ತಾಳಿಕೋಟೆ: ಪಟ್ಟಣದಲ್ಲಿ ಹರಿಯುವ ಜಾನಕಿ ಹಳ್ಳವನ್ನು ಒತ್ತುವರಿ ಮಾಡಿಕೊಂಡು ನ್ಯಾಯಾಲಯದ ತಡೆಯಾಜ್ಞೆಯನ್ನೂ ಮೀರಿ 24 ನಿವೇಶನಗಳನ್ನು ನಿರ್ಮಿಸಲು ಹೊರಟಿದ್ದು ಇದಕ್ಕೆ ತಡೆ ನೀಡಿ ಇದರ ಸಮಗ್ರ ತನಿಖೆ ನಡೆಸಿ, ತಪ್ಪು ದಾಖಲೆಗಳನ್ನು ಸೃಷ್ಟಿಸಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಜಾನಕಿ ಹಳ್ಳವನ್ನು ಉಳಿಸಿ ಕೊಡಬೇಕು ಎಂದು ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಸಿರಸಕುಮಾರ ಹಜೇರಿ ಹಾಗೂ ಪುರಸಭೆ ಸದಸ್ಯ ಮಲ್ಲಿಕಾರ್ಜುನ್ ಪಟ್ಟಣಶೆಟ್ಟಿ ಅವರು ಜಿಲ್ಲಾಧಿಕಾರಿ ಡಾ.ಆನಂದ ಕೆ. ಇವರಿಗೆ ಮನವಿ ಮಾಡಿದರು.
ಪಟ್ಟಣಕ್ಕೆ ಬುಧವಾರ ಆಗಮಿಸಿದ್ದ ವಿಜಯಪುರ ನೂತನ ಜಿಲ್ಲಾಧಿಕಾರಿ ಡಾ. ಆನಂದ್ ಕೆ. ಅವರನ್ನು ಭೇಟಿ ಮಾಡಿ, ಮನವಿ ಮಾಡಿದರು.
ತಾಳಿಕೋಟೆ ಪಟ್ಟಣದ ಕ್ಷೇತ್ರ 2-28 ಎ.ಗು. ಜಮೀನಿನ ಮಧ್ಯದಲ್ಲಿ ಹರಿಯುತ್ತಿರುವ ಸರ್ಕಾರಿ ಜಾನಕಿ ಹಳ್ಳವನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ. ಮುದ್ದೇಬಿಹಾಳ ಸಿವಿಲ್ ನ್ಯಾಯಾಲಯದಲ್ಲಿ ತಡೆ ಆಜ್ಞೆ ಮೀರಿ ಜಮೀನಿನ ಮೂಲ ಮಾಲೀಕರಿಂದ 2021-22 ರಲ್ಲಿ ಮೂರು ಜನರಿಗೆ ಮುದ್ದೇಬಿಹಾಳ ಉಪನೋಂದಣಾಧಿಕಾರಿ ಅವರು ಕೇವಲ ₹3 ಸಾವಿರ ಮುದ್ರಾಂಕ ಶುಲ್ಕ ತುಂಬಿ 21 ವಾಟ್ನಿಪತ್ರ ಕಾನೂನು ಬಾಹಿರವಾಗಿ ಮಾಡಿಕೊಟ್ಟು ಮುದ್ರಾಂಕದಿಂದ ಸರ್ಕಾರಕ್ಕೆ ಬರಬಹುದಾಗಿದ್ದ ಲಕ್ಷಾಂತರ ರೂಪಾಯಿ ತೆರಿಗೆ ಹಣ ನಷ್ಟ ಮಾಡಿದ್ದಾರೆ.
ವ್ಯವಸಾಯಿತ ಜಮೀನನ್ನು ಸುಳ್ಳು ಮಾಹಿತಿ ಕೊಟ್ಟು ವಾಣಿಜ್ಯ ಉದ್ದೇಶಕ್ಕಾಗಿ ಭೂ ಪರಿವರ್ತನಾ ಆದೇಶವನ್ನು ಪಡೆದುಕೊಂಡಿದ್ದಾರೆ. ಜಾನಕಿ ಹಳ್ಳದ ನೈಸರ್ಗಿಕ ಮಾರ್ಗ ಬದಲಿಸಿ ಹರಿವಿನ ವಿಸ್ತಿರ್ಣ ಕಿರಿದುಗೊಳಿಸಿರುವುದರಿಂದ ಈಚೆಗೆ ಮಳೆ ಬಂದಾಗ ಹಳ್ಳದ ನೀರು ಸರ್ಕಾರಿ ಮಕ್ಕಳ ಹಾಸ್ಟೆಲು, ಮನೆ ಕಟ್ಟಡಗಳಿಗೆ ಹಾಗೂ ಖಾಲಿ ನಿವೇಶನಗಳಿಗೆ ನೀರು ನುಗ್ಗಿ ಜಲಾವೃತವಾಗಿತ್ತು ಎಂದು ಆರೋಪಿಸಿದರು.
ಆದ್ದರಿಂದ ಜಿಲ್ಲಾಧಿಕಾರಿಗಳು ಮತ್ತೊಮ್ಮೆ ಖುದ್ದಾಗಿ ತಾಳಿಕೋಟೆಗೆ ಬಂದು ಸರ್ಕಾರಿ ಜಾನಕಿ ಹಳ್ಳದ ನಕ್ಷೆ ಮತ್ತು ಹೊಲದ ಮೂಲ ಪಿ.ಟಿ.ಶೀಟು ಹಾಗೂ ವಾಣಿಜ್ಯ ನಿವೇಶನದ ಪಿ. ಟಿ. ಶೀಟು ಪರಿಶೀಲನೆ ಮಾಡಿ ಸರ್ಕಾರಿ ಹಳ್ಳವನ್ನು ಉಳಿಸಬೇಕು ಎಂದು ಮನವಿ ಮಾಡಿದರು.
ದೂರುದಾರರ ಮವಿ ಆಲಿಸಿ ಎಲ್ಲ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿ ಅವರು ಸ್ಥಳದಲ್ಲಿಯೇ ಇದ್ದ ತಹಶೀಲ್ದಾರ್ ಹಾಗೂ ಮುಖ್ಯಾಧಿಕಾರಿ ಅವರಿಗೆ ಸಮಗ್ರ ವರದಿ ಕೊಡಲು ಸೂಚಿಸಿದರು.
ಪುರಸಭೆ ಸದಸ್ಯ ನಿಂಗಣ್ಣ ಕುಂಟೋಜಿ, ಗೋಪಾಲ ಇಲಕಲ್ಲ, ಅಂಬೇಡ್ಕರ್ ಸೇನೆ ಅಧ್ಯಕ್ಷ ಗೋಪಾಲ ಕಟ್ಟಿಮನಿ, ಆಸಿಫ್ ಕೆಂಭಾವಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.