ADVERTISEMENT

ಸರ್ಕಾರದಲ್ಲಿ ತಾರಕಕ್ಕೇರಿದ ಭ್ರಷ್ಟಾಚಾರ–ಆರೋಪ: JDS ಕಾರ್ಯಕರ್ತರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 14:29 IST
Last Updated 30 ಜೂನ್ 2025, 14:29 IST
ಸಿಂದಗಿ ಪಟ್ಟಣದ ತಾಲ್ಲೂಕು ಪ್ರಜಾಸೌಧ ಎದುರು ಸೋಮವಾರ ಜನತಾದಳ (ಜಾತ್ಯತೀತ) ತಾಲ್ಲೂಕು ಘಟಕದ ನೇತೃತ್ವದಲ್ಲಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ಭ್ರಷ್ಠಾಚಾರ ಆಡಳಿತ ವಿರುದ್ದ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಇಂಡಿ ತಾಲ್ಲೂಕು ಜೆಡಿಎಸ್ ಧುರೀಣ ಬಿ.ಡಿ.ಪಾಟೀಲ ಮಾತನಾಡಿದರು.
ಸಿಂದಗಿ ಪಟ್ಟಣದ ತಾಲ್ಲೂಕು ಪ್ರಜಾಸೌಧ ಎದುರು ಸೋಮವಾರ ಜನತಾದಳ (ಜಾತ್ಯತೀತ) ತಾಲ್ಲೂಕು ಘಟಕದ ನೇತೃತ್ವದಲ್ಲಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ಭ್ರಷ್ಠಾಚಾರ ಆಡಳಿತ ವಿರುದ್ದ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಇಂಡಿ ತಾಲ್ಲೂಕು ಜೆಡಿಎಸ್ ಧುರೀಣ ಬಿ.ಡಿ.ಪಾಟೀಲ ಮಾತನಾಡಿದರು.   

ಸಿಂದಗಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ಸಂಪೂರ್ಣ ವಿಫಲವಾಗಿದೆ. ಭ್ರಷ್ಟಾಚಾರ ತಾರಕಕ್ಕೇರಿದೆ ಎಂದು ಆರೋಪಿಸಿ ಜೆಡಿಎಸ್ ತಾಲ್ಲೂಕು ಘಟಕದದಿಂದ ಸೋಮವಾರ ಪ್ರತಿಭಟನೆ ನಡೆಯಿತು.

ಇಲ್ಲಿಯ ತಾಲ್ಲೂಕು ಪ್ರಜಾಸೌಧದ ಎದುರು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಇಂಡಿ ತಾಲ್ಲೂಕು ಜೆಡಿಎಸ್ ಧುರೀಣ ಬಿ.ಡಿ.ಪಾಟೀಲ ಮಾತನಾಡಿ, ಬಡವರು, ನಿರ್ಗತಿಕರಿಗೆ ಹಂಚಿಕೆಯಾಗಬೇಕಿರುವ ವಸತಿ ಯೋಜನೆಯ ಮನೆಗಳಲ್ಲಿ ಲೂಟಿ ನಡೆಯುತ್ತಿರುವುದು ಸ್ವತ: ಆಡಳಿತಾರೂಢ ಪಕ್ಷದ ಶಾಸಕರುಗಳೇ ಬಯಲಿಗೆ ಎಳೆದಿದ್ದಾರೆ. ವಸತಿ ಹಗರಣದಲ್ಲಿ ಭಾಗಿಯಾಗಿರುವ ವಸತಿ ಸಚಿವ ಜಮೀರ್ ಅಹಮ್ಮದ ಖಾನ್ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿದರು.

ADVERTISEMENT

ಕಳೆದ ಎರಡು ವರ್ಷಗಳಿಂದ ರಾಜ್ಯ ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದೇ ಜನತೆಯನ್ನು ವಂಚಿಸುತ್ತಿದೆ ಎಂದು ಅವರು ಆರೋಪಿಸಿದರು.

ಜೆಡಿಎಸ್ ಸಿಂದಗಿ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎನ್.ಪಾಟೀಲ ಮಾತನಾಡಿ, ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಗರಣಗಳ ಸರಮಾಲೆಯನ್ನೇ ಹಾಕಿಕೊಂಡಿದೆ. ಹಿಂದಿನ ಸಿದ್ಧರಾಮಯ್ಯ ಆಡಳಿತ ಈಗ ಉಳಿದಿಲ್ಲ. ಸಂಪೂರ್ಣ ಹದಗೆಟ್ಟು ಹೋಗಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಜೆಡಿಎಸ್ ರಾಜ್ಯ ಘಟಕದ ಕಾರ್ಯದರ್ಶಿ ಪ್ರಕಾಶ ಹಿರೇಕುರುಬರ ರಾಜ್ಯ ಸರ್ಕಾರ ಇದುವರೆಗೂ ರಾಜ್ಯದ ಜನತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಬಡವರು, ರೈತ ವಿರೋಧಿ ಸರ್ಕಾರವಾಗಿ ಮಾರ್ಪಟ್ಟಿದೆ. ಪರಿಶಿಷ್ಟರಿಗೆ ಮೀಸಲಾಗಿರುವ ಹಣದಲ್ಲಿಯೂ ತಾರತಮ್ಯ ಮಾಡುವ ಮೂಲಕ ಅವರಿಗೆ ಅನ್ಯಾಯ ಮಾಡುತ್ತಿದೆ. ಕೇವಲ ತುಷ್ಟೀಕರಣ ರಾಜಕಾರಣ ಮಾಡುವದರಲ್ಲಿಯೇ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು.

ಜೆಡಿಎಸ್ ತಾಲ್ಲೂಕು ಎಸ್.ಸಿ ಘಟಕದ ಅಧ್ಯಕ್ಷ ಬೀಮೂ ರತ್ನಾಕರ ಮಾತನಾಡಿ, ಹಗರಣಗಳ ಸರಮಾಲೆ ಹಾಕಿಕೊಂಡ ಮುಖ್ಯಮಂತ್ರಿ ಸಿದ್ಧರಾಮಯ್ಯ ನವರಿಗೆ ಆಡಳಿತ ನಡೆಸಲು ಯಾವ ಅರ್ಹತೆ ಇದೆ ಎಂದು ಪ್ರಶ್ನಿಸಿದರು.

ಜೆಡಿಎಸ್ ಮುಖಂಡರಾದ ಮಹಾಂತೇಶ ಪಾರಗೊಂಡ, ಪರುಶರಾಮ ಯಂಕಂಚಿ, ಮಲ್ಲು ಹಡಪದ, ಭಾಷಾಸಾಬ ಯರಗಲ್, ಬಂದೇನವಾಜ ಹತ್ತರಕಿ, ಅಮೀನಸಾಬ ಯರಗಲ್, ಸಾಗರ ರಜಪುತ, ಮುಸ್ತಫಾ ಯಾತನೂರ, ನಿಂಗರಾಜ ಪೂಜಾರಿ, ಶಾಹೀತ ತಾಂಬೋಳಿ, ನರೇಂದ್ರ ಕುಮಸಗಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಪ್ರತಿಭಟನಕಾರರು ತಹಶೀಲ್ದಾರ್‌ ಪ್ರದೀಪಕುಮಾರ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.