ADVERTISEMENT

ವಿಜಯಪುರ | ಜಾತಿ ಗಣತಿ: ಗಾಣಿಗರಿಗೆ ಅನ್ಯಾಯ

ಎಚ್‌.ಕಾಂತರಾಜು ವರದಿ ತಿರಸ್ಕರಿಸಲು ಆಗ್ರಹಿಸಿ ಸಮುದಾಯದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 16:07 IST
Last Updated 16 ಏಪ್ರಿಲ್ 2025, 16:07 IST
ವಿಜಯಪುರ ಜಿಲ್ಲಾ ಗಾಣಿಗ ಸಮಾಜದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು
ವಿಜಯಪುರ ಜಿಲ್ಲಾ ಗಾಣಿಗ ಸಮಾಜದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು   

ವಿಜಯಪುರ: ‘ಎಚ್‌.ಕಾಂತರಾಜು ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಜಾತಿ ಜನಗಣತಿ ವರದಿಯಲ್ಲಿ ಗಾಣಿಗ ಸಮುದಾಯದ ಜನಸಂಖ್ಯೆ ಅತಿ ಕಡಿಮೆ ತೋರಿಸುವ ಮೂಲಕ ಸಮಾಜಕ್ಕೆ ಅನ್ಯಾಯ ಮಾಡಿದೆ. ರಾಜ್ಯ ಸರ್ಕಾರ ವರದಿಯನ್ನು ತಿರಸ್ಕರಿಸಬೇಕು’ ಎಂದು ಗಾಣಿಗ ಸಮಾಜದ ಮುಖಂಡರು ಆಗ್ರಹಿಸಿರು.

ಗಾಣಿಗ ಸಮಾಜದ ಮುಖಂಡ ದಯಾಸಾಗರ ಪಾಟೀಲ ಮಾತನಾಡಿ, ‘ಆಯೋಗ ರಾಜ್ಯದಲ್ಲಿ ಗಾಣಿಗ ಸಮಾಜದ ಜನಸಂಖ್ಯೆ ಕೇವಲ 7 ಲಕ್ಷ ಎಂದು ತೋರಿಸಿದೆ. ವಿಜಯಪುರ ಜಿಲ್ಲೆಯಲ್ಲಿಯೇ ಎರಡೂವರೆ ಲಕ್ಷಕ್ಕೂ ಅಧಿಕ ಗಾಣಿಗ ಸಮಾಜದವರಿದ್ದಾರೆ’ ಎಂದರು.

‘ಗಾಣಿಗ ಸಮಾಜದವರು 40 ಲಕ್ಷದಷ್ಟು ಇದ್ದಾರೆ. ಜಾತಿ ಜನಗಣತಿ ವರದಿ ಅವೈಜ್ಞಾನಿಕವಾಗಿದೆ. ಇದನ್ನು ತಿರಸ್ಕರಿಸದಿದ್ದರೆ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಅಖಿಲ ಭಾರತ ಗಾಣಿಗ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ‘13 ಒಳಪಂಗಡಗಳನ್ನು ಹೊಂದಿರುವ ಗಾಣಿಗ ಸಮಾಜದ ಮೂಲವೃತ್ತಿ ಎಣ್ಣೆ ಉತ್ಪಾದನೆ ಮಾಡಿ ದೀಪ ಬೆಳಗಿಸುವುದು. ಆದರೆ ದೀಪದ ಕೆಳಗೆ ಕತ್ತಲೆ ಎಂಬಂತೆ ಗಾಣಿಗ ಸಮಾಜಕ್ಕೆ ಸೌಲಭ್ಯಗಳೇ ಮರೀಚಿಕೆಯಾಗಿವೆ. ಆಹಾರ ಪದ್ಧತಿ, ಆಚರಣೆಗಳು ವಿಭಿನ್ನವಾದರೂ ಮೂಲ ಸಮಾಜ, ಮೂಲ ವೃತ್ತಿ ಒಂದೇ. ಹೀಗಾಗಿ ವಿನಾಕಾರಣ ಬೇರ್ಪಡಿಸುವುದು ಬೇಡ’ ಎಂದರು.

ADVERTISEMENT

ಚಳಕಾಪೂರ ಆರೂಢಾಶ್ರಮ ಶಂಕರನಾಂದ ಸ್ವಾಮೀಜಿ ಮಾತನಾಡಿ, ‘ಗಾಣಿಗ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದೆ. ಸೌಲಭ್ಯಗಳಿಂದ ವಂಚಿತವಾಗಿದೆ, ಕೈ ಕಟ್ಟಿ ಕುಳಿತುಕೊಂಡರೆ ಪ್ರಯೋಜನವಿಲ್ಲ, ಅನ್ಯಾಯವಾದಾಗ ಹೋರಾಡಿ, ಸೌಲಭ್ಯಗಳನ್ನು ಪಡೆದುಕೊಳ್ಳಿ’ ಎಂದರು.

ಗಾಣಿಗ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಿ. ಪಾಸೋಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಬು ಸಜ್ಜನ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಮೀನಾಕ್ಷಿ ಉಟಗಿ, ಯುವ ಗಾಣಿಗ ಘಟಕದ ಜಿಲ್ಲಾ ಅಧ್ಯಕ್ಷ ಗುರುನಾಥ ಅಂದೇವಾಡಿ ಮಾತನಾಡಿದರು.

ವಿಜಯಪುರ ಬಾಗಲಕೋಟೆ  ಬೆಳಗಾವಿ ರಾಯಚೂರು ಕಲಬುರಗಿ ಸೇರಿದಂತೆ ರಾಜ್ಯದಲ್ಲಿ ಗಾಣಿಗ ಸಮಾಜ ದೊಡ್ಡ ಸಂಖ್ಯೆಯಲ್ಲಿದೆ. ಈ ಅವೈಜ್ಞಾನಿಕ ವರದಿಯಿಂದ ಸಮಾಜಕ್ಕೆ ಅನ್ಯಾಯವಾಗಲಿದೆ

-ಮಲ್ಲಿಕಾರ್ಜುನ ಲೋಣಿ ಕಾರ್ಯಾಧ್ಯಕ್ಷ ಅಖಿಲ ಭಾರತ ಗಾಣಿಗರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.