ವಿಜಯಪುರ: ರೈತರಿಗೆ ರಸಗೊಬ್ಬರ ಪೂರೈಸುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾದಿಂದ ಬುಧವಾರ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರಿಗೆ ಮನವಿ ಸಲ್ಲಿಸಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ರೈತರಿಗೆ ಪೊಳ್ಳು ಭರವಸೆ ಕೊಟ್ಟ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ ರೈತರನ್ನು ತುಳಿಯುತ್ತಿದೆ. ರೈತ ವಿರೋಧಿ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರ ನೀತಿ ಇದೇ ರೀತಿ ಮುಂದುವರಿದರೆ ಬಿಜೆಪಿ ರೈತ ಮೋರ್ಚಾ ವತಿಯಿಂದ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಸಾಲ ದೇಶದ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಆದರೆ, ರಾಜ್ಯ ಸರ್ಕಾರ ಮಾಡಿರುವ ಸಾಲ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳುವಂತಹದಾಗಿದೆ ಎಂದು ಆರೋಪಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಮಾತನಾಡಿ, ರಾಜ್ಯದಲ್ಲಿ ಉತ್ತಮ ಮುಂಗಾರು ಮಳೆಯಾಗಿದೆ ಎಂಬುದು ಅರಿವಿದ್ದರೂ ಮುಂದಾಲೋಚನೆ ಮಾಡದೇ ರೈತರಿಗೆ ರಸಗೊಬ್ಬರ ಕೊಡದೇ ಇರುವುದು ರಾಜ್ಯ ಕಾಂಗ್ರೆಸ್ ಸರ್ಕಾರ ತಾತ್ಸಾರವನ್ನು ತೋರಿಸುತ್ತದೆ. ಏನಾದರೂ ಕೇಳಿದರೂ ಕೇಂದ್ರದ ಕಡೆಗೆ ಬೊಟ್ಟು ತೋರಿಸುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡಲೇ ರಾಜೀನಾಮೆ ಕೊಡುಬೇಕು ಎಂದು ಆಗ್ರಹಿಸಿದರು.
ರಸಗೊಬ್ಬರಕ್ಕಾಗಿ ಕೇಂದ್ರಕ್ಕೆ ಪತ್ರ ಬರೆದು ಅವರು ಕೊಡದೇ ಇದ್ದರೆ ಅವರ ವಿರುದ್ಧ ದೂಷಣೆ ಮಾಡುವ ಸಿಎಂ ಸಿದ್ಧರಾಮಯ್ಯ ಹೀನ ರಾಜಕಾರಣ ನಡೆಸಿ ಕೇಂದ್ರದಿಂದ ರಸಗೊಬ್ಬರ ಬರುತ್ತಿಲ್ಲವೆಂದು ಮೊಸಳೆ ಕಣ್ಣಿರು ಹಾಕುತ್ತಿದ್ದಾರೆ. ಈ ಹಂಗಾಮಿಗೆ ಆಗುವಷ್ಟು ರಸಗೊಬ್ಬರ ಈಗಾಗಲೇ ರಾಜ್ಯಕ್ಕೆ ಬಂದಿದ್ದರೂ ಅದನ್ನು ಸರಿಯಾಗಿ ರೈತರಿಗೆ ಹಂಚದೇ ಕಾಳಸಂತೆಯಲ್ಲಿ ಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಮುಖಂಡರಾದ ಸಂಜೀವ ಐಹೊಳೆ, ಮುಳುಗೌಡ ಪಾಟೀಲ, ಈರಣ್ಣ ರಾವೂರ, ಸಂಜಯ ಪಾಟೀಲ, ಸಾಬು ಮಾಶ್ಯಾಳ, ಬಾಲರೆಡ್ಡಿ, ಉಮೇಶ ವಂದಾಲ, ಮಹೇಂದ್ರ ನಾಯಕ, ಛಾಯಾ ನುಸೇನವರ, ಭಾರತಿ ಭುಯ್ಯಾರ, ಭರತ ಕೋಳಿ, ಚಿದಾನಂದ ಛಲವಾದಿ, ಸಂಗಮೇಶ ಉಕ್ಕಲಿ, ಮಲ್ಲಿಕಾರ್ಜುನ ಕಿವಡೆ, ಮಲ್ಲು ಕಲದಾಗಿ, ರವಿಕಾಂತ ಬಗಲಿ, ಜಗದೀಶ ಪಂಪಣ್ಣವರ, ಸಿದ್ದು ಮಕಣಾಪೂರ, ರಾಮಚಂದ್ರ ಚವ್ಹಾಣ, ಬಸವರಾಜ ಹಳ್ಳಿ, ರಾಹುಲ ಜಾಧವ, ಸಂಗಮೇಶ ಉಕ್ಕಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.