ಆಲಮಟ್ಟಿ: ಕೃಷ್ಣಾ ನದಿಯ ಸಂರಕ್ಷಣೆಗಾಗಿ ಸಮುದಾಯದ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಕೂಡಲಸಂಗಮದಿಂದ ಕೃಷ್ಣೆಯ ಉಗಮ ಸ್ಥಾನವಾದ ಮಹಾರಾಷ್ಟ್ರದ ಮಹಾಬಲೇಶ್ವರದ ವರೆಗೆ ‘ಜನ್-ಜಲ್-ಜೋಡೋ’ ಜಾಗೃತಿ ಜಾಥಾಕ್ಕೆ ‘ಕೃಷ್ಣಾ ಕುಟುಂಬ’ ಸಿದ್ಧಗೊಂಡಿದೆ.
ಮೇ 12ರಂದು ಕೂಡಲಸಂಗಮದಿಂದ ಆರಂಭವಾಗುವ ಯಾತ್ರೆಯು ಆಲಮಟ್ಟಿ, ವಿಜಯಪುರ, ಬಬಲೇಶ್ವರ, ಚಿಕ್ಕಪಡಸಲಗಿ, ಜಮಖಂಡಿ, ಹಿಪ್ಪರಗಿ ತಲುಪಲಿದೆ. ಮೇ 13ರಂದು ಅಥಣಿ, ಮಹಾರಾಷ್ಟ್ರದ ಸಾಂಗಲಿ, ಕರಾಡ, ಸಾತಾರ, ಮೇ 14ರಂದು ವಾಯಿ ಸೇರಿ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ರಾತ್ರಿ ಮಹಾಬಲೇಶ್ವರಕ್ಕೆ ತಲುಪಲಿದೆ.
ಮೇ 15ರಂದು ವಿವಿಧ ರಾಜ್ಯಗಳಲ್ಲಿ ಹರಡಿರುವ ‘ಕೃಷ್ಣಾ ಕುಟುಂಬ’ದ ಸದಸ್ಯರು, ಸಮುದಾಯದವರು ಮಹಾಬಲೇಶ್ವರದಲ್ಲಿ ಸೇರಲಿದ್ದು, ಸಮಾವೇಶ ಆಯೋಜಿಸಲಾಗಿದೆ.
ನೀರಾವರಿ ತಜ್ಞ ರಾಜೇಂದ್ರ ಸಿಂಗ್, ಕೃಷ್ಣಾ ನದಿ ಬಗ್ಗೆ ಹೆಚ್ಚು ಕಾರ್ಯನಿರ್ವಹಿಸಿರುವ ತೆಲಂಗಾಣದ ಪ್ರಕಾಶರಾವ್, ಆಂಧ್ರದ ಬಿ. ಸತ್ಯನಾರಾಯಣ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ನಾಲ್ಕು ದಿನಗಳ ಯಾತ್ರೆಯಲ್ಲಿ ಹಲವೆಡೆ ಜಾಗೃತಿ ಸಮಾವೇಶಗಳು ನಡೆಯಲಿವೆ.
‘ಕೃಷ್ಣಾ ನದಿಯು ತನ್ನ ಉಗಮ ಸ್ಥಾನ ಮಹಾಬಲೇಶ್ವರದಿಂದ ಸಮುದ್ರಕ್ಕೆ ಸೇರುವ ಆಂಧ್ರಪ್ರದೇಶದ ಹಂಸಲಾದೇವಿ ವರೆಗೆ ಸುಮಾರು 3,400 ಕಿ.ಮೀ. ಹರಿಯುವ, ದಕ್ಷಿಣ ಭಾರತದ ಅತಿ ಉದ್ದದ ನದಿಯ ಸಂರಕ್ಷಣೆಗಾಗಿ ವಿವಿಧ ಯೋಜನೆಗಳನ್ನಿಟ್ಟುಕೊಂಡು, ನದಿ ಹರಿಯುವ ನಾಲ್ಕು ರಾಜ್ಯಗಳಲ್ಲಿನ (ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ) ಜಲ ಸೇವಕರ ಯಾತ್ರೆ ಇದಾಗಿದೆ’ ಎಂದು ಧಾರವಾಡದ ವಾಲ್ಮಿಯ ಮಾಜಿ ನಿರ್ದೇಶಕ ರಾಜೇಂದ್ರ ಪೋದ್ದಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಉಗಮ ಸ್ಥಾನ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹೆಚ್ಚಿದ ಅರಣ್ಯ ನಾಶ, ನದಿ ಹಾಗೂ ಉಪನದಿ ತೀರಗಳ ಒತ್ತುವರಿ, ನದಿಗಳಲ್ಲಿ ಮರಳು ಅಕ್ರಮ ಸಾಗಾಟ, ವ್ಯಾಪಕ ಗಣಿಗಾರಿಕೆ ಹಾಗೂ ಅವೈಜ್ಞಾನಿಕವಾಗಿ ನದಿಯಲ್ಲಿ ರಚಿತಗೊಳ್ಳುತ್ತಿರುವ ಸೇತುವೆಗಳು, ಚಿಕ್ಕ ಚಿಕ್ಕ ಬ್ಯಾರೇಜ್‌ಗಳಿಂದ ನದಿಯ ಆಳ ಕಡಿಮೆಯಾಗಿದ್ದು, ಹೂಳಿನ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದೆ. ನದಿ ತೀರದಲ್ಲಿ ಹೆಚ್ಚುತ್ತಿರುವ ಸಕ್ಕರೆ, ಕಾಗದ, ಗೊಬ್ಬರ ಮೊದಲಾದ ಕಾರ್ಖಾನೆಗಳಿಂದ ಹೊರಬರುವ ರಾಸಾಯನಿಕ ಪದಾರ್ಥಗಳು ಹಾಗೂ ಪ್ಲಾಸ್ಟಿಕ್‌ಗಳ ವ್ಯಾಪಕ ಬಳಕೆ, ಪೂಜೆ, ನಂಬಿಕೆಗಳ ಹೆಸರಲ್ಲಿ ನದಿ ತೀರ ಹೆಚ್ಚು ಕಲ್ಮಶಗೊಳ್ಳುತ್ತಿವೆ’ ಎಂದು ಪೋದ್ದಾರ್ ಮಾಹಿತಿ ನೀಡಿದರು.
ಕೃಷ್ಣಾ ನದಿ ಹಾಗೂ ಅವುಗಳ ಉಪನದಿಗಳ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ ನದಿ ಉಳಿವಿಗಾಗಿ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ಜಾಗೃತಿ ಮೂಡಿಸುವ ಜಾಥಾ ಇದಾಗಿದೆ.–ರಾಜೇಂದ್ರ ಪೊದ್ದಾರ್, ಮಾಜಿ ನಿರ್ದೇಶಕ ವಾಲ್ಮಿ ಧಾರವಾಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.