ADVERTISEMENT

ಪ್ರತ್ಯೇಕ ಧರ್ಮ ಹೋರಾಟದಿಂದ ಕಾಂಗ್ರೆಸ್‌ಗೆ ಹಿನ್ನೆಡೆಯಾಗಿಲ್ಲ; ಎಂ.ಬಿ.ಪಾಟೀಲ

ಬಬಲೇಶ್ವರ ಕ್ಷೇತ್ರದ ಶಾಸಕ ಎಂ.ಬಿ.ಪಾಟೀಲ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2021, 13:53 IST
Last Updated 24 ಆಗಸ್ಟ್ 2021, 13:53 IST
ಎಂ.ಬಿ.ಪಾಟೀಲ
ಎಂ.ಬಿ.ಪಾಟೀಲ   

ವಿಜಯಪುರ: ‘ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಿಂದ ಕಾಂಗ್ರೆಸ್‌ಗೆ ಹಿನ್ನೆಡೆಯಾಗಿದೆ ಎಂಬ ಆರೋಪ ಸಂಪೂರ್ಣ ಸುಳ್ಳು. ಈ ಹೋರಾಟದಿಂದ ಪಕ್ಷಕ್ಕೆ ಎಲ್ಲಿಯೂ ಹಿನ್ನೆಡೆಯಾಗಿಲ್ಲ. ಯಾವ ಪರಿಣಾಮವೂ ಬೀರಿ‌‌‌ಲ್ಲ’ ಎಂದು ಎಂ.ಬಿ.ಪಾಟೀಲ ಹೇಳಿದರು.

ಪ್ರತ್ಯೇಕ ಧರ್ಮ ಹೋರಾಟದಿಂದ ಕಾಂಗ್ರೆಸ್‌ಗೆ ಹಿನ್ನೆಡೆಯಾಯಿತು ಎಂಬ ಶಾಸಕ ಯಶವಂತರಾಯಗೌಡ ಪಾಟೀಲ ಅವರ ಆರೋಪಕ್ಕೆನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಉತ್ತರಿಸಿದ ಅವರು, ‘ಅಷ್ಟಕ್ಕೂ ಈ ಹೋರಾಟ ಆರಂಭಿಸಿದವನು ನಾನಲ್ಲ’ ಎಂದು ಸ್ಪಷ್ಟನೆ ನೀಡಿದರು.

‘ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡುವಂತೆ ಅಖಿಲ ಭಾರತ ವೀರಶೈವ ಮಹಾಸಭೆಯು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತ್ತು. ಈ ಸಂಬಂಧ ಬೀದರ್‌, ಬೆಳಗಾವಿ ಸೇರಿದಂತೆ ವಿವಿಧೆಡೆ ಹೋರಾಟ ನಡೆಯಿತು. ಬಳಿಕ ನಾನು ಹುಬ್ಬಳ್ಳಿ, ವಿಜಯಪುರ, ಕಲಬುರ್ಗಿಯಲ್ಲಿ ನಡೆದ ಸಮಾವೇಶದಲ್ಲಿ ಮುಂಚೂಣಿಯಲ್ಲಿದ್ದೆ’ ಎಂದು ಹೇಳಿದರು.

ADVERTISEMENT

‘ವೀರಶೈವ ಮಹಾಸಭಾ ಹಾಗೂ ಸಮಾಜದ ಒತ್ತಾಯದ ಮೇರೆಗೆ ನಮ್ಮ ಸರ್ಕಾರ ನ್ಯಾಯಮೂರ್ತಿ ನಾಗಮೋಹನದಾಸ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿತು. ಆ ಸಮಿತಿ ನೀಡಿದ ವರದಿಯನ್ನು ಸಚಿವ ಸಂಪುಟದಲ್ಲಿ ಒಕ್ಕೊರಲಿನಿಂದ ಪಾಸ್‌ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು ಎಂಬುದನ್ನು ಟೀಕಾಕಾರರು ತಿಳಿದುಕೊಳ್ಳಬೇಕು’ ಎಂದರು.

‘ವೀರಶೈವರು ಸೇರಿದಂತೆ 99 ಲಿಂಗಾಯತ ಉಪ ಪಂಗಡಗಳನ್ನು ಒಗ್ಗೂಡಿಸಿಪ್ರತ್ಯೇಕ ಧರ್ಮ ಸ್ಥಾಪನೆ ಮಾಡುವ ಮೂಲಕ ಅಲ್ಪ ಸಂಖ್ಯಾತ ಮಾನ್ಯತೆ ದೊರಕಿಸಲು ಅಂದು ಹೋರಾಟ ನಡೆದಿತ್ತು. ಅಲ್ಪ ಸಂಖ್ಯಾತ ಧರ್ಮದ ಮಾನ್ಯತೆ ಸಿಕ್ಕಿದ್ದರೆ ಸಮಾಜಕ್ಕೆ ಎಷ್ಟು ಸೌಲಭ್ಯಗಳು ಲಭಿಸುತ್ತಿದ್ದವು. ಆದರೆ, ಇಂದು ಅನೇಕ ಲಿಂಗಾಯತ ಒಳಪಂಗಡಗಳು 2 ಎ ಮೀಸಲಾತಿಗೆ ಹೋರಾಟ ನಡೆಸುವ ಪ್ರಮೇಯ ಬರುತ್ತಿರಲಿಲ್ಲ’ ಎಂದು ಹೇಳಿದರು.

ಮನೆತನದ ಪರಿಶ್ರಮ:

‘ಬಿಎಲ್‌ಡಿಇ ಸಂಸ್ಥೆಯನ್ನು ವೈಯಕ್ತಿಕ ಆಸ್ತಿಯನ್ನಾಗಿಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು, ಸಂಸ್ಥೆಯಲ್ಲಿ ನೌಕರರಿಗೆ ಪಗಾರ ಕೊಡಲು ದುಡ್ಡಿರಲಿಲ್ಲ. ಆಗ ನಮ್ಮ ತಂದೆ ಬಿ.ಎಂ.ಪಾಟೀಲರು ತಮ್ಮ ಸ್ವಂತ ಹೊಲ ಒತ್ತೆ ಇಟ್ಟು ಹಣ ಕೂಡಿಸಿ ನೌಕರರಿಗೆ ಪಗಾರ ನೀಡಿದ್ದಾರೆ. 1980ರಲ್ಲಿ ಎಂಜಿನಿಯರಿಂಗ್‌ ಕಾಲೇಜು ಆರಂಭಿಸುವಾಗ ಹಣ ಇರಲಿಲ್ಲ. ನಮ್ಮ ತಂದೆ ಸಾಂಗ್ಲಿ ಬ್ಯಾಂಕಿನಲ್ಲಿ₹ 2 ಕೋಟಿ ಸಾಲ ತಂದು ಸ್ಥಾಪನೆ ಮಾಡಿದರು. 1986ರಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣ ಸಂದರ್ಭದಲ್ಲೂ ಸಂಸ್ಥೆಯಲ್ಲಿ ಹಣವಿರಲಿಲ್ಲ, ಆಗಲೂ ವೈಶ್ಯ ಬ್ಯಾಂಕಿನಲ್ಲಿ ₹ 5 ಕೋಟಿ ಸಾಲ ತಂದು ಕಾಲೇಜು ನಿರ್ಮಿಸಿದ್ದಾರೆ. ನಮ್ಮ ಮನೆತನದ ಪರಿಶ್ರಮದ ಫಲವಾಗಿ ಇಂದು ಸಂಸ್ಥೆ ವಿಶ್ವವಿದ್ಯಾಲಯವಾಗಿ ರಾಷ್ಟ್ರ ಮಟ್ಟದಲ್ಲಿಬೆಳೆದಿದೆ’ ಎಂದು ಹೇಳಿದರು.

ಟಿಕೆಟ್‌ ಕೊಡಿಸಿದ್ದೇ ನಾನು:

ಯಶವಂತರಾಯಗೌಡರಿಗೆ ಇಂಡಿ ಜಿಲ್ಲಾ ಪಂಚಾಯ್ತಿ ಟಿಕೆಟ್‌ ಸಿಗುವ ಸಾಧ್ಯತೆ ಇರಲಿಲ್ಲ. ಆಗ ನಾನು ಎಲ್ಲರ ವಿರೋಧ ಕಟ್ಟಿಕೊಂಡು ಟಿಕೆಟ್‌ ಕೊಡಿಸಿದೆ. ಬಳಿಕ ಜಿಲ್ಲಾ ಪಂಚಾಯ್ತಿ ಅಧ್ಯಕ್ಷನನ್ನಾಗಿ ಮಾಡಲು 31 ಸದಸ್ಯರಲ್ಲಿ 30 ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಅಂದಿನ ಅಧ್ಯಕ್ಷ ಬಸವರಾಜ ದೇಸಾಯಿ ಮತ್ತು ಸದಸ್ಯರಿಗೆ ಒತ್ತಡ ಹೇರಿ ಇವರನ್ನು ಅಧ್ಯಕ್ಷನನ್ನಾಗಿ ಮಾಡಿದ್ದು ನಾನು ಎಂಬುದು ನೆನಪಿರಲಿ ಎಂದು ಹೇಳಿದರು.

ಜಿಲ್ಲೆಯಲ್ಲಿ ಯಾವಾವ ಕ್ಷೇತ್ರದಲ್ಲಿ ಯಾರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಕಳೆದ ಚುನಾವಣೆಯಲ್ಲಿ ಯಾರ ಜೊತೆಗೆ ಸೇರಿಕೊಂಡಿದ್ದರು ಎಂಬುದು ಗೊತ್ತಿದೆ.ಉತ್ತರ ಕುಮಾರನ ರೀತಿ ಕೂಗಾಡಿದರೆ ದೊಡ್ಡ ನಾಯಕನಾಗಲು ಸಾಧ್ಯವಿಲ್ಲ ಎಂದರು.

ನನಗೆ ಸಚಿವ ಸ್ಥಾನ ತಪ್ಪಿಸಲು ಇವರು ಏನೇನು ಮಾಡಿದರು ಎಂಬುದು ತಿಳಿದಿದೆ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ನನ್ನನ್ನು ಸಚಿವನನ್ನಾಗಿ ಮಾಡಿ, ಜಲಸಂಪನ್ಮೂಲ ಖಾತೆ ಕೊಟ್ಟಿದ್ದೇ ಹೊರತು ಇವರ ಸಹಕಾರದಿಂದಲ್ಲ ಎಂದು ಸ್ಪಷ್ಟಪಡಿಸಿದರು.

***

ರಣಕಹಳೆಯಲ್ಲ; ಬ್ಯಾಂಡ್‌ ಬಜಾನಾ ಊದಿ

ವಿಜಯಪುರ:ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮುಂತಾದವರುಕಳೆದ ವಿಧಾನಸಭೆ ಚುನಾವಣೆ ವೇಳೆ ಬಬಲೇಶ್ವರ ಕ್ಷೇತ್ರದಲ್ಲಿ ನನ್ನ ವಿರುದ್ಧ ರಣಕಹಳೆ ಊದಿದರೂ ಏನೂ ಮಾಡಲಾಗಲಿಲ್ಲ. ಇನ್ನು ಬ್ಯಾಂಡ್‌, ಬಜಾನಾ ಊದುವವರು ಯಾವ ಲೆಕ್ಕ? ಎಂದು ಶಾಸಕ ಎಂ.ಬಿ.ಪಾಟೀಲ ಅವರು ಶಾಸಕ ಯಶವಂತರಾಯಗೌಡ ಪಾಟೀಲಗೆ ತಿರುಗೇಟು ನೀಡಿದರು.

‘ಇಂಡಿ ಶಾಸಕರು ನನ್ನ ವಿರುದ್ಧ ರಣಕಹಳೆ ಊದುವುದಾಗಿ ಹೇಳಿದ್ದಾರೆ. ರಣಕಹಳೆ ಅಲ್ಲ, ಇಂಡಿ ಕ್ಷೇತ್ರದಲ್ಲಿ ಬ್ಯಾಂಡ್‌ ಊದುವುದನ್ನು ಮೊದಲು ಕಲಿಯಿರಿ’ ಎಂದರು.

‘ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ನಾನು ಮಾಡಿರುವ ಕೆಲಸಕ್ಕೆ ಸಿದ್ದೇಶ್ವರ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಜನರು ಮೆಚ್ಚುಗೆಯ ಸರ್ಟಿಫಿಕೇಟ್‌ ನೀಡಿರುವಾಗ ಇನ್ಯಾರ ಸರ್ಟಿಫಿಕೇಟ್‌ ನನಗೆ ಬೇಡ’ ಎಂದು ಹೇಳಿದರು.

‘ಇಂಡಿ ಕ್ಷೇತ್ರದ 16 ಕೆರೆಗಳಿಗೆ ನೀರು ತುಂಬುವ ಯೋಜನೆ ಜಲಸಂಪನ್ಮೂಲ ಇಲಾಖೆಯ ರೂಪಿಸಿದಲ್ಲ. ಸ್ವತಃ ನಾನೇ ಆ ಯೋಜನೆಯನ್ನು ರೂಪಿಸಿರುವುದು’ ಎಂದು ಅವರು ಸಮರ್ಥಿಸಿಕೊಂಡರು.

ಮೈಸೂರು ದಸರಾ ಮೆರವಣಿಗೆ ವೇಳೆ ಆನೆ ನೋಡಿ ಶ್ವಾನಗಳು ಕೂಗುವುದು ಸಹಜ. ನನಗೆ ಮಾಡಲು ಬಹಳ ಕೆಲಸ ಇದೆ ಎಂದರು.

***

ಭೀಮಾಶಂಕರ ಸಕ್ಕರೆ ಕಾರ್ಖಾನೆ ವ್ಯವಹಾರದಲ್ಲಿ ನೀವು ಏನೇನು ಮಾಡಿದ್ದೀರಿ, ಭೀಮಾ ನದಿಯಲ್ಲಿ ಉಸುಕಿನ ವ್ಯವಹಾರ ಮಾಡಿರುವ ಬಗ್ಗೆಯೂ ಗೊತ್ತಿದೆ
–ಎಂ.ಬಿ.ಪಾಟೀಲ, ಶಾಸಕ, ಬಬಲೇಶ್ವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.