ADVERTISEMENT

ಕೆಎಸ್‌ಆರ್‌ಟಿಸಿ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 14:23 IST
Last Updated 30 ಸೆಪ್ಟೆಂಬರ್ 2020, 14:23 IST
ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೆ.ಎಸ್.ಆರ್.ಟಿ.ಸಿ. ಸ್ಟ್ಯಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು
ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೆ.ಎಸ್.ಆರ್.ಟಿ.ಸಿ. ಸ್ಟ್ಯಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು   

ವಿಜಯಪುರ: ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೆ.ಎಸ್.ಆರ್.ಟಿ.ಸಿ. ಸ್ಟ್ಯಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್ ಪದಾಧಿಕಾರಿಗಳು ವ್ಯವಸ್ಥಾಪಕ ನಿರ್ದೇಶಕರಿಗೆ ಬುಧವಾರ ಮನವಿ ಸಲ್ಲಿಸಿದರು.

ಯೂನಿಯನ್ ಪ್ರಧಾನ ಕಾರ್ಯದರ್ಶಿ ಐ.ಐ. ಮುಶ್ರೀಫ್‌ ಮಾತನಾಡಿ, ವಿಭಾಗದ ಎಲ್ಲ ಬಸ್‌ ನಿಲ್ದಾಣಗಳಲ್ಲಿ ಎರಡು ಪಾಳಿಗಳಲ್ಲಿ ಹಾಗೂ ವಿಜಯಪುರ ನಗರ ಸಾರಿಗೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಮಾಹಿತಿಗಾಗಿ ಮತ್ತು ಮಹಿಳಾ ಪ್ರಯಾಣಿಕರ ಹಿತದೃಷ್ಟಿಯಿಂದ ಜನದಟ್ಟಣೆ ಸ್ಥಳಗಳನ್ನು ಗುರುತಿಸಿ ನಗರ ಸಾರಿಗೆ ಸಂಚಾರ ನಿಯಂತ್ರಕರನ್ನು ನಿಯೋಜಿಸಬೇಕು ಎಂದು ಆಗ್ರಹಿಸಿದರು.

ವಿಭಾಗದಲ್ಲಿ ಸಾಕಷ್ಟು ಸಂಚಾರ ನಿಯಂತ್ರಕರ ನಿವೃತ್ತಿಯಿಂದ ಸಂಚಾರ ನಿಯಂತ್ರಕರ ಸಂಖ್ಯೆ ಕಡಿಮೆಯಾಗಿದ್ದು, ಕೂಡಲೇ ನಿರ್ವಾಹಕರಿಗೆ ಬಡ್ತಿ ನೀಡಬೇಕು. ವೈದ್ಯಕೀಯ ವೆಚ್ಚದ ಮರುಪಾವತಿಗಾಗಿ ಪ್ರತಿಯೊಂದು ವಿಭಾಗಕ್ಕೊಂದು ಗೌರವ ಫಾರ್ಮಾಸಿಸ್ಟರನ್ನು ನೇಮಕಗೊಳಿಸಿ ಕಾರ್ಮಿಕರ, ಅಧಿಕಾರಿಗಳ ವೈದ್ಯಕೀಯ ವೆಚ್ಚ ಬೇಗನೆ ಮರು ಪಾವತಿಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

ಹಲವು ವರ್ಷಗಳಿಂದ ಸಮವಸ್ತ್ರ ಪೂರೈಸಿರುವುದಿಲ್ಲ, ಕೂಡಲೆ ಪೂರೈಸಬೇಕು. ವಿಭಾಗ ಮಟ್ಟದಲ್ಲಿ ವರ್ಗಾವಣೆಗಾಗಿ ಸಾಕಷ್ಟು ಜನ ಅರ್ಜಿ ಸಲ್ಲಿಸಿದ್ದು, ಅವರ ವರ್ಗಾವಣೆ ಮಾಡಲು ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಅದಿಕಾರ ನೀಡಬೇಕು ಎಂದು ಆಗ್ರಹಿಸಿದರು.

ಸಮಿತಿಯ ಅಧ್ಯಕ್ಷ ಶಿವಾಜಿ ರಜಪೂತ, ಕಾರ್ಯಾಧ್ಯಕ್ಷ ಟಿ.ಡಿ.ಬೆಳಗಲ್, ಬಿ.ಎಂ.ತೇರದಾಳ, ಎನ್.ಎಸ್.ಸೌದಾಗರ, ಎನ್.ಎಸ್. ಹುಂಡೇಕಾರ, ಎಂ.ಎಂ.ಮುಲ್ಲಾ, ಶರಣಪ್ಪ ಅಥಣಿ, ಅರವಿಂದ ಶಹಾಪೇಟಿ, ಎಂ.ಎಲ್. ಚೌಧರಿ, ಹಿಂಗಮೊರೆ, ಐ.ಎಸ್.ಮಾಣಿಕ, ಎಂ.ಎ. ಬಿಜಾಪುರ, ವಸೀಂ ಪಟೇಲ, ಡಿ.ಎನ್. ಚಪ್ಪರಬಂದ, ಇರ್ಷಾದ್‌ ಸಾಲಗಾರ, ಎಚ್.ಡಿ.ಇನಾಮದಾರ, ಅಶೋಕ ಜಾಧವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.