ADVERTISEMENT

ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸಲು ಒತ್ತಾಯ

ಅಧಿವೇಶನದಲ್ಲಿ ಧ್ವನಿ ಎತ್ತಿದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 15:48 IST
Last Updated 13 ಸೆಪ್ಟೆಂಬರ್ 2022, 15:48 IST
ಯಶವಂತರಾಯಗೌಡ ಪಾಟೀಲ
ಯಶವಂತರಾಯಗೌಡ ಪಾಟೀಲ   

ವಿಜಯಪುರ: ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ 2006–07ರಿಂದ ಪ್ರಾರಂಭವಾಗಿದ್ದರೂ ಇದುವರೆಗೂ ನೀರು ಹರಿದಿಲ್ಲ. ಇಂಡಿ, ತಾಂಬಾ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹಳ ಇದೆ. ಹೀಗಾಗಿ ಕಾಲುವೆಯೆ 147 ಕಿ.ಮೀ. ವರೆಗೆ ನೀರು ಹರಿಸಿದರೆ ಅನುಕೂಲವಾಗುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲವಿನಂತಿ ಮಾಡಿದರು.

ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಮಂಗಳವಾರ ಚುಕ್ಕಿ ಗುರುತಿನ ಪ್ರಶ್ನೆ ಕೇಳಿದ ಅವರು, ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸುವಂತೆ 187 ದಿನಗಳಿಂದ ತಾಂಬಾದಲ್ಲಿ ಧರಣಿ ನಡೆಯುತ್ತಿದೆ. ಆದಷ್ಟು ಬೇಗ ನೀರು ಹರಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಗುತ್ತಿ ಬಸವಣ್ಣ ಕಾಲುವೆಯಲ್ಲಿ ನೀರು ನಿರ್ವಹಣೆ ಸರಿಯಾಗಿಲ್ಲ. ಹೀಗಾಗಿ ಸ್ಕಾಡಾ ಗೇಟ್‌ ಅಳವಡಿಸಬೇಕು ಎಂದು ಶಾಸಕರು ಒತ್ತಾಯಿಸಿದರು.

ADVERTISEMENT

ಜಲ ಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ಮಾತನಾಡಿ, ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ 2015–16ರಿಂದ ಐದು ಪಂಪ್‌ಗಳು ಬಂದ್‌ ಆಗಿದ್ದವು. ಇದೀಗ ₹7.75 ಕೋಟಿ ಮೊತ್ತದಲ್ಲಿ ಏಳು ಪಂಪ್‌ ರಿಪೇರಿ ಮಾಡಲಾಗಿದೆ. ಕಂಪನಿಯೊಂದಕ್ಕೆ ಟೆಂಡರ್‌ ನೀಡಲಾಗಿದ್ದು, ಸಬ್‌ ಸ್ಟೇಷನ್‌ ಕೂಡ ಕಂಪನಿಯೇ ನಿರ್ವಹಣೆ ಮಾಡಲಿದೆ, ಎಲೆಕ್ಟ್ರಿಕಲ್‌ ಎಂಜಿನಿಯರ್‌, ಮೆಕ್ಯಾನಿಕಲ್‌ ಎಂಜಿನಿಯರ್‌ ಕಂಪನಿಯೇ ನೇಮಿಸಲಿದೆ,ಐದು ವರ್ಷ ನಿರ್ವಹಣೆ ಮಾಡಬೇಕು. ಈಗಾಗಲೇ ನಾಲ್ಕು ಪಂಪ್‌ ಚಾಲು ಆಗಿವೆ. ಇನ್ನೆರಡು ಪಂಪ್‌ ಎರಡು ದಿನಗಳಲ್ಲಿ ಚಾಲು ಆಗಲಿವೆ. ಈ ತಿಂಗಳಾಂತ್ಯದೊಳಗೆ ಏಳನೇ ಪಂಪ್‌ ಕೂಡ ಚಾಲು ಮಾಡಲಾಗುವುದು. ಹೆಚ್ಚುವರಿಯಾಗಿ ಇನ್ನೊಂದು ಪಂಪ್‌ ಇಡಲಾಗುವುದು ಎಂದು ಹೇಳಿದರು.

ತಾಂತ್ರಿಕ ಸಮಸ್ಯೆ ಇರುವುದರಿಂದ147 ಕಿ.ಮೀ. ವರೆಗೆ ನೀರು ಹರಿಸಲು ಕಷ್ಟಸಾಧ್ಯ. ಆದರೆ, 97 ಕಿ.ಮೀ. ವರೆಗೆ ನೀರು ಕೊಡುತ್ತಿದ್ದೇವೆ. ಇದರಿಂದ 42 ಸಾವಿರ ಹೆಕ್ಟೇರ್‌ ಭೂಮಿಗೆ ನೀರು ಕೊಡುತ್ತಿದ್ದೇವೆ. ಈ ವಿಷಯದಲ್ಲಿ ಸರ್ಕಾರ ಬದ್ಧವಾಗಿದೆ ಎಂದರು.

ಗುತ್ತಿ ಬಸವಣ್ಣ ಕಾಲುವೆಗೆ ಸ್ಕಾಡಾ ಗೇಟ್‌ ಅಳವಡಿಸುವ ಬಗ್ಗೆ ಆಲೋಚನೆ ಮಾಡಲಾಗುವುದು ಎಂದು ಹೇಳಿದರು.

ತ್ವರಿತ ಜಾರಿಗೆ ಆಗ್ರಹ:

ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ದಶಕಗಳ ಬೇಡಿಕೆಯಾಗಿದ್ದ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆ ಜಾರಿಗೊಳಿಸಿರುವುದಕ್ಕೆ ಸರ್ಕಾರಕ್ಕೆ ಮತ್ತು ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ.ಆದಷ್ಟು ತ್ವರಿತವಾಗಿ ಈ ಯೋಜನೆ ಜಾರಿಯಾಗಲಿ ಎಂದು ಒತ್ತಾಯಿಸಿದರು.

ಜಲ ಸಂಪನ್ಮೂಲ ಸಚಿವರ ಗೋವಿಂದ ಕಾರಜೋಳ ಮಾತನಾಡಿ,ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆ ಸಣ್ಣ ಯೋಜನೆಯಲ್ಲ, ₹ 3 ಸಾವಿರ ಕೋಟಿ ಮೊತ್ತದ ಬೃಹತ್‌ ಯೋಜನೆಯಾಗಿದೆ. ಜಾಕ್‌ವೆಲ್‌ನಿಂದ ಕುಪಗಡ್ಡಿ ವರೆಗೆ ನೀರು ಪಂಪ್‌ ಮಾಡುವ ₹770 ಕೋಟಿ ಮೊತ್ತದಮೊದಲ ಹಂತದ ಕಾಮಗಾರಿಗೆಈಗಾಗಲೇ ಮುಖ್ಯಮಂತ್ರಿ ಅವರು ಒಪ್ಪಿಗೆ ನೀಡಿ, ಟೆಂಡರ್‌ ಕರೆಯಲಾಗಿದೆ. ಇನ್ನುಳಿದಂತೆ ಎರಡನೇ ಹಂತದಲ್ಲಿ ಯೋಜನೆ ಅನುಷ್ಠಾನ ಮಾಡಲಾಗುವುದು ಎಂದರು.

‌ ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನ ನಮ್ಮದೇ ಸರ್ಕಾರ ಅಧಿಕಾರದಲ್ಲಿ ಇದ್ದರೂ ಸಾಧ್ಯವಾಗಲಿಲ್ಲ. ಆದರೆ, ನಿಮ್ಮ ಅವಧಿಯಲ್ಲಿಈ ಯೋಜನೆ ಜಾರಿಯಾಗಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ

–ಯಶವಂತರಾಯಗೌಡ ಪಾಟೀಲ, ಶಾಸಕ, ಇಂಡಿ

ರೇವಣ ಸಿದ್ದೇಶ್ವರ ಏತನೀರಾವರಿ ಯೋಜನೆ ಜಾರಿಯಿಂದ 57 ಹಳ್ಳಿಗಳು ನೀರಾವರಿಯಾಗಲಿವೆ. ನಿಮ್ಮಲ್ಲೇ ಐದು ವರ್ಷ ಜಲಸಂಪನ್ಮೂಲ ಇಲಾಖೆ ಇಟ್ಟುಕೊಂಡರೂ ಏನೂ ಮಾಡಿಲ್ಲ. ಕಳಕಳಿ, ಕಾಳಜಿಯಿಂದ ನಮ್ಮ ಸರ್ಕಾರ ಮಾಡಿದೆ

–ಗೋವಿಂದ ಕಾರಜೋಳ, ಜಲಸಂಪನ್ಮೂಲ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.