ADVERTISEMENT

ವಿಜಯಪುರಕ್ಕೆ ಜನಾಕ್ರೋಶ ಯಾತ್ರೆ 17ಕ್ಕೆ: ಗುರುಲಿಂಗಪ್ಪ ಅಂಗಡಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2025, 13:50 IST
Last Updated 15 ಏಪ್ರಿಲ್ 2025, 13:50 IST
ವಿಜಯಪುರದಲ್ಲಿ ನಡೆಯುವ ಬಿಜೆಪಿ ಜನಾಕ್ರೋಶ ರ‍್ಯಾಲಿ ಪ್ರಚಾರಕ್ಕೆ ಸಂಸದ ರಮೇಶ ಜಿಗಜಿಣಗಿ ಮಂಗಳವಾರ ಚಾಲನೆ ನೀಡಿದರು
ವಿಜಯಪುರದಲ್ಲಿ ನಡೆಯುವ ಬಿಜೆಪಿ ಜನಾಕ್ರೋಶ ರ‍್ಯಾಲಿ ಪ್ರಚಾರಕ್ಕೆ ಸಂಸದ ರಮೇಶ ಜಿಗಜಿಣಗಿ ಮಂಗಳವಾರ ಚಾಲನೆ ನೀಡಿದರು   

ವಿಜಯಪುರ: ‘ಕಾಂಗ್ರೆಸ್ ಸರ್ಕಾರದ ಎರಡು ವರ್ಷಗಳ ಆಡಳಿತ ವೈಫಲ್ಯ ಖಂಡಿಸಿ, ಬೆಲೆ ಏರಿಕೆ ಮತ್ತು ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಶೇ 4 ಮೀಸಲಾತಿ ನೀಡಿರುವುದನ್ನು ವಿರೋಧಿಸಿ ಏಪ್ರಿಲ್ 17ರಂದು ಮಧ್ಯಾಹ್ನ 4ಕ್ಕೆ ವಿಜಯಪುರದಲ್ಲಿ ಬಿಜೆಪಿಯಿಂದ ಜನ ಆಕ್ರೋಶ ರ‍್ಯಾಲಿ ಆಯೋಜಿಸಲಾಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ತಿಳಿಸಿದರು.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಅಂದು ನಗರದ ಶಿವಾಜಿ ವೃತ್ತದಿಂದ ದರ್ಬಾರ್ ಮೈದಾನದ ವರೆಗೆ ಪಾದಯಾತ್ರೆ ನಡೆಯಲಿದೆ. ಬಳಿಕ ದರ್ಬಾರ್ ಮೈದಾನದಲ್ಲಿ ಸಮಾವೇಶ ನಡೆಯಲಿದೆ. 10 ಸಾವಿರ ಜನ ಪಾಲ್ಗೊಳ್ಳುತ್ತಾರೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ‘ರಾಜ್ಯದಲ್ಲಿ ಇಷ್ಟೊಂದು ಕೆಟ್ಟ ಸರ್ಕಾರವನ್ನೇ ನಾನು ನೋಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೌರವ ಉಳಿಸಿಕೊಳ್ಳಬೇಕು ಎಂದಾದರೆ ಸರ್ಕಾರವನ್ನು ವಿಸರ್ಜನೆ ಮಾಡಬೇಕು’ ಎಂದರು.

ADVERTISEMENT

‘ರಾಜ್ಯ ಕಾಂಗ್ರೆಸ್‌ ಸರ್ಕಾರ ರಾಡಿ ಮುಚ್ಚಿಕೊಳ್ಳಲು ಜಾತಿ ಗಣತಿ ವರದಿ ಜಾರಿಗೆ ಮುಂದಾಗಿದ್ದಾರೆ. ಜಾತಿ ಗಣತಿ ವೈಜ್ಞಾನಿಕವಾಗಿಲ್ಲ, ಮುಖ್ಯಮಂತ್ರಿಯೇ ಹೇಳಿ ಬರಸಿದ್ದಾರೆ’ ಎಂದು ಟೀಕಿಸಿದರು.

‘ಎಸ್.ಟಿ. ಅನುದಾನವನ್ನು ಗ್ಯಾರಂಟಿಗೆ ಬಳಸಿಕೊಳ್ಳುತ್ತಿರುವುದು ಖಂಡನೀಯ. ಮಾನ, ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು’ ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಅರುಣ ಶಹಾಪೂರ, ‘ಎಚ್‌.ಕಾಂತರಾಜು ಆಯೋಗ ಮಾಡಿರುವುದು ಜಾತಿ ಗಣತಿ ಅಲ್ಲ. ಈ ಪದ ಬಳಕೆ ನಿಲ್ಲಿಸಬೇಕು, ಇದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ. ಈ ವರದಿಯು ವೈಜ್ಞಾನಿಕವಾಗಿಲ್ಲ’ ಎಂದು ಟೀಕಿಸಿದರು.

ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಮಾಜಿ ಶಾಸಕ ಸೋಮನಗೌಡ ‍ಪಾಟೀಲ ಸಾಸನೂರು, ಬಿಜೆಪಿ ಮುಖಂಡರಾದ ವಿಜುಗೌಡ ಪಾಟೀಲ, ಸಂಜೀವ ಐಹೊಳೆ, ಚಂದ್ರಶೇಖರ ಕವಟಗಿ, ಕಾಸುಗೌಡ ಬಿರಾದಾರ, ಸುರೇಶ ಬಿರಾದಾರ, ಮಳುಗೌಡ ಪಾಟೀಲ, ಸಾಬು ಮಾಶ್ಯಾಳ, ವೀರಣ್ಣ ರಾವೂರ, ವಿಜಯ ಜೋಶಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.