ದೇವರಹಿಪ್ಪರಗಿ: ತಾಲ್ಲೂಕಿನ ಮುಳಸಾವಳಗಿ, ಕೊಂಡಗೂಳಿ, ಕೋರವಾರ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ರಿಷಿ ಆನಂದ ಭೇಟಿ ನೀಡಿ ಜೆಜೆಎಮ್ ಹಾಗೂ ಅಂಗನವಾಡಿಗಳನ್ನು ಪರಿಶೀಲಿಸಿದರು.
ತಾಲ್ಲೂಕಿನ ಮುಳಸಾವಳಗಿ ಪಂಚಾಯಿತಿ ವ್ಯಾಪ್ತಿಯ ಪಡಗಾನೂರ ಗ್ರಾಮಕ್ಕೆ ಬುಧವಾರ ಭೇಟಿ ನೀಡಿದ ಸಿಇಒ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಮನೆಮನೆಗೂ ನೀರಿನ ಸಂಪರ್ಕ ಸಮರ್ಪಕವಾಗಿ ಅನುಷ್ಠಾನಗೊಳಿಸಿದ ಕುರಿತು ಪರಿಶೀಲನೆ ಕೈಗೊಂಡು ಜೆಜೆಎಂ ನಳ ಸಂಪರ್ಕಕ್ಕೆ ಮೋಟರ್ ಅಳವಡಿಕೆ ಮಾಡದಂತೆ ಸೂಚಿಸಿದರು.
ಪ್ರತಿಮನೆಗೂ ಶುದ್ಧ ಹಾಗೂ ಕುಡಿಯಲು ಯೋಗ್ಯವಾದ ನೀರನ್ನು ಒದಗಿಸಬೇಕು. ಗ್ರಾಮಸ್ಥರಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಎಇಇ ಅವರಿಗೆ ಸೂಚಿಸಿದರು.
ನಂತರ ಅಂಗನವಾಡಿ ಕೇಂದ್ರದ ಬಗ್ಗೆ ಗ್ರಾಮಸ್ಥರಿಗೆ ತಿಳಿ ಹೇಳಿ ಪೌಷ್ಟಿಕ ಆಹಾರ ನೀಡುವಂತೆ ತಿಳಿಸಿದರು.
ನಂತರ ಕೊಂಡಗೂಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಜಲಜೀವನ್ ಮಿಷನ್ ನಳಸಂಪರ್ಕದ ಬಗ್ಗೆ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿದರು. ಒಂದನೇ ವಾರ್ಡನಲ್ಲಿ ಹಲವು ತಿಂಗಳುಗಳು ಕಳೆದರೂ ಸಹ ನೀರಿನ ಸಂಪರ್ಕ ಒದಗಿಸಿಲ್ಲ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರೊಬ್ಬರ ದೂರಿಗೆ ಹತ್ತು ದಿನಗಳ ಒಳಗಾಗಿ ಸಮಸ್ಯೆ ಬಗೆಸರಿಸಲು ತಿಳಿಸಿದರು. ನಂತರ ಹಂಚಲಿ ಗ್ರಾಮಕ್ಕೆ ಭೇಟಿ ನೀಡಿ ಜೆಜೆಎಂ ಪೈಪ್ ಲೈನ್ ಸಂಪರ್ಕದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಕೆಲವೇ ದಿನಗಳಲ್ಲಿ ಪೂರ್ಣಗೊಳಿಸಲು ಸೂಚಿಸಿದರು. ನಂತರ ಕೊರವಾರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಜೆಜೆಎಂ ಕಾರ್ಯದ ಕುರಿತು ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಕೋರವಾರ ಕಾಮಗಾರಿ ಪೂರ್ಣಗೊಂಡಿದ್ದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಚಲುವಯ್ಯ , ಎಡಿ ಶಿವಾನಂದ ಮೂಲಿಮನಿ, ಶಾಖಾಧಿಕಾರಿ ಎಚ್.ಎಮ್. ಸಾರವಾಡ, ತಾಂತ್ರಿಕ ಸಂಯೋಜಕ ಶರಣಗೌಡ ಪಾಟೀಲ, ಐಇಸಿ ಸಂಯೋಜಕ ಸಿದ್ದು ಕಾಂಬಳೆ, ಪಿಡಿಓಗಳಾದ ಕಾಶೀನಾಥ ಕಡಕಭಾವಿ, ಎಲ್.ಟಿ.ಅಂಗಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.