ಬಸವನಬಾಗೇವಾಡಿ: ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಈಚೆಗೆ ಬಸವನಬಾಗೇವಾಡಿ ಶಾಸಕ, ಸಚಿವ ಶಿವಾನಂದ ಪಾಟೀಲ ಕುರಿತು ವೈಯಕ್ತಿಕ ನಿಂದನೆ ಮಾಡಿರುವುದನ್ನು ಖಂಡಿಸುತ್ತೇವೆ. ಕೂಡಲೇ ಯತ್ನಾಳ ಅವರು ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಚೆಗೆ ಸಚಿವ ಶಿವಾನಂದ ಪಾಟೀಲರ ಕುರಿತು ಮಾತನಾಡಿರುವುದು ಸರಿಯಲ್ಲ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ ಮಾತನಾಡಿ, ಬಸವಣ್ಣನವರು ಜನಿಸಿದ ಬಸವನಬಾಗೇವಾಡಿಯನ್ನು ಪಾಕಿಸ್ತಾನಕ್ಕೆ ಹೋಲಿಸಿರುವುದನ್ನು ಖಂಡಿಸುತ್ತೇವೆ. ಕೂಡಲೇ ಅವರು ಬಸವನಬಾಗೇವಾಡಿಗೆ ಬಂದು ಕ್ಷಮೆ ಕೋರಬೇಕು. ಕ್ಷಮೆ ಕೋರದೆ ಹೋದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದರು.
ಬಸನಗೌಡ ಪಾಟೀಲ ಅವರ ಸವಾಲಿಗೆ ಸಚಿವ ಶಿವಾನಂದ ಪಾಟೀಲರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಸನಗೌಡರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ನಿಲ್ಲಲು ತಯಾರಾಗಬೇಕು. ಅವರು ಯಾವ ಕ್ಷೇತ್ರವೆಂದರೂ ಅಲ್ಲಿ ಸಚಿವ ಶಿವಾನಂದ ಪಾಟೀಲರು ಸ್ಪರ್ಧೆ ಮಾಡಲು ಸಿದ್ಧರಿದ್ದಾರೆ ಎಂದು ಹೇಳಿದರು.
ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ ಮಾತನಾಡಿ, ಬಸನಗೌಡ ಪಾಟೀಲ ಯತ್ನಾಳ ಅವರು ಇನ್ನೊಬ್ಬರ ಬಗ್ಗೆ ಹಗುರುವಾಗಿ ಮಾತನಾಡುವುದನ್ನು ನೋಡಿದರೆ ಅವರ ಮಾನಸಿಕ ಆರೋಗ್ಯ ಸರಿಯಿಲ್ಲ ಎನಿಸುತ್ತಿದೆ. ಅವರು ಬಳಕೆ ಮಾಡುವ ಭಾಷೆಯ ಮೇಲೆ ಹಿಡಿತ ಇಟ್ಟುಕೊಳ್ಳಬೇಕಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಶಿವನಗೌಡ ಗುಜಗೊಂಡ, ಕೆಪಿಸಿಸಿ ಸದಸ್ಯ ಶೇಖರ ಗೊಳಸಂಗಿ, ಮಹಿಳಾ ಬ್ಲಾಕ್ ಅಧ್ಯಕ್ಷೆ ರುಕ್ಮಿಣಿ ರಾಠೋಡ, ಪ್ರಧಾನ ಕಾರ್ಯದರ್ಶಿ ರವಿ ರಾಠೋಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.