ಮುದ್ದೇಬಿಹಾಳ: ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಹೆಸರಿಗೆ ಮಸಿ ಮಳಿಯುತ್ತಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪಟ್ಟಣದಲ್ಲಿ ಜೈನ ಸಮಾಜದವರು ತಹಸೀಲ್ದಾರ್‌ಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಗೆ ಆಗಮಿಸಿದ್ದ ಸಮಾಜದವರು ಮನವಿ ಪತ್ರ ಸಲ್ಲಿಸಿದರು.
ವಕೀಲ ಶಾಂತರಾಜ ಸಗರಿ ಮಾತನಾಡಿ, ರಾಜ್ಯದಲ್ಲಿ ಎಲ್ಲ ಸಮಾಜಗಳ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಧರ್ಮಸ್ಥಳ ಸಂಸ್ಥೆಯಿಂದ ಧನಸಹಾಯ ದೊರೆತಿದೆ. ಆದರೆ, ಅಚ್ಚರಿಯ ಸಂಗತಿ ಎಂದರೆ ಯಾವೊಬ್ಬರೂ ಧರ್ಮಸ್ಥಳ ಕ್ಷೇತ್ರದ ಕುರಿತು ಅಪಪ್ರಚಾರ ಮಾಡುತ್ತಿರುವವರ ವಿರುದ್ದ ಧ್ವನಿ ಎತ್ತದಿರುವುದು ದುರಂತದ ಸಂಗತಿ. ಕೆರೆ ಕಟ್ಟೆಗಳು, ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಮಹಿಳೆಯರು, ನಿರ್ಗತಿಕರು, ಕೃಷಿಕರು, ವೈದ್ಯಕೀಯ, ವಿಕಲಚೇತನರು ಧರ್ಮಸ್ಥಳ ಸಂಸ್ಥೆಯ ಸಹಾಯ ಪಡೆದುಕೊಂಡಿದ್ದಾರೆ. ಇಂದು ವ್ಯವಸ್ಥಿತವಾಗಿ ಕ್ಷೇತ್ರದ ಹಾಗೂ ಹೆಗ್ಗಡೆ ಅವರ ಹೆಸರಿಗೆ ಕಳಂಕ ತರುವ ಕಾರ್ಯ ನಡೆದಿದೆ. ಅದಕ್ಕೆ ಸಮಾಜ ಜ್ಯಾತ್ಯಾತೀತವಾಗಿ ಇಂತಹ ದುರುಳರ ವಿರುದ್ಧ ಕ್ರಮ ಜರುಗಿಸಲು ಧ್ವನಿ ಎತ್ತಬೇಕಿದೆ ಎಂದರು.
ಹಿರಿಯ ಸಾಹಿತಿ ಅಶೋಕ ಮಣಿ, ಮುಖಂಡ ಪ್ರಭು ಕಡಿ, ಸಿದ್ದರಾಜ ಹೊಳಿ ಮಾತನಾಡಿ, ಧರ್ಮಸ್ಥಳ ಕ್ಷೇತ್ರಕ್ಕೆ ಬರುವ ಲಕ್ಷಾಂತರ ಭಕ್ತರಿಗೆ ಅನ್ನಪ್ರಸಾದವೂ ಸೇರಿದಂತೆ ಮೂಲಸೌಕರ್ಯ ಅಚ್ಚುಕಟ್ಟಾಗಿ ಒದಗಿಸುತ್ತಾ ಬಂದವರು ವೀರೇಂದ್ರ ಹೆಗ್ಗಡೆಯವರು. ಅವರ ತೇಜೋವಧೆ ಮಾಡುತ್ತಾ, ಸುಳ್ಳು ಆರೋಪ ಮಾಡಿ ಧರ್ಮಸ್ಥಳ ಕ್ಷೇತ್ರದ ಪಾವಿತ್ರ‍್ಯಕ್ಕೆ ಭಂಗ ತರುವಂತಹ ವ್ಯವಸ್ಥಿತ ಷಡ್ಯಂತ್ರವನ್ನು ಕೆಲವೊಂದು ದುಷ್ಟ ಶಕ್ತಿಗಳು ಮಾಡುತ್ತಾ ನಡೆದಿವೆ.ಸತ್ಯಾಂಶವನ್ನು ಕಂಡುಹಿಡಿಯಲು ಘನಸರ್ಕಾರವು ಎಸ್.ಆಯ್.ಟಿ. ರಚನೆಯನ್ನು ಮಾಡಿದೆ. ಅದರ ಬಗ್ಗೆ ನಮ್ಮದು ಯಾವುದೂ ಅಭ್ಯಂತರವಿಲ್ಲ. ಆದರೆ ಸತ್ಯಶೋಧನೆ ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿರಲಿ ಎಂದರು.
ರಾಜ್ಯ ಸರ್ಕಾರ ಧರ್ಮಸ್ಥಳ ಕ್ಷೇತ್ರದ ಪಾವಿತ್ರ‍್ಯತೆಯನ್ನು ಹಾಗೂ ವೀರೇಂದ್ರ ಹೆಗ್ಗಡೆಯವರ ಘನತೆ, ಗೌರವ ಎತ್ತಿಹಿಡಿಯಬೇಕು. ಇಲ್ಲದಿದ್ದರೆ ಅನಿವಾರ್ಯವಾಗಿ ಉಗ್ರ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಪ್ರತಿಭಟನೆಯಲ್ಲಿ ಪ್ರಮುಖರಾದ ಮಾಣಿಕಚಂದ ದಂಡಾವತಿ, ಬಾಬು ಗೋಗಿ, ಮಹಾವೀರ ಸಗರಿ, ಗೊಮ್ಮಟೇಶ ಸಗರಿ, ರಾಮಣ್ಣ ದಶರಥ, ಬಿ.ವಾಯ್.ಲಿಂಗದಳ್ಳಿ,ಸAಜಯ ಓಸ್ವಾಲ್, ಮಹೇಂದ್ರ ಓಸ್ವಾಲ, ಮಾಣಿಕ ಸಗರಿ, ಅಜಿತ ಗೊಂಗಡಿ, ಮಹಾವೀರ ಮಂಕಣಿ, ಭರತೇಶ ಮಂಕಣಿ,ಆದಿನಾಥ ನಾಗಾವಿ, ಭೀಮರಾಯ ದೊಡಮನಿ, ಅಭಿನಂದ ಕಡೇಹಳ್ಳಿ ಮೊದಲಾದವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.