ಭರವಸೆ

ಹಿರಿಯರ ಮಧ್ಯಸ್ಥಿಕೆಯಲ್ಲಿ ಸರ್ಕಾರದ ನಿಯಮಾವಳಿಯಂತೆ ಎಲ್ಲ 77 ಕುಟುಂಬಗಳಿಗೂ ಹಕ್ಕುಪತ್ರ ನೀಡಲಾಗುವುದು. ಮೂಲ ಸೌಕರ್ಯ ಕಲ್ಪಿಸಲು ಗ್ರಾಮ ಪಂಚಾಯತಿ ಸಭೆಯಲ್ಲಿ ಚರ್ಚಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ದೇವಣಗಾಂವ ಪಿಡಿಒ ಸಂಜೀವಕುಮಾರ ದೊಡಮನಿ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.