ಸಿಂದಗಿ: ಸಮಾಜಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹಾದೇವಪ್ಪನವರ 72ನೆಯ ಜನ್ಮದಿನವನ್ನು ಸಿಂದಗಿಯಲ್ಲಿ ತೊಟ್ಟಿಲುಗಳನ್ನು ವಿತರಣೆ ಮಾಡುವ ಮೂಲಕ ವಿಶೇಷವಾಗಿ ಭಾನುವಾರ ಆಚರಿಸಲಾಯಿತು.
ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಅಭಿಮಾನಿ ಬಳಗದಿಂದ ಕಾರ್ಯಕ್ರಮ ನಡೆಯಿತು.
ಹೆರಿಗೆಯಾದ 10 ಬಾಣಂತಿಯರಿಗೆ ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ ಸಮ್ಮುಖದಲ್ಲಿ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಅವರು ತೊಟ್ಟಿಲುಗಳ ಜೊತೆಗೆ ಪೌಷ್ಟಿಕ ಆಹಾರದ ಕಿಟ್‌ಗಳನ್ನು ವಿತರಿಸಿದರು.
ರಾಜಶೇಖರ ಕೂಚಬಾಳ ಮಾತನಾಡಿ, ಸರ್ಕಾರಿ ಆಸ್ಪತ್ರೆಯ ಹೆರಿಗೆ ವಾರ್ಡ್‌ನಲ್ಲಿ ಬಾಣಂತಿಯರಿಗೆ ಮಲಗುವಷ್ಟು ಸಣ್ಣ ಸಿಂಗಲ್ ಬೆಡ್‌ಗಳಿವೆ. ಹೀಗಾಗಿ ಅದೇ ಬೆಡ್‌ನಲ್ಲಿ ತಾಯಿ-ಮಗು ಇಬ್ಬರೂ ಮಲಗಬೇಕಾದ ಅನಿವಾರ್ಯತೆ ಇತ್ತು. ತೊಟ್ಟಿಲದ ಅಗತ್ಯತೆ ಕಂಡು ತೊಟ್ಟಿಲುಗಳನ್ನು ನೀಡಲಾಗಿದೆ. ತಾಯಿ ಆರಾಮಾಗಿ ಮಗುವಿಗೆ ಹಾಲುಣಿಸಿ ತೊಟ್ಟಿಲು ತೂಗುತ್ತ ಮಲಗಿಸಿ ತಾವೂ ಮಲಗಬಹುದು ಎಂದು ತಿಳಿಸಿದರು.
ಈಗ 10 ತೊಟ್ಟಿಲುಗಳನ್ನು ನೀಡಲಾಗಿದೆ. ಮುಂಬರುವ ಪ್ರತಿ ವಾರ ನಡೆಯುವ ಆಪರೇಷನ್ ಕ್ಯಾಂಪ್‌ನಲ್ಲಿ 10 ತೊಟ್ಟಿಗಳಂತೆ ಒಟ್ಟು 72 ತೊಟ್ಟಿಲುಗಳನ್ನು ನೀಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ದಲಿತ ಸಂಘಟನೆಗಳ ಪ್ರಮುಖರಾದ ಚಂದ್ರಕಾಂತ ಸಿಂಗೆ, ಶ್ರೀಕಾಂತ ಸೋಮಜಾಳ, ಸದಾಶಿವ ಕೋರಳ್ಳಿ, ಶ್ರೀನಿವಾಸ ಓಲೇಕಾರ, ಶರಣು ಸಿಂಧೆ, ರಮೇಶ ನಡುವಿನಕೇರಿ, ಲಕ್ಕಪ್ಪ ಬಡಿಗೇರ, ಪರುಶರಾಮ ಕೂಚಬಾಳ, ಸಂತೋಷ ಭಜಂತ್ರಿ, ಬಾಲಕೃಷ್ಣ ಚಲವಾದಿ ಹಾಗೂ ಗೊಲ್ಲಾಪ್ಪಗೌಡ ಪಾಟೀಲ ಮಾಗಣಗೇರಿ, ಮಹಮ್ಮದ ಪಟೇಲ್ ಬಿರಾದಾರ ಹಾಗೂ ಸಚಿವ ಮಹಾದೇವಪ್ಪ ಅಭಿಮಾನಿಗಳ ಬಳಗ ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.