ವಿಜಯಪುರ: ತಾಲ್ಲೂಕಿನ ಮದಭಾವಿ ತಾಂಡಾ.1ರ ಹತ್ತಿರದ ಟಯರ್ ಕಾರ್ಖಾನೆಯನ್ನು ಬಂದ್ ಮಾಡಿ, ಇಲ್ಲದಿದ್ದರೆ ಚುನಾವಣಾ ಬಹಿಷ್ಕಾರಕ್ಕೆ ಸಮ್ಮತಿ ನೀಡಿ ಎಂದು ಆಗ್ರಹಿಸಿ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಮದಬಾವಿ ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ ರಾಠೋಡ ಮಾತನಾಡಿ, ‘ಜಿಲ್ಲಾಡಳಿತ ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಂದ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಬೇಕು. ಕಾರ್ಖಾನೆ ಬಂದ್ ಮಾಡಬೇಕು, ಇಲ್ಲ ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.
ಕಾರ್ಖಾನೆಯಿಂದ ಗ್ರಾಮದ ಮಕ್ಕಳಿಗೆ, ಮಹಿಳೆಯರಿಗೆ, ವಯೋವೃದ್ಧರಿಗೆ ಸಮಸ್ಯೆಯಾಗುತ್ತಿದೆ. ಗ್ರಾಮಸ್ಥರಿಗೆ ಗಂಟಲು ಉರಿ, ಉಸಿರಾಟದ ತೊಂದರೆ, ಹೃದಯ ಸಂಬಂಧಿ ಕಾಯಿಲೆ, ಪಾರ್ಶ್ವವಾಯು ಸೇರಿದಂತೆ ಅನೇಕ ಸಮಸ್ಯೆ ಎದುರಿಸುವಂತಾಗಿದೆ ಎಂದರು.
ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಮಹಾದೇವ ಮುರಗಿ ಆಗಮಿಸಿ, ‘ಟಯರ್ ಕಾರ್ಖಾನೆಗೆ ಸಂಬಂಧಿಸಿ ಅಲ್ಲಿನ ಗ್ರಾಮ ಲೆಕ್ಕಾಧಿಕಾರಿ, ಪಿಡಿಒ ಹಾಗೂ ಚುನಾವಣಾಧಿಕಾರಿಗಳಿಂದ ವರದಿ ತರೆಸಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪತ್ರ ಕಳುಹಿಸಲಾಗಿದೆ. ಯಾರೂ ಚುನಾವಣಾ ಬಹಿಷ್ಕಾರ ಮಾಡಬಾರದು, ಇದು ಸಂವಿಧಾನದಡಿ ಒಳ್ಳೆಯ ನಾಯಕರನ್ನು ಆರಿಸಲು ಇರುವ ಬಹುದೊಡ್ಡ ಹಕ್ಕಾಗಿದೆ’ ಎಂದು ಮನವರಿಕೆ ಮಾಡಿದರು.
ಗ್ರಾಮ ಪಂಚಾಯಿತಿ ಸದಸ್ಯ ಪಾಂಡುರಂಗ ರಾಠೋಡ, ಮೇಘು ರಾಠೋಡ, ಪ್ರಕಾಶ ರಾಠೋಡ, ಉತ್ತಮ ರಾಠೋಡ, ಖೀರು ರಾಠೋಡ, ಕೃಷ್ಣಾ ಚವ್ಹಾಣ, ಗಂಗಾರಾಮ ಚವ್ಹಾಣ, ರಮೇಶ ರಾಠೋಡ, ಗೋಪಾಲ ನಾಯಕ, ಬಾಸು ರಾಠೋಡ, ಲಕ್ಷ್ಮಣ ನಾಯಕ, ಠಾಕರು ರಾಠೋಡ ಸೇರಿದಂತೆ ಅನೇಕರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.