ADVERTISEMENT

ಕನ್ನಡದ ಘನತೆ ಹೆಚ್ಚಿಸಿದ ಮುಷ್ತಾಕ್: ಸಾಹಿತಿ ಬಸವರಾಜ ಯಲಿಗಾರ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 4:48 IST
Last Updated 18 ಜುಲೈ 2025, 4:48 IST
   

ವಿಜಯಪುರ: ‘ಕನ್ನಡಕ್ಕೆ ಪ್ರಥಮ ಬೂಕರ್‌ ಪ್ರಶಸ್ತಿಯನ್ನು ತಂದುಕೊಡುವ ಮೂಲಕ ಜಗತ್ತಿನಾದ್ಯಂತ ಕನ್ನಡ ಭಾಷೆಯ ಕೀರ್ತಿಯನ್ನು ಪಸರಿಸುವ ಮೂಲಕ ಕನ್ನಡದ ಘನತೆಯನ್ನು ಬಾನು ಮುಷ್ತಾಕ್‌ ಹೆಚ್ಚಿಸಿದ್ದಾರೆ’ ಎಂದು ಡಿವೈಎಸ್‍ಪಿ, ಸಾಹಿತಿ ಬಸವರಾಜ ಯಲಿಗಾರ ಹೇಳಿದರು.

ಇಲ್ಲಿನ ಅಂಜುಮನ್‌-ಇ-ಇಸ್ಲಾಂ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಗುರುವಾರ ಹಮ್ಮಿಕೊಂಡಿದ್ದ ‘ಚಕೋರ’ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಬಾನು ಮುಷ್ತಾಕ್  ಸಾವಿರಾರು ಸಂಕಟಗಳನ್ನು ಸಮರ್ಥವಾಗಿ ಎದುರಿಸಿ ಕೃತಿ ರಚಿಸಿದ್ದಾರೆ. ತನ್ಮೂಲಕ ಕನ್ನಡಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿರುವುದು ಶ್ಲಾಘನೀಯ’ ಎಂದರು.

ADVERTISEMENT

‘ಎದೆಯ ಹಣತೆ ಹಚ್ಚಿದ ಬಾನು ಮುಸ್ತಾಕ್’ ಎಂಬ ವಿಷಯದ ಕುರಿತು ಇಳಕಲ್‌ನ ಲೇಖಕಿ ಮುರ್ತುಜಾಬೇಗಂ ಕೊಡಗಲಿ ಮಾತನಾಡಿ, ‘ಜೀವಕ್ಕೆ ಬಂದ ಅಪಾಯಗಳನ್ನು ಮೆಟ್ಟಿನಿಂತು ಸಮಾಜದಲ್ಲಿ ಮಹಿಳೆಯರು ಪುರುಷ ಪ್ರಾಧಾನ್ಯತೆಯಿಂದ ಅನುಭವಿಸುತ್ತಿದ್ದ ಸಾವಿರಾರು ಸಂಕಟಗಳಿಗೆ ಸಮರ್ಥವಾಗಿ ಸ್ಪಂದಿಸುವ ಮೂಲಕ ಅವರ ಬಾಳಿಗೆ ಬೆಳಕಾಗಿದ್ದಾರೆ’ ಎಂದರು.

‘ಪರಕೀಯ ಪ್ರಭಾವದಿಂದ ಯಜಮಾನಿಕೆ, ಬಡತನದಿಂದ ಕಂಗೆಡುವ ಬದುಕಿನ ಕಟು ವಾಸ್ತವ ಸತ್ಯಗಳನ್ನು ತಮ್ಮ ಕಥೆಗಳಲ್ಲಿ ಸಹಜವಾಗಿ ಅನಾವರಣಗೊಳಿಸಿದ್ದಾರೆ. ವಿಶ್ವಕ್ಕೆ ಶ್ರೇಷ್ಠ ಕೃತಿಯನ್ನು ಕಟ್ಟಿಕೊಡುವ ಮೂಲಕ ಕನ್ನಡದ ಹಿರಿಯನ್ನು ಹೆಚ್ಚಿಸಿದ್ದಾರೆ’ ಎಂದರು.

ಎಕ್ಸಲಂಟ್‌ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಶಿವಾನಂದ ಕೆಲೂರ ಮಾತನಾಡಿ, ‘ಆಧುನಿಕ ಕಾಲಘಟ್ಟದಲ್ಲಿಯೂ ಕೂಡ ಕೆಲವು ಪೂರ್ವಾಗ್ರಹಗಳ ಹಿಡಿತದಲ್ಲಿ ಸಮಾಜದ ಕೆಳಸ್ತರದ ಮಹಿಳೆಯರ ಬದುಕು ಇನ್ನೂ ಸಾವಿರಾರು ಸಂಕಟಗಳಿಂದ ನಲುಗುತ್ತಿದೆ. ಇಂತಹ ಮಹಿಳೆಯರ ಬದುಕಿಗೆ ಬೆಳಕು ನೀಡುವ ದಿಸೆಯಲ್ಲಿ ಬಾನು ಮುಷ್ತಾಕ್ ಅವರ ಕಥೆಗಳು ತೋರು ದೀಪದಂತಿವೆ’ ಎಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಮಹಾದೇವ ಬಸರಕೋಡ ಮಾತನಾಡಿ, ‘ಆಧುನಿಕ ಕಾಲಘಟ್ಟದಲ್ಲಿ ತಂತ್ರಜ್ಞಾನ ಮತ್ತು ಜಾಗತಿಕರಣದ ಪ್ರಭಾವದಿಂದ ನಮ್ಮ ನೆಲದ ಶ್ರೇಷ್ಠ ಸಂಸ್ಕೃತಿಗಳು ಆಚಾರ-ವಿಚಾರಗಳು ನೇಪಥ್ಯಕ್ಕೆ ಜಾರುತ್ತಿದೆ. ಅವೆಲ್ಲವುಗಳನ್ನು ಮತ್ತೆ ಮುನ್ನೆಲೆಗೆ ತಂದು ಸ್ವಸ್ಥ ಬದುಕನ್ನು ಕಟ್ಟಬೇಕಾದ ತುರ್ತಿದೆ. ಇದಕ್ಕೆ ಸಾಹಿತ್ಯ ಮಾತ್ರ ಪರಿಹಾರವಾಗಿದ್ದು, ಅಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಅಕಾಡೆಮಿ ಹಮ್ಮಿಕೊಳ್ಳುತ್ತಿದೆ’ ಎಂದರು.

ಸಾಹಿತಿ ಶಂಕರ ಬೈಚಬಾಳ ಮಾತನಾಡಿ, ‘ಒಂದು ವ್ಯವಸ್ಥೆಯ ಹಿಂದಿರುವ ಕಂದಕಗಳನ್ನು, ನೋವುಗಳನ್ನು ಮೌನಮುರಿದು ಕಥೆಕಟ್ಟುವ ಮೂಲಕ ಸ್ವಸ್ಥ ಸಮಾಜಕ್ಕೆ ಬಾನುಮುಸ್ತಾಕ್ ಮುನ್ನುಡಿ ಬರೆದಿರುವುದು ಅತ್ಯಂತ ಹೆಮ್ಮೆಯ ಸಂಗತಿ’ ಎಂದರು.

ಅಂಜುಮನ್‌ ಶಿಕ್ಷಣ ಮಹಾವಿದ್ಯಾಲಯ ಚೇರ್ಮನ್‌ ಅಲ್-ಹಜ್ ಜನಾಬ್‌ ಸಜ್ಜಾದೆ ಪೀರಾ ಮುಶ್ರೀಫ್‌, ಪ್ರಾಂಶುಪಾಲರಾದ ಡಾ. ಶಾರದಾಮಣಿ ಎಸ್. ಹುಣಶ್ಯಾಳ, ಸಂಸ್ಥೆಯ ಸದಸ್ಯ ಜೈನುಲದ್ದೀನ್, ಸಾಹಿತಿಗಳಾದ ಸಿದ್ರಾಮ ಬಿರಾದಾರ, ಸುನಂದಾ ಗುಡದೂರ, ಮೋಹನ ಕಟ್ಟಿಮನಿ, ವಿದ್ಯಾವತಿ ಅಂಕಲಗಿ, ಮನು ಪತ್ತಾರ, ಸತೀಶ ಹೊನ್ನುಂಗರ, ಸಂಜೀವ ಪುರೋಹಿತ, ಡಿ. ಜೋಸೆಫ್, ಸುಭಾಸ ಯಾದವಾಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.