ADVERTISEMENT

ಕಾಂತರಾಜು ವರದಿ ಅಂಗೀಕಾರ ಆಗಲಿ: ಅಹಿಂದ ಮುಖಂಡರು

ವಿಜಯಪುರ ಜಿಲ್ಲಾ ಅಹಿಂದ ಮುಖಂಡರ ಒಕ್ಕೊರಲ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2025, 13:49 IST
Last Updated 15 ಏಪ್ರಿಲ್ 2025, 13:49 IST
ರಾಜು ಆಲಗೂರ
ರಾಜು ಆಲಗೂರ   

ವಿಜಯಪುರ: ಎಚ್‌.ಕಾಂತರಾಜು ಅಧ್ಯಕ್ಷರಾಗಿದ್ದ ಹಿಂದುಳಿದ ವರ್ಗಗಳ ಆಯೋಗವು 2015ರಲ್ಲಿ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಅಧಿಕೃತ ಮತ್ತು ವೈಜ್ಞಾನಿಕವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಒತ್ತಡಕ್ಕೆ ಮಣಿಯದೇ ವರದಿಯನ್ನು ಅಂಗೀಕರಿಸುವ ಮೂಲಕ ಇತಿಹಾಸ ಸೃಷ್ಟಿಸಬೇಕು ಎಂದು ವಿಜಯಪುರ ಜಿಲ್ಲಾ ಅಹಿಂದ ಮುಖಂಡರು ಒಕ್ಕೊರಲಿನಿಂದ ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ಅಹಿಂದ ಮುಖಂಡರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಪ್ರೊ.ರಾಜು ಆಲಗೂರ, ‘ಕಾಂತರಾಜು ವರದಿಯಲ್ಲಿ ಲೋಪಗಳಿಲ್ಲ. ಸಣ್ಣಪುಟ್ಟ ವ್ಯತ್ಯಾಸಗಳಿದ್ದರೆ ಸರ್ಕಾರ ಸರಿಪಡಿಸಲಿದೆ ಎಂದು ಈಗಾಗಲೇ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಹೀಗಾಗಿ ವರದಿಗೆ ಬಲಾಢ್ಯರು ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನೀಯ’ ಎಂದರು.

‘ಲಿಂಗಾಯತರು, ಒಕ್ಕಲಿಗ ಮುಖಂಡರು ಕಾಂತರಾಜು ವರದಿ ಅವೈಜ್ಞಾನಿಕವಾಗಿದೆ ಎನ್ನುತ್ತಿರುವುದು ಸರಿಯಲ್ಲ. ಆಕ್ಷೇಪಗಳಿದ್ದರೆ ಸರ್ಕಾರದ ಗಮನಕ್ಕೆ ತಂದು ಸರಿಪಡಿಸಿ, ವರದಿ ಜಾರಿಗೆ ಸಹಕರಿಸಬೇಕು. ಅಹಿಂದ ವರ್ಗದವರಾರೂ ಲಿಂಗಾಯತ, ಒಕ್ಕಲಿಗ ವಿರೋಧಿಯಲ್ಲ’ ಎಂದು ಹೇಳಿದರು.

ADVERTISEMENT

‘ರಾಜ್ಯದಲ್ಲಿ ಯಾವ ಜಾತಿಯವರ ಜನಸಂಖ್ಯೆ ಎಷ್ಟಿದೆಯೋ ಆ ಪ್ರಕಾರ ಸೌಲಭ್ಯಗಳು ನ್ಯಾಯಯುತವಾಗಿ ದೊರೆಯಬೇಕು. ಒಕ್ಕಲಿಗರಿಗೆ, ಲಿಂಗಾಯತರಿಗೆ ವರದಿ ಬಗ್ಗೆ ಅಪನಂಬಿಕೆ ಇದ್ದರೆ ಸರಿಪಡಿಸಿಕೊಂಡು, ನ್ಯಾಯ ಪಡೆಯಬಹುದು. ನಿಮಗೂ ನ್ಯಾಯ ಸಿಗಬೇಕು, ಅದಕ್ಕೆ ಯಾರ ವಿರೋಧವೂ ಇಲ್ಲ’ ಎಂದರು.  

‘ಕಾಂತರಾಜು ವರದಿಯನ್ನು ಬಿಜೆಪಿ ವಿರೋಧ ಮಾಡುವುದರಲ್ಲಿ ಅರ್ಥವಿಲ್ಲ. ಆದರೆ, ಸ್ವಾತಂತ್ರ್ಯ ಪೂರ್ವದಲ್ಲೇ ಮೈಸೂರು ಸಂಸ್ಥಾನದಲ್ಲಿ ಮೀಸಲಾತಿ ಜಾರಿಗೆ ತಂದು ದೇಶಕ್ಕೆ ಮಾದರಿಯಾಗಿದ್ದ ಒಡೆಯರ ಮನೆತನಕ್ಕೆ ಸೇರಿದ ಹಾಳಿ ಮೈಸೂರು ಸಂಸದರು ವರದಿಯನ್ನು ವಿರೋಧಿಸಿರುವುದು ವಿಷಾದನೀಯ. ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದ್ದ ರಾಜಮನೆತಕ್ಕೆ ಸೇರಿದವರು ವಿರೋಧಿಸುವುದರಲ್ಲಿ ಅರ್ಥವಿಲ್ಲ’ ಎಂದು ಹೇಳಿದರು.

‘ಒಂದು ವೇಳೆ ರಾಜ್ಯ ಸರ್ಕಾರ ಬಲಾಢ್ಯ ಜಾತಿಗಳ ಲಾಬಿಗೆ, ಒತ್ತಡಕ್ಕೆ ಮಣಿದು ವರದಿ ಜಾರಿಗೆ ಹಿಂದೇಟು ಹಾಕಿದರೆ ರಾಜ್ಯದಾದ್ಯಂತ ಬೀದಿಗಳಿದು ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಅಹಿಂದ ಮುಖಂಡರಾದ ಚಂದ್ರಶೇಖರ ಕೊಟಬಾಗಿ, ಸೋಮನಾಥ ಕಳ್ಳಿಮನಿ, ಹಮೀದ್ ಮುಶ್ರೀಫ್, ಎಸ್.ಎಂ. ಪಾಟೀಲ ಗಣಿಹಾರ, ಮಹಮ್ಮದ್ ರಫೀಕ್ ಟಪಾಲ್ ಎಂಜಿನಿಯರ್‌, ಎಂ.ಸಿ. ಮುಲ್ಲಾ, ಪ್ರೊ.ಯಂಕಂಚಿ, ವಸಂತ ಹೊನಮೋಡೆ, ಅಡಿವೆಪ್ಪ ಸಾಲಗಲ್ ಇದ್ದರು.

ಚುನಾವಣೆ ಪ್ರಣಾಳಿಕೆಯಲ್ಲೇ ಜಾತಿ ಗಣತಿ ಜಾರಿ ಮಾಡುವುದಾಗಿ ಕಾಂಗ್ರೆಸ್ ಹೇಳಿದೆ. ಹೀಗಿರುವಾಗ ಪಕ್ಷದ ಶಾಸಕರು ಸಚಿವರು ಮುಖಂಡರು ವಿರೋಧಿಸುವುದು ಸರಿಯಲ್ಲ
ಪ್ರೊ.ರಾಜು ಆಲಗೂರ ಮಾಜಿ ಶಾಸಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.