ADVERTISEMENT

‘ಪಿಯು; ಪೂರಕ ಪರೀಕ್ಷೆಫಲಿತಾಂಶದ ಬಳಿಕ ಪ್ರವೇಶ’

ಸುಭಾಸ ಎಸ್.ಮಂಗಳೂರ
Published 22 ಜೂನ್ 2019, 19:30 IST
Last Updated 22 ಜೂನ್ 2019, 19:30 IST
ಪ್ರೊ.ಎಸ್.ಎಸ್.ರಾಜಮಾನ್ಯ
ಪ್ರೊ.ಎಸ್.ಎಸ್.ರಾಜಮಾನ್ಯ   

ವಿಜಯಪುರ: ದ್ವಿತೀಯ ಪಿಯು ಪೂರಕ ಪರೀಕ್ಷೆಗಳು ಈಚೆಗಷ್ಟೇ ಮುಕ್ತಾಯವಾಗಿವೆ. ಕೆಲ ದಿನಗಳಲ್ಲಿ ಫಲಿತಾಂಶವೂ ಪ್ರಕಟವಾಗಲಿದೆ. ಪ್ರಥಮ ಪದವಿಗೆ ಪ್ರವೇಶ ಪಡೆಯುವುದು ಹೇಗೆ?, ಪ್ರವೇಶಕ್ಕೆ ಕೊನೆಯ ದಿನಾಂಕ ಯಾವುದು? ಎಂಬ ವಿದ್ಯಾರ್ಥಿಗಳ ಸಂದೇಹಗಳಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ (ನೋಡಲ್ ಕಾಲೇಜು) ಪ್ರಾಂಶುಪಾಲ ಪ್ರೊ.ಎಸ್.ಎಸ್.ರಾಜಮಾನ್ಯ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

*ಪೂರಕ ಪರೀಕ್ಷೆ ಫಲಿತಾಂಶ ಯಾವಾಗ ಬರುತ್ತದೆ?
ಪರೀಕ್ಷೆಗಳು ಈಚೆಗಷ್ಟೇ ಮುಗಿದಿದ್ದು, ಕೆಲ ದಿನಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಫಲಿತಾಂಶದ ನಂತರ ಪ್ರವೇಶ ಶುಲ್ಕ, ಪ್ರವೇಶಕ್ಕೆ ಕೊನೆಯ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ. ಪರೀಕ್ಷೆಗೆ ಹಾಜರಾಗಿರುವ ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ. ಪ್ರವೇಶಕ್ಕೆ ಅವರಿಗೆ ಅವಕಾಶ ನೀಡಲಾಗುತ್ತದೆ.

*ಜಿಲ್ಲೆಯಲ್ಲಿ ಎಷ್ಟು ಕಾಲೇಜುಗಳಿವೆ?
ವಿಜಯಪುರದಲ್ಲಿ ಪುರುಷ ಹಾಗೂ ಮಹಿಳೆಯರ ಕಾಲೇಜು, ಮಮದಾಪುರ, ಝಳಕಿ, ಇಂಡಿ, ಸಿಂದಗಿ, ದೇವರಹಿಪ್ಪರಗಿ, ಮುದ್ದೇಬಿಹಾಳ, ಬಸವನಬಾಗೇವಾಡಿ ಹಾಗೂ ಗೊಳಸಂಗಿ ಸೇರಿ 10 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ. ವಿಜಯಪುರದ ಮಹಿಳಾ ಕಾಲೇಜು ಮತ್ತು ಮುದ್ದೇಬಿಹಾಳ ಕಾಲೇಜಿನಲ್ಲಿ ಬಿ.ಎ, ಬಿ.ಕಾಂ ಜತೆಗೆ ಬಿ.ಎಸ್ಸಿ ವಿಭಾಗವೂ ಇದೆ. ಇನ್ನುಳಿದ ಕಾಲೇಜುಗಳಲ್ಲಿ ಬಿ.ಎ, ಬಿ.ಕಾಂ ವಿಭಾಗಗಳು ಇವೆ. ಅನುದಾನಿತ ಹಾಗೂ ಅನುದಾನರಹಿತ ಕಾಲೇಜುಗಳು ಸಾಕಷ್ಟು ಸಂಖ್ಯೆಯಲ್ಲಿ ಇವೆ.

ADVERTISEMENT

*ಪ್ರವೇಶ ಪಡೆಯಲು ಏನು ಮಾಡಬೇಕು?
ಶುಲ್ಕ ಪಾವತಿಸಿದ ರಸೀದಿ, ದ್ವಿತೀಯ ಪಿಯು ಮೂಲ ಅಂಕಪಟ್ಟಿ, ವರ್ಗಾವಣೆ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರದ ಜೆರಾಕ್ಸ್ ಪ್ರತಿ, ಮೂರು ಭಾವಚಿತ್ರ, ಸ್ವವಿಳಾವಿರುವ ಎರಡು ಪೋಸ್ಟ್ ಕಾರ್ಡ್‌ಗಳನ್ನು ಸಲ್ಲಿಸಿ, ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಪ್ರವೇಶ ಪಡೆಯಬಹುದು.

* ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯಾವ ಕೋರ್ಸ್‌ಗಳು ಲಭ್ಯ ಇವೆ?
ವಿಜಯಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ, ಬಿ.ಕಾಂ, ಬಿಬಿಎ, ಎಂ.ಕಾಂ ಮತ್ತು ಎಂ.ಎ (ರಾಜ್ಯಶಾಸ್ತ್ರ) ವಿಭಾಗಗಳಿವೆ. ಸದ್ಯ 2 ಸಾವಿರ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, 34 ಕಾಯಂ ಹಾಗೂ 72 ಅತಿಥಿ ಉಪನ್ಯಾಸಕರು ಸೇರಿ 108 ಬೋಧಕ ಸಿಬ್ಬಂದಿ ಇದ್ದಾರೆ. ಸರ್ಕಾರಿ ಕಾಲೇಜುಗಳು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಲಗ್ನತೆ ಹೊಂದಿವೆ.

*ಯಾವ ವಿಷಯಗಳಲ್ಲಿ ಅಧ್ಯಯನ ಮಾಡಬಹುದು?
ಇಂಗ್ಲಿಷ್ (ಕಡ್ಡಾಯ), ಕನ್ನಡ, ಹಿಂದಿ ಮತ್ತು ಉರ್ದು (ಇವುಗಳಲ್ಲಿ ಯಾವುದಾದರೂ ಒಂದು) ಭಾಷೆ ಕಡ್ಡಾಯವಾಗಿದೆ. ವಿಜ್ಞಾನ ವಿಭಾಗದಲ್ಲಿ ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತ, ಗಣಕವಿಜ್ಞಾನ, ಸಸ್ಯವಿಜ್ಞಾನ ಹಾಗೂ ಪ್ರಾಣಿವಿಜ್ಞಾನದ ಜತೆಗೆ ಭಾರತದ ಸಂವಿಧಾನ, ಮಾನವ ಹಕ್ಕುಗಳು ಪರಿಸರ ಅಧ್ಯಯನ, ವ್ಯಕ್ತಿತ್ವ ವಿಕಸನ ಹಾಗೂ ಸಂವಹನ ಕೌಶಲಗೂ ಕಡ್ಡಾಯವಾಗಿವೆ.

*ಸರ್ಕಾರಿ ಕಾಲೇಜುಗಳಲ್ಲಿ ಯಾವೆಲ್ಲ ಸೌಕರ್ಯಗಳು ಇವೆ?
ಗ್ರಂಥಾಲಯ, ಪ್ರಯೋಗಾಲಯ, ಕಂಪ್ಯೂಟರ್ ಪ್ರಯೋಗಾಲಯ, ಕ್ರೀಡಾ ಸೌಲಭ್ಯ, ರಾಷ್ಟ್ರೀಯ ಸೇವಾ ಯೋಜನೆ ಘಟಕ, ಸ್ಕೌಟ್ಸ್ ಮತ್ತು ಗೈಡ್ಸ್‌, ಪಠ್ಯಪೂರಕ ಚಟುವಟಿಕೆಗಳು, ಉದ್ಯೋಗ ಮಾರ್ಗದರ್ಶನ, ವೈದ್ಯಕೀಯ ಸೌಕರ್ಯಗಳು ಲಭ್ಯ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.