ADVERTISEMENT

’ಶೋಷಿತರ ಕಲ್ಯಾಣಕ್ಕಾಗಿ ಶ್ರಮಿಸಿದ ಕಾಕಾ ಕಾರಖಾನೀಸ’

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 15:45 IST
Last Updated 27 ನವೆಂಬರ್ 2022, 15:45 IST
ವಿಜಯಪುರ ನಗರದಲ್ಲಿ ‘ಓದುಗರ ಚಾವಡಿ’ ಹಾಗೂ ಯುವ ಭಾರತ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಕರ್ನಾಟಕ ಪ್ರಾಂತ ಸಹ ಸಂಘಚಾಲಕ ಅರವಿಂದ ದೇಶಪಾಂಡೆ ಉದ್ಘಾಟಿಸಿದರು
ವಿಜಯಪುರ ನಗರದಲ್ಲಿ ‘ಓದುಗರ ಚಾವಡಿ’ ಹಾಗೂ ಯುವ ಭಾರತ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಕರ್ನಾಟಕ ಪ್ರಾಂತ ಸಹ ಸಂಘಚಾಲಕ ಅರವಿಂದ ದೇಶಪಾಂಡೆ ಉದ್ಘಾಟಿಸಿದರು   

ವಿಜಯಪುರ:ಪದ್ಮಶ್ರೀ ಕಾಕಾ ಕಾರಖಾನೀಸ ಮಹಾತ್ಮ ಗಾಂಧಿ ಪ್ರಭಾವಕ್ಕೊಳಗಾಗಿ ಶೋಷಿತರ ಕಲ್ಯಾಣಕ್ಕಾಗಿ ಜ್ಞಾನ ದೀಕ್ಷೆ ನೀಡುವ ಕಾರ್ಯದಲ್ಲಿ ಸಕ್ರೀಯವಾಗಿದ್ದರು ಎಂದುರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಕರ್ನಾಟಕ ಪ್ರಾಂತ ಸಹ ಸಂಘಚಾಲಕ ಅರವಿಂದ ದೇಶಪಾಂಡೆ ಹೇಳಿದರು.

ನಗರದ ಪದ್ಮಶ್ರೀ ಕಾಕಾ ಕಾರಖಾನಿಸ್ ಶಾಲೆ ಸಭಾಂಗಣದಲ್ಲಿ ‘ಓದುಗರ ಚಾವಡಿ’ ಹಾಗೂ ಯುವ ಭಾರತ ಸಮಿತಿ ನೇತೃತ್ವದಲ್ಲಿ ಕೃಷ್ಣ ಕೊಲ್ಹಾರ ಕುಲಕರ್ಣಿ ವಿರಚಿತ 'ಕಾಕಾ ಕಾರಖಾನೀಸ್' ಕೃತಿ ಚಿಂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರುಮಾತನಾಡಿದರು.

ಅಸ್ಪೃಶ್ಯತೆ ನಿವಾರಣೆಯ ಆಶಯವನ್ನು ಆರ್‌ಎಸ್ಎಸ್‌ ಅನುಷ್ಠಾನಗೊಳಿಸಿದ್ದನ್ನು ಸ್ವತಃ ಗಾಂಧೀಜಿಯವರೇ ಮೆಚ್ಚಿಕೊಂಡಿದ್ದರು. ಸಂಘದ ಸಂಸ್ಥಾಪಕರಾದ ಡಾ.ಹೆಡಗೆವಾರ ಅವರನ್ನು ಕರೆದು ಅಸ್ಪೃಶ್ಯತೆ ನಿವಾರಣೆಯ ಹೆಜ್ಜೆಯ ಅನುಷ್ಠಾನದ ಕುರಿತು ಶ್ಲಾಘಿಸಿದರು ಎಂದು ಹೇಳಿದರು.

ADVERTISEMENT

ಸಾನಿಧ್ಯ ವಹಿಸಿದ್ದ ಸರ್ವಜ್ಞ ವಿದ್ಯಾವಿಹಾರ ಪೀಠದ ಕುಲಪತಿ ಪಂ.ಮಧ್ವಾಚಾರ್ಯ ಮೊಕಾಶಿ ಅವರು,
ಪದ್ಮಶ್ರೀ ಕಾಕಾ ಕಾರಖಾನೀಸ್ ಸಂಸ್ಕೃತ ವಿದ್ವಾಂಸರಾಗಿದ್ದರು, ಸಮಾಜ ಸೇವೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿರಿಸಿದ ಅವರು ಒಬ್ಬ ಮಹಾನ್ ಆದರ್ಶ ಪುರುಷ ಎಂದರು.

ಸಂಶೋಧಕ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ಮಾತನಾಡಿ, ಪದ್ಮಶ್ರೀ ಕಾಕಾ ಕಾರಖಾನೀಸ್ ಅವರು ಅಸ್ಪೃಶ್ಯತೆ ನಿವಾರಣೆ, ದೇವದಾಸಿ ಪದ್ದತಿ ನಿರ್ಮೂಲನೆ, ಸಾಹಿತ್ಯ ರಚನೆ, ಸಂಸ್ಕೃತ ಪಾಂಡಿತ್ಯ ಹೊಂದಿದ್ದ ಒಬ್ಬ ಶ್ರೇಷ್ಠ ಆಧ್ಯಾತ್ಮಿಕ ಜೀವಿಯಾಗಿದ್ದರು. ವಚನ ಸಾಹಿತ್ಯ, ದಾಸ ಸಾಹಿತ್ಯವನ್ನು ನಿತ್ಯ ಪಠಿಸುತ್ತಿದ್ದರು ಎಂದರು.

ಉಪನ್ಯಾಸಕ ಪ್ರೊ.ಯು.ಎನ್. ಕುಂಟೋಜಿ ಮಾತನಾಡಿ, ದಲಿತ ಮಕ್ಕಳ ಅನುಕೂಲಕ್ಕಾಗಿ ವಸತಿ ನಿಲಯ ಆರಂಭಿಸಿದ ಸಂದರ್ಭದಲ್ಲಿ ವ್ಯವಸ್ಥೆ ಅವರನ್ನು ಕಾಡಿತು, ಅನೇಕರು ಅವರನ್ನು ಅರ್ಧ ದಾರಿಗೆ ಬಿಟ್ಟು ಹೋದರೂ ಸಹ ಛಲ ಬಿಡಲಿಲ್ಲ, ಅನೇಕ ವಿರೋಧ ವ್ಯಕ್ತವಾದರೂ ಸಹ ತಮ್ಮ ಸಂಕಲ್ಪ ಬಿಡಲಿಲ್ಲ, ಸಮಾಜ ಕಟ್ಟುವ ಯಜಮಾನನಾಗಿ ಕಾರ್ಯನಿರ್ವಹಿಸಿದರು ಎಂದರು.

ಯುವ ಭಾರತ ಸಮಿತಿ ಅಧ್ಯಕ್ಷ ಉಮೇಶ ಕಾರಜೋಳ, ಪತ್ರಕರ್ತ ವಾಸುದೇವ ಹೆರಕಲ್, ಕಾಕಾ ಕಾರಖಾನೀಸ್ ಟ್ರಸ್ಟ್ ಕಾರ್ಯದರ್ಶಿ ಕೆ.ಆರ್. ಸಂಕದ, ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಶರಣು ಸಬರದ, ಬಸವರಾಜ ಯಾದವಾಡ, ವಿಠ್ಠಲ ನಡುವಿನಕೇರಿ, ಪ್ರೊ.ಶರಣಗೌಡ ಪಾಟೀಲ, ರಾಜೇಂದ್ರಕುಮಾರ ಬಿರಾದಾರ, ವಿನೋದಕುಮಾರ ಮಣೂರ ಉಪಸ್ಥಿತರಿದ್ದರು. ಕಲಾವಿದೆ ಕೃತ್ತಿಕಾಕೊಳಲು ನುಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.