ಮುದ್ದೇಬಿಹಾಳ: ಕಂದಾಯ ಗ್ರಾಮಗಳಾಗಿ ಘೋಷಣೆಯಾಗಿರುವ ತಾಂಡಾಗಳ ನಿವಾಸಿಗಳಿಗೆ ಡಿಜಿಟಲ್ ಹಕ್ಕು ಪತ್ರ ವಿತರಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಿರುವುದರಿಂದ ಮುದ್ದೇಬಿಹಾಳ ಕಂದಾಯ ವಿಭಾಗದಲ್ಲೂ ನೋಂದಣಿ ಪ್ರಕ್ರಿಯೆ ಚುರುಕು ಪಡೆದುಕೊಂಡಿದೆ.
ಪಟ್ಟಣದ ತಹಶೀಲ್ದಾರ್ ಕಚೇರಿಯ ಪಕ್ಕದಲ್ಲಿಯೇ ಇರುವ ಉಪ ನೋಂದಣಾಧಿಕಾರಿಗಳ ಕಚೇರಿ ಕಳೆದ ಎರಡು ವಾರಗಳಿಂದ ತಾಂಡಾದ ನಿವಾಸಿಗಳಿಂದ ತುಂಬಿ ತುಳುಕುತ್ತಿದೆ.
ಸರ್ಕಾರ ಹಾಡಿ, ಹಟ್ಟಿ ಹಾಗೂ ತಾಂಡಾಗಳಲ್ಲಿನ ನಿವಾಸಿಗಳಿಗೆ 94 ‘ಡಿ’ ಅಡಿ ಒಂದು ಲಕ್ಷ ಡಿಜಿಟಲ್ ಹಕ್ಕುಪತ್ರ ವಿತರಿಸುವ ಘೋಷಣೆ ಮಾಡಿದೆ. ಅದರನ್ವಯ ಕಂದಾಯ ಇಲಾಖೆಯ ಅಧಿಕಾರಿಗಳು ಆಯಾ ಘೋಷಿತ ಕಂದಾಯ ಗ್ರಾಮಗಳಲ್ಲಿರುವ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ನೀಡಿ ಅದನ್ನು ನೋಂದಣಿ ಮಾಡಿಸಲು ಉಪ ನೋಂದಣಾಧಿಕಾರಿ ಕಚೇರಿಗೆ ಕಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಸರ್ಕಾರದ ವಿವಿಧ ಸವಲತ್ತುಗಳು ದೊರೆಯಬೇಕಾದರೆ ಅಲ್ಲಿನ ನಿವಾಸಿಗಳಿಗೆ ಶಾಶ್ವತ ಹಕ್ಕುಪತ್ರ ನೀಡುವ ಉದ್ದೇಶದಿಂದ 2016ರಲ್ಲೇ ಕಾನೂನಿಗೆ ತಿದ್ದುಪಡಿ ತರಲಾಗಿತ್ತು. ಕಳೆದ ಐದು ವರ್ಷಗಳಲ್ಲಿ ಒಂದು ಲಕ್ಷ ಹಕ್ಕುಪತ್ರಗಳನ್ನು ಮಾತ್ರ ವಿತರಿಸಲಾಗಿದ್ದು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ₹1.30 ಲಕ್ಷ ಹಕ್ಕುಪತ್ರಗಳನ್ನು ವಿತರಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಈಚೆಗೆ ತಿಳಿಸಿದ್ದರು.
ಹಿಂದೆಲ್ಲ ಕಾಗದದ ಹಕ್ಕುಪತ್ರಗಳನ್ನು ಕೊಡುತ್ತಿದ್ದಾಗ ಮೂಲ ದಾಖಲೆಗಳು ಇಲ್ಲದೇ ಸಮಸ್ಯೆ ಆಗುತ್ತಿತ್ತು. ವ್ಯಾಜ್ಯಗಳಿಗೂ ಕಾರಣವಾಗುತ್ತಿತ್ತು. ಆದರೆ, ಡಿಜಿಟಲ್ ಹಕ್ಕುಪತ್ರದಿಂದಾಗಿ ಆ ರೀತಿಯ ಸಮಸ್ಯೆಗಳು ನಿವಾರಣೆ ಆಗುತ್ತವೆ ಎಂಬ ಕಾರಣದಿಂದ ಸರ್ಕಾರ ಡಿಜಿಟಲ್ ಹಕ್ಕುಪತ್ರ ನೀಡಲು ಮುಂದಾಗಿದೆ. ಮೂಲ ಕಡತಗಳು ಕಳೆದು ಹೋಗುವ ಅಥವಾ ಸ್ಥಳಾಂತರವಾಗುವ ಸಾಧ್ಯತೆ ಇಲ್ಲ. ನಕಲು ಮಾಡುವುದಕ್ಕೂ ಸಾಧ್ಯವಾಗುವುದಿಲ್ಲ ಎಂಬ ಉದ್ದೇಶದಿಂದ ಡಿಜಿಟಲ್ ಹಕ್ಕುಪತ್ರ ನೀಡುವ ಕಾರ್ಯ ಪ್ರಗತಿಯಲ್ಲಿದೆ ಎನ್ನುತ್ತಾರೆ ಕಂದಾಯ ಇಲಾಖೆಯ ಅಧಿಕಾರಿಗಳು.
ಗ್ಯಾರಂಟಿ ಯೋಜನೆಗಳಿಂದ ಜನಪ್ರಿಯತೆ ಹೆಚ್ಚಿಸಿಕೊಂಡಿರುವ ಸರ್ಕಾರ ಇದೀಗ ಕಂದಾಯ ಗ್ರಾಮಗಳಲ್ಲಿರುವ ನಿವಾಸಿಗಳಿಗೆ ಡಿಜಿಟಲ್ ಹಕ್ಕುಪತ್ರ ಕೊಡುವ ಕಾರ್ಯಕ್ಕೆ ಮುಂದಾಗಿರುವುದು ತಾಂಡಾದ ನಿವಾಸಿಗಳಿಗೆ ನೆಮ್ಮದಿ ಭಾವ ತರಿಸಿದೆಸಂತೋಷ ಚವ್ಹಾಣ(ಹುಲ್ಲೂರ) ಬಂಜಾರ ಸಮಾಜದ ಮುಖಂಡ
ದಿನಕ್ಕೆ ನೂರು ಗುರಿ ನೀಡಿದ್ದು ನಮ್ಮಲ್ಲಿ ಈಗಾಗಲೇ 800ಕ್ಕೂ ಹೆಚ್ಚು ಹಕ್ಕುಪತ್ರಗಳನ್ನು ನೋಂದಾಯಿಸಿದ್ದೇವೆ. ಕಂದಾಯ ಇಲಾಖೆಯ ಅಧಿಕಾರಿಗಳು ನೀಡುವ ಹಕ್ಕುಪತ್ರಗಳನ್ನು ನೋಂದಾಯಿಸುವ ಕೆಲಸ ಪ್ರಗತಿಯಲ್ಲಿದೆಸಚಿನ್ ಖೈನೂರ ಉಪನೋಂದಣಾಧಿಕಾರಿ
ಮುದ್ದೇಬಿಹಾಳ ಕಂದಾಯ ವಿಭಾಗದ ವ್ಯಾಪ್ತಿಯಲ್ಲಿ 1200ಕ್ಕೂ ಹೆಚ್ಚು ನಿವಾಸಿಗರಿಗೆ ಡಿಜಿಟಲ್ ಹಕ್ಕುಪತ್ರ ನೀಡುವ ಗುರಿ ಹೊಂದಲಾಗಿದ್ದು ಈಗಾಗಲೇ ಶೇ 80 ರಷ್ಟು ಜನರಿಗೆ ಹಕ್ಕುಪತ್ರ ನೀಡಲಾಗಿದೆಬಲರಾಮ ಕಟ್ಟೀಮನಿ ತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.