ತಾಳಿಕೋಟೆ: ‘ತಾಲ್ಲೂಕಿನ ಅಸ್ಕಿ ಗ್ರಾಮದ ಕೆಲವು ಗ್ರಾಮಸ್ಥರ ಆಧಾರ್ ಮತ್ತು ಪಡಿತರ ಚೀಟಿಗಳನ್ನು ಅಕ್ರಮವಾಗಿ ಪಡೆದುಕೊಂಡು ಅದರಲ್ಲಿ ತಿದ್ದುಪಡಿ ಮಾಡಿ ವಂಚಿಸಲಾಗಿದೆ’ ಎಂದು ಭೀಮ ಆರ್ಮಿ ಜಿಲ್ಲಾ ಅಧ್ಯಕ್ಷ ಡಿ.ಕೆ. ದ್ಯಾವಪ್ಪ ದೊಡ್ಡಮನಿ ನೇತೃತ್ವದಲ್ಲಿ ತಹಶೀಲ್ದಾರ್ ವಿನಯಾ ಹೂಗಾರ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
‘ಅಕ್ರಮ ತಿದ್ದುಪಡಿಯನ್ನು ರದ್ದುಪಡಿಸಿ ಅಸ್ಕಿ ಗ್ರಾಮಸ್ಥರಿಗೆ ಮೊದಲಿನಂತೆ ದಾಖಲೆ ಪತ್ರಗಳನ್ನು ಒದಗಿಸಬೇಕು. ವಂಚಿಸಿದ ವ್ಯಕ್ತಿ ಭೀಮಣ್ಣ ಕೋಟಾರಗಸ್ತಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
‘ಅಸ್ಕಿ ಗ್ರಾಮದಲ್ಲಿ ಹೆಚ್ಚಿನವರು ಕೂಲಿ ಕಾರ್ಮಿಕರು, ಬಡವರು ಹಾಗೂ ಒಕ್ಕಲಿಗರು; ಹೆಚ್ಚಿನ ಸಂಖ್ಯೆಯಲ್ಲಿ ಅವಿದ್ಯಾವಂತರಿದ್ದಾರೆ. ಇದನ್ನು ತನ್ನ ಲಾಭಕ್ಕೆ ಬಳಸಿಕೊಂಡ ಸಿಂದಗಿ ತಾಲ್ಲೂಕಿನ ಬೋರಗಿ ಗ್ರಾಮದ ಭೀಮಣ್ಣ ಕೋಟಾರಗಸ್ತಿ, 2017-18ರಲ್ಲಿ ಗ್ರಾಮಕ್ಕೆ ಬಂದು ಜನರಿಗೆ ಮನೆ ಕೊಡಿಸುವುದಾಗಿ ನಂಬಿಸಿ ಅವರಿಂದ ದಾಖಲೆಗಳನ್ನು ಪಡೆದು, ಮೋಸದಿಂದ ಅವರ ಹೆಬ್ಬೆಟ್ಟಿನ ಗುರುತು ಪಡೆದುಕೊಂಡಿದ್ದಾರೆ. ಪ್ರತಿ ವ್ಯಕ್ತಿಯಿಂದ ₹30ಸಾವಿರದಿಂದ ₹50 ಸಾವಿರದ ವರೆಗೆ ಹಣ ಪಡೆದು ವಂಚಿಸಿದ್ದಾರೆ. ಈವರೆಗೂ ಮನೆಗಳನ್ನು ಕೊಡಿಸಿಲ್ಲ. ಅಂದಾಜು, 100 ಜನರು ಈ ಬಲೆಗೆ ಸಿಲುಕಿದ್ದಾರೆ’ ಎಂದರು ಆರೋಪಿಸಿದ್ದಾರೆ.
‘ದಾಖಲೆಗಳಲ್ಲಿ ಹೆಸರು ತಿದ್ದುಪಡಿ ಆಗಿರುವುದರಿಂದ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯಲೂ ಗ್ರಾಮಸ್ಥರಿಗೆ ಸಾಧ್ಯವಾಗುತ್ತಿಲ್ಲ. ಈ ಹಿಂದಿನ ತಹಶೀಲ್ದಾರ್ ಅವರು ಆರೋಪದ ಕುರಿತು ಸ್ಪಂದಿಸಿಲ್ಲ. ಜನರಿಗೆ ನ್ಯಾಯ ಒದಗಿಸಬೇಕು’ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕರವೇ ಜಿಲ್ಲಾ ಉಪಾಧ್ಯಕ್ಷ ಜೈ ಭೀಮ ಮುತ್ತಗಿ, ವಿದ್ಯಾರ್ಥಿ ಮುಖಂಡ ಹರ್ಷವರ್ಧನ ಪೂಜಾರಿ, ಅನಿಲ್ ಗೊಟಖಂಡಕಿ, ಈರಣ್ಣ ಕೂಚಬಾಳ, ದೇವಪ್ಪ ಪೂಜಾರಿ ಹಾಗೂ ಮೋಸಕ್ಕೆ ಒಳಗಾದ ಮಹಿಳೆಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.