ADVERTISEMENT

ತೊರವಿ ಅಸ್ಪೃಶ್ಯತೆ ಮುಕ್ತ ಗ್ರಾಮ

ಮಹಾತ್ಮ ಗಾಂಧೀಜಿ ಭೇಟಿಯ ಫಲ; ಡಿಸಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 13:54 IST
Last Updated 3 ಅಕ್ಟೋಬರ್ 2019, 13:54 IST
ವಿಜಯಪುರ ತಾಲ್ಲೂಕು ತೊರವಿ ಗ್ರಾಮದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್‌ ಶಾಸ್ತ್ರಿ ಜಯಂತಿ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಅಸ್ಪೃಶ್ಯತೆ ನಿರ್ಮೂಲನೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಉದ್ಘಾಟಿಸಿದರು
ವಿಜಯಪುರ ತಾಲ್ಲೂಕು ತೊರವಿ ಗ್ರಾಮದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್‌ ಶಾಸ್ತ್ರಿ ಜಯಂತಿ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಅಸ್ಪೃಶ್ಯತೆ ನಿರ್ಮೂಲನೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಉದ್ಘಾಟಿಸಿದರು   

ವಿಜಯಪುರ: ‘ಮಹಾತ್ಮ ಗಾಂಧೀಜಿ ಭೇಟಿಯ ಫಲವಾಗಿ ತೊರವಿ ಗ್ರಾಮವು ಅಸ್ಪೃಶ್ಯತೆ ಪದ್ಧತಿಯಿಂದ ಮುಕ್ತವಾಗಿದೆ’ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು.

ತೊರವಿ ಗ್ರಾಮದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಅಸ್ಪೃಶ್ಯತೆ ನಿರ್ಮೂಲನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗಾಂಧಿ ಈ ಗ್ರಾಮಕ್ಕೆ ಭೇಟಿ ನೀಡಿದ್ದು, ಈ ಗ್ರಾಮಸ್ಥರೆಲ್ಲರಿಗೂ ಸಂತಸದ ಸಂಗತಿ. ಈ ಗ್ರಾಮಕ್ಕೆ ಲಕ್ಷ್ಮೀನರಸಿಂಹ ದೇವಿ ಕೃಪೆ ಇರುವ ಹಿನ್ನೆಲೆಯಲ್ಲಿ ಜಾಗೃತವಾದ ಸ್ಥಳ ಕೂಡ ಆಗಿದೆ. ಗಾಂಧೀಜಿ ಈ ಗ್ರಾಮಕ್ಕೆ ಭೇಟಿ ನೀಡಿ, ಅಸ್ಪೃಶ್ಯತೆ ನಿರ್ಮೂಲನೆ ಮಾಡಿದ್ದರಿಂದ ಈ ಗ್ರಾಮ ಪುಣ್ಯವಂತ ಗ್ರಾಮವಾಗಿದೆ’ ಎಂದು ಹೇಳಿದರು.

ADVERTISEMENT

‘ಈ ಗ್ರಾಮ ಸ್ವಚ್ಛತೆಗೆ ಕೈ ಜೋಡಿಸಿದೆ. ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿಗಳು, ಜನಪ್ರತಿನಿಧಿಗಳು, ಗ್ರಾಮದ ಮುಖಂಡರು, ಗ್ರಾಮಸ್ಥರು ಇದಕ್ಕಾಗಿ ಶ್ರಮಿಸಿರುವುದಕ್ಕೆ ಹಾಗೂ ಸಹಕಾರ ನೀಡಿದ್ದಾರೆ’ ಎಂದು ಸಂತಸ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ ಕಿಶೋರ ಸುರಳಕರ ಮಾತನಾಡಿ, ‘ಗಾಂಧೀಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರು, ಅಸ್ಪೃಶ್ಯತೆ ನಿವಾರಣೆಗೆ ಶ್ರಮಿಸಿದ್ದರು. ಅಂತಹ ಮಹಾನ್ ನಾಯಕರ ಆದರ್ಶಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

ಆಕಾಶವಾಣಿ ವರದಿಗಾರ ನೀಲೇಶ ಬೇನಾಳ ಮಾತನಾಡಿ, ‘ಗಾಂಧಿ ಅವರು 1934ರ ಮೇ 8 ರಂದು (85 ವರ್ಷಗಳ ಹಿಂದೆ) ಈ ಗ್ರಾಮಕ್ಕೆ ಭೇಟಿ ನೀಡಿದ್ದರು. ಜಿಲ್ಲೆಗೆ 4 ಬಾರಿ ಭೇಟಿ ನೀಡಿದ್ದ ಮಹಾತ್ಮ ಗಾಂಧೀಜಿ 11 ಬಾರಿ ಅಸ್ಪೃಶ್ಯತೆ ನಿವಾರಣೆ ಯಾತ್ರೆಯನ್ನು ಕೈಗೊಂಡಿದ್ದರು’ ಎಂದು ತಿಳಿಸಿದರು.

ಮುಖಂಡ ಅಡಿವೆಪ್ಪ ಸಾಲಗಲ ಮಾತನಾಡಿದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ, ತೊರವಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅನಿಲ ಜಗತಾಪ, ಉಪಾಧ್ಯಕ್ಷೆ ಪಾರ್ವತಿ ಬಬಲಾದಿ, ಬೌದ್ಧ ಉಪಾಸಕ ನಾಗರಾಜ ಲಂಬು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಸುಲೇಮಾನ ನದಾಫ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ರಾಠೋಡ, ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.