ADVERTISEMENT

ದಿಶಾ ರವಿ ಬಂಧನ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2021, 13:00 IST
Last Updated 21 ಫೆಬ್ರುವರಿ 2021, 13:00 IST
ಪರಿಸರ ಕಾರ್ಯಕರ್ತೆ ದಿಶಾ ರವಿ ಬಂಧನ ಖಂಡಿಸಿ ಪ್ರಗತಿಪರ ಸಂಘಟನೆಗಳ ವೇದಿಕೆ ವತಿಯಿಂದ ವಿಜಯಪುರದಲ್ಲಿ ಪ್ರತಿಭಟನೆ ನಡೆಸಲಾಯಿತು 
ಪರಿಸರ ಕಾರ್ಯಕರ್ತೆ ದಿಶಾ ರವಿ ಬಂಧನ ಖಂಡಿಸಿ ಪ್ರಗತಿಪರ ಸಂಘಟನೆಗಳ ವೇದಿಕೆ ವತಿಯಿಂದ ವಿಜಯಪುರದಲ್ಲಿ ಪ್ರತಿಭಟನೆ ನಡೆಸಲಾಯಿತು    

ವಿಜಯಪುರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿದ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರ ವಿರುದ್ಧ ಟೂಲ್‌ಕಿಟ್‌ ಪ್ರಕರಣ ದಾಖಲಿಸಿ ಬಂಧಿಸಿರುವುದನ್ನು ಖಂಡಿಸಿಪ್ರಗತಿಪರ ಸಂಘಟನೆಗಳ ವೇದಿಕೆ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಹೋರಾಟಗಾರ ಭೀಮಸಿ ಕಲಾದಗಿ ಮಾತನಾಡಿ, ರೈತರ ಹೋರಾಟವನ್ನು ಬೆಂಬಲಿಸಿದ್ದಕ್ಕಾಗಿ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರನ್ನು ದೆಹಲಿ ಪೊಲೀಸರು ಏಕಾಏಕಿಯಾಗಿ ಬೆಂಗಳೂರಿನಲ್ಲಿ ಬಂಧಿಸಿ, ದೆಹಲಿಗೆ ಕರೆದುಕೊಂಡು ಹೋಗಿರುವುದು ಪ್ರಜಾಪ್ರಭುತ್ವ ಕಗ್ಗೊಲೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ರೈತರ ಹೋರಾಟವನ್ನು ಬೆಂಬಲಿಸುವುದು ಪ್ರತಿಯೊಬ್ಬ ಪ್ರಜ್ಞಾವಂತ ಪ್ರಜೆಯ ಆದ್ಯ ಕರ್ತವ್ಯ. ಸರ್ಕಾರದ ವಿರುದ್ಧ ಧ್ವನಿ ಎತ್ತುವವರನ್ನು ಮತ್ತು ಅಂತರರಾಷ್ಟ್ರೀಯ ವಿಚಾರಗಳನ್ನು ಒಳಗೊಂಡಿರುವವರ ಮೇಲೆ ದೇಶದ್ರೋಹದ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಅವರನ್ನು ಜೈಲಿಗೆ ಕಳುಹಿಸಿರುವುದು ಅಕ್ಷಮ್ಯ ಅಪರಾಧ ಎಂದರು.

ADVERTISEMENT

ಬಿ. ಭಗವಾನರೆಡ್ಡಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವುದು, ವೈಚಾರಿಕ ಮತ್ತು ಸೈದ್ಯಾಂತಿಕ ಭಿನ್ನಾಭಿಪ್ರಾಯಗಳಿರುವುದು ಸ್ವಾಭಾವಿಕ. ಆದರೆ, ಆಡಳಿತ ಪಕ್ಷದವರು ತಮ್ಮ ಸಿದ್ಧಾಂತಕ್ಕೆ ವಿರುದ್ಧ ಇರುವವರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ, ದೇಶದ್ರೋಹದ ಪಟ್ಟ ಕಟ್ಟಿ ಪ್ರತಿಭಟನೆ ಹಕ್ಕನ್ನು ದಮನ ಮಾಡುವ ಉದ್ದೇಶದಿಂದ ಜೈಲಿಗೆ ಹಾಕುವುದು ಅಪ್ರಜಾತಾಂತ್ರಿಕ ಕೃತ್ಯವಾಗಿದೆ ಎಂದರು.

ಅಕ್ರಂ ಮಾಶ್ಯಾಳಕರ ಮಾತನಾಡಿ, ಕೆಲವು ಮಾಧ್ಯಮಗಳು ಸತ್ಯ ಅಸತ್ಯವನ್ನು ಪರೀಕ್ಷಿಸದೇ ಮಹಾ ಅಪರಾಧ ಎಂದು ಬಿಂಬಿಸಿ ಅವರನ್ನು ಮಾನಸಿಕವಾಗಿ ಹಿಂಸಿಸುತ್ತಿರುವುದು ಖಂಡನೀಯ ಎಂದು ಹೇಳಿದರು.

ಸದಾನಂದ ಮೋದಿ, ಇತಿಹಾಸದ ಎಲ್ಲಾ ಕಾಲಘಟ್ಟದಲ್ಲಿ ಪ್ರಭುತ್ವದ ವಿರುದ್ಧ ಧ್ವನಿ ಎತ್ತಿದವರನ್ನು ಜೈಲಿಗಟ್ಟುವುದು ಸ್ವಾಭಾವಿಕ ಎಂದರು.

ಮುಖಂಡರಾದಸಿದ್ದಲಿಂಗ ಬಾಗೇವಾಡಿ, ಭರತಕುಮಾರ ಎಚ್.ಟಿ., ಸಿದ್ದಲಿಂಗ ಬಾಗೇವಾಡಿ, ಇರ್ಫಾನ್‌ ಶೇಖ್‌, ದಸ್ತಗೀರ ಉಕ್ಕಲಿ, ಸಂತೋಷ ಹೋಳಿನ, ವಿರೂಪಾಕ್ಷ, ಪ್ರಮೋದ, ಕೃಷ್ಣ, ಖಲೀಫ್, ದಾನಪ್ಪ ಸುರಗುಂಡ, ಅಜಾದ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.